ಸ್ವಪ್ನ ಚಂದ್ರಶೇಖರ್ ಹರಿಹರದಹಳ್ಳಿ ಗ್ರಾಪಂ ಆಧ್ಯಕ್ಷೆ

23 ckm 2
ಚಿಕ್ಕಮಗಳೂರು ತಾಲೂಕು ಹರಿಹರದಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಸ್ವಪ್ನಾ ಚಂದ್ರಶೇಖರ್ ಅವರನ್ನು ಸಹ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಅಭಿನಂದಿಸಿದರು. ದೀಪಕ್ ದೊಡ್ಡಯ್ಯ, ಯಶ್ವಂತ್‌ರಾಜ್, ದಿನೇಶ್ ಕುಮಾರ್, ಮಂಜೇಗೌಡ, ಮುಳ್ಳೇಗೌಡ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ತಾಲೂಕಿನ ಹರಿಹರದಹಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸ್ವಪ್ನ ಸಿ.ವಿ.ಚಂದ್ರಶೇಖರ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಮೀಸಲಾತಿಗೆ ನಿಗಧಿಯಾಗಿದ್ದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ವಪ್ನ ಚಂದ್ರಶೇಖರ್ ಹೊರತುಪಡಿಸಿ ಬೇರೆ ಯಾರೂ ಉಮೇದುವಾರಿಕೆ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಶಿವಕುಮಾರ್ ಅಧ್ಯಕ್ಷರ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಬಿಜೆಪಿ ಮುಖಂಡ ದೀಪಕ್‌ದೊಡ್ಡಯ್ಯ, ನೂತನ ಅಧ್ಯಕ್ಷರು ಅಧಿಕಾರದ ಆಸೆಗೆ ಜೋತುಬೀಳದೇ ಸಮಾನ ಮನಸ್ಥಿತಿ ಹೊಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಅಭಿವೃದ್ದಿಗೆ ಒತ್ತು ಕೊಟ್ಟು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದೆ. ಆದರೆ ಇಲ್ಲಿನ ಸದಸ್ಯರುಗಳ ಸಹಕಾರದಿಂದ ಪರಿಶಿಷ್ಟ ಜಾತಿ ಮಹಿಳೆಗೆ ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಮಾಡಿಕೊಟ್ಟು ಪಂಚಾಯಿತಿ ಮಾದರಿಯಾಗಿದೆ. ಕೆಲವೆಡೆ ಮೀಸಲಾತಿ ಬಂದರೂ ಅಧಿಕಾರ ಪಡೆಯಲು ಹಲವರು ಕಸರತ್ತು ನಡೆಯುತ್ತಾರೆ ಎಂದು ಹೇಳಿದರು.
ಹರಿಹರದಹಳ್ಳಿ ಗ್ರಾಪಂ ಸದಸ್ಯರುಗಳು ಅಧಿಕಾರಕ್ಕೆ ಆಸೆಪಡದವರು. ಹೀಗಾಗಿ ದೊರೆತ ಅವಕಾಶದಲ್ಲಿ ನೂತನ ಅಧ್ಯಕ್ಷರು ಗ್ರಾಮದ ಸಮಗ್ರ ಅಭಿವೃಧ್ದಿಗೆ ಶ್ರಮಿಸಿ ಸರ್ಕಾರದ ಸೌಲಭ್ಯಗಳನ್ನು ತಾರತಮ್ಯವೆಸಗದೇ ಸಮಾನವಾಗಿ ಪೂರೈಸಬೇಕು ಎಂದು ಹೇಳಿದರು.
ನೂತನ ಅಧ್ಯಕ್ಷೆ ಸ್ವಪ್ನ ಸಿ.ವಿ.ಚಂದ್ರಶೇಖರ್ ಮಾತನಾಡಿ, ಸಿಕ್ಕಿರುವ ಅವಕಾಶವನ್ನು ಜನಸಾಮಾನ್ಯರ ಅಭಿವೃದ್ದಿ ಪೂರಕವಾಗಿ ಕೆಲಸ ನಿರ್ವಹಿಸುವುದರಲ್ಲಿ ತೊಡಗುತ್ತೇನೆ. ಸದಸ್ಯರ ಸಹಕಾರ ಹಾಗೂ ಗ್ರಾಮಸ್ಥರನ್ನು ಪರಿಗಣನೆಗೆ ತೆಗೆದುಕೊಂಡು ಸಮಗ್ರ ಅಭಿವೃಧ್ದಿಗೆ ಒತ್ತು ನೀಡುತ್ತೇನೆ ಎಂದರು.
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನೇಶ್‌ಕುಮಾರ್ ಮಾತನಾಡಿ, ಹರಿಹರದಹಳ್ಳಿ ಹಾಗೂ ಮುಗುಳುವಳ್ಳಿ ಗ್ರಾಪಂ ಒಂದೇ ಮನಸ್ಥಿತಿ ಹೊಂದಿರುವ ಸದಸ್ಯರುಗಳ ಬೆಂಬಲವಿದೆ. ಸರ್ವರಿಗೂ ಸಮಾನ ಅವಕಾಶ ಕಲ್ಪಿಸಲು ಮುಂದಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಯಶ್ವಂತ್‌ರಾಜ್, ಸದಸ್ಯರಾದ ಜಯಂತಿ, ಜೆ.ಎನ್.ಮಂಜೇಗೌಡ, ಮುಳ್ಳೇಗೌಡ, ಲಲಿತ ಶಿವಾನಂದ್, ಕವಿತಾ ಶಿವರಾಮ್, ಶಾರದ ಮಾಸ್ತೇಗೌಡ, ಎಚ್.ಎಂ. ಮಂಜೇಗೌಡ, ಪಿಡಿಓ ಬಿ.ಎಸ್.ಕುಮಾರ್, ಬಿಜೆಪಿ ಮುಖಂಡ ಕುರುವಂಗಿ ವೆಂಕಟೇಶ್, ಗ್ರಾಮಸ್ಥರಾದ ಬಲರಾಮ್, ಧರ್ಮೇಗೌಡ, ಮಂಜೇಗೌಡ, ಜಯಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net