

ವಿಜಯವಾಣಿ ಸುದ್ದಿಜಾಲ ಧಾರವಾಡ
ತಬಲಾ ವಾದಕ ಪಂ. ಜಿ.ಎಸ್. ಹಿರೇಮಠ ಸ್ಮರಣಾರ್ಥ ಭಾರತೀಯ ಸಂಗೀತ ವಿದ್ಯಾಲಯ, ಅಣ್ಣಾಜಿರಾವ್ ಶಿರೂರ ರಂಗ ಮಂದಿರ ಪ್ರತಿಷ್ಠಾನ ಹಾಗೂ ಪಂ. ಪಂಚಾಕ್ಷರಿ ಗವಾಯಿ ಸ್ಮೃತಿ ಸಂಗೀತ ಸಭಾ ಆಶ್ರಯದಲ್ಲಿ ಸೆ. 29ರಂದು ಸಂಜೆ 5.45ಕ್ಕೆ ಸ್ವರ ನಮನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಭಾರತೀಯ ಸಂಗೀತ ವಿದ್ಯಾಲಯ ಉಪಾಧ್ಯಕ್ಷ ಉಸ್ತಾದ್ ಶಫಿಕ್ ಖಾನ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಸಂತೋಷಕುಮಾರ ನಾಹರ್ ಮತ್ತು ಉಸ್ತಾದ್ ಶಫಿಕ್ ಖಾನ್ ಅವರ ಸಿತಾರ್-ವಯೋಲಿನ್ ಜುಗಲ್ಬಂದಿ ಏರ್ಪಡಿಸಲಾಗಿದೆ. ಪಂ. ರಾಜೇಂದ್ರ ನಾಕೋಡ ತಬಲಾ ಸಾಥ್ ನೀಡಲಿದ್ದಾರೆ. ಬಳಿಕ ಪಂ. ಎಂ. ವೆಂಕಟೇಶಕುಮಾರ ಗಾಯನ ಪ್ರಸ್ತುತಪಡಿಸಲಿದ್ದು, ಗುರುಪ್ರಸಾದ ಹೆಗಡೆ ಹಾಮೋರ್ನಿಯಂನಲ್ಲಿ ಹಾಗೂ ಶ್ರೀಧರ ಮಾಂಡ್ರೆ ತಬಲಾ ಸಾಥ್ ನೀಡಲಿದ್ದಾರೆ ಎಂದರು.
ಪಂ. ಜಿ.ಎಸ್. ಮಠ ಅವರು ಪಂಚಾಕ್ಷರಿ ಗವಾಯಿಗಳ ಗರಡಿಯಲ್ಲಿ ಪಳಗಿದವರು. ಕನ್ನಡ, ಮರಾಠಿ ನಾಟಕ ಕಂಪನಿಗಳಲ್ಲಿ ತಬಲಾ ಸೇವೆ ಸಲ್ಲಿಸಿದ್ದರು. 18 ವರ್ಷಗಳ ಕಾಲ ಆಕಾಶವಾಣಿ ನಿಲಯ ಕಲಾವಿದರಾಗಿ ಸೇವೆ ಸಲ್ಲಿಸಿದ್ದು, ಸಂಗೀತ ಕ್ಷೇತ್ರದಲ್ಲಿ ಅವಿರತ ಕೊಡುಗೆ ನೀಡಿದ ಅವರ ಸ್ಮರಣೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಬಿ.ಎಸ್. ಮಠ, ಅಕ್ಕಮಹಾದೇವಿ ಹಿರೇಮಠ, ಪ್ರವಿಣ ಹೂಗಾರ ಇದ್ದರು.