

ವಿರಾಜಪೇಟೆ: ವಿದ್ಯಾರ್ಥಿ ಜೀವನದಲ್ಲಿ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡರೆ ಉತ್ತಮ ಪ್ರಜೆಯಾಗಬಹುದು ಎಂದು ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ್‌ಜಿ ಮಹಾರಾಜ್ ತಿಳಿಸಿದರು.
ಪಟ್ಟಣದ ಕಾವೇರಿ ಪದವಿ, ಪದವಿಪೂರ್ವ ಕಾಲೇಜಿನ ಕೌಸ್ತುಭ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೂತಂಡ ಪೂವಯ್ಯ ಮತ್ತು ಪಾರ್ವತಿ ಪೂವಯ್ಯ ಸ್ಮರಣಾತ್ಮಕ 25ನೇ ವರ್ಷದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರ ಕುರಿತು ಭಾಷಣದ ಮೂಲಕ ಅವರನ್ನು ನೆನೆಸುತ್ತಿರುವುದು ಸಂತಸ ತಂದಿದೆ. ವಿವೇಕಾನಂದರು ತಮ್ಮ ಅತಿ ಕಿರಿಯ ವಯಸ್ಸಿನಲ್ಲಿಯೇ ಯಾರು ಮಾಡದಂತಹ ಸಾಧನೆಗಳನ್ನು ಮಾಡಿ ಪ್ರಪಂಚಕ್ಕೆ ಮೇರು ವ್ಯಕ್ತಿಯಾಗಿದ್ದಾರೆ. ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡರೆ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ದಿ.ಕೂತಂಡ ಪೂವಯ್ಯ ಮತ್ತು ಪಾರ್ವತಿ ಪೂವಯ್ಯ ಅವರ ಮಗ ಉತ್ತಪ್ಪ ಮಾತನಾಡಿ, ಪ್ರತಿ ವರ್ಷ ಸ್ವಾಮಿ ವಿವೇಕಾನಂದರ ಬಗ್ಗೆ ಕಾಲೇಜು ಮಟ್ಟದಲ್ಲಿ ಭಾಷಣ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ಯವಜನರಲ್ಲಿ ವಿವೇಕಾನಂದರ ಜೀವನ ಸಂದೇಶಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಪುಲ್ಲಂಗಡ ರೋಹಿಣಿ ಭೀಮಯ್ಯ, ಮುಕ್ಕಾಟಿರ ಕಾಳಮ್ಮ ಕಾರ್ಯಪ್ಪ, ಬಯವಂಡ ಪಿ.ಸುಶೀಲಾ ಅವರನ್ನು ಸನ್ಮಾನಿಸಲಾಯಿತು.
ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎ.ಎಂ.ಕಮಲಾಕ್ಷಿ, ಪಿಯು ಕಾಲೇಜಿನ ಪ್ರಾಂಶುಪಾಲ ಎನ್.ಎಂ.ನಾಣಯ್ಯ, ಉಪನ್ಯಾಸಕಿ ರೇವತಿ ಇದ್ದರು.
ವಿಜೇತರು: ಪದವಿ ಮತ್ತು ಸ್ನಾತಕೋತ್ತರ ಕನ್ನಡ ವಿಭಾಗ ಭಾಷಣದಲ್ಲಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿ ವಿನಯ್ (ಪ್ರ) ವಿರಾಜಪೇಟೆ ಕಾವೇರಿ ಕಾಲೇಜಿನ ವಿನಿಷಾ (ದ್ವಿ), ವಿರಾಜಪೇಟೆಯ ಸಂತ ಅನ್ನಮ್ಮ ಕಾಲೇಜು ಕೃತಿ ಮತ್ತು ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಅನ್ವರ್ (ತೃ) ಸ್ಥಾನ ಪಡೆದರು.
ಇಂಗ್ಲಿಷ್ ವಿಭಾಗ ಭಾಷಣದಲ್ಲಿ ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜು ಹುದಾ ತಮ್ಮನ್ನ (ಪ್ರ), ಗೋಣಿಕೊಪ್ಪ ಕಾವೇರಿ ಕಾಲೇಜು ರಿಯಾ (ದ್ವಿ), ಯಶಿಕಾ (ತೃ) ಸ್ಥಾನ ಪಡೆದುಕೊಂಡರು.
ಪದವಿ ಪೂರ್ವ ಕನ್ನಡ ವಿಭಾಗ ಭಾಷಣದಲ್ಲಿ ರಮ್ಯಾ (ಪ್ರ), ಪ್ರಿಯಾ (ದ್ವಿ), ಶ್ರುತಿ (ತೃ) ಸ್ಥಾನ ಹಾಗೂ ಇಂಗ್ಲಿಷ್ ವಿಭಾಗ ಭಾಷಣದಲ್ಲಿ ಶ್ರೀರಕ್ಷ (ಪ್ರ), ಪೂವಮ್ಮ (ದ್ವಿ), ಜಶಾನ್ ಬೋಪಣ್ಣ (ತೃ) ಸ್ಥಾನ ಪಡೆದುಕೊಂಡರು.