

ತುಮಕೂರು : ಗಾಂಧೀಜಿ ಸಿದ್ಧಾಂತದ ಮೇಲೆ ನಡೆಯುತ್ತಿರುವ ವಿನಯ ಗುರೂಜಿ ನಮಗೆಲ್ಲ ಪ್ರೇರಣೆಯಾಗಿದ್ದು, ಧಾರ್ಮಿಕ ಕ್ಷೇತ್ರದಲ್ಲಿ ಬಹುದೊಡ್ಡ ಬದಲಾವಣೆಯ ಕ್ರಾಂತಿಯಾಗಲಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜಿಗೆ ಶುಕ್ರವಾರ ಭೇಟಿ ನೀಡಿದ್ದ ಕೊಪ್ಪ ಗೌರಿಗದ್ದೆ ಆಶ್ರಮದ ವಿನಯಗುರೂಜಿ ಅವರನ್ನು ಅಭಿನಂದಿಸಿ, ಆಶೀರ್ವಾದ ಪಡೆದ ನಂತರ ಮಾತನಾಡಿದ ಅವರು, ಧಾರ್ಮಿಕ ಕ್ಷೇತ್ರದಲ್ಲಿ ಗಾಂಧೀಜಿ ಸಿದ್ಧಾಂತದ ಅಡಿಪಾಯದಲ್ಲಿ ಗುರೂಜಿ ಕೆಲಸ ಮಾಡುತ್ತಿದ್ದಾರೆ ಎಂದರು.
ಗಾಂಧೀಜಿ ಸರ್ವಸ್ವವನ್ನೂ ತ್ಯಾಗ ಮಾಡಿ ದೇಶಕ್ಕಾಗಿ ಸ್ವಾತಂತ್ರ್ಯ ತಂದುಕೊಡುವ ಕೆಲಸದಲ್ಲಿ ಯಶಸ್ವಿ ಕಂಡರು, ಅತ್ಯಂತ ದೊಡ್ಡ ಚಕ್ರಾಧಿಪತ್ಯವಾದಂತಹ ಬ್ರಿಟಿಷ್ ಸಾಮ್ರಾಜ್ಯ ಎದುರು ಹಾಕಿಕೊಂಡು ಅವರಿಂದ ಸ್ವಾತಂತ್ರ್ಯ ತಂದು ಕೊಟ್ಟವರು ಗಾಂಧೀಜಿ. ಅವರ ಸಿದ್ಧಾಂತದ ಮೇಲೆ ಗುರೂಜಿ ನಡೆಯುತ್ತಿರುವುದು ನಮಗೆಲ್ಲರಿಗೂ ಪ್ರೇರಣೆ ಎಂದರು.
ವಿನಯ ಗುರೂಜಿ ಅವರಿಂದ ಅನೇಕ ಸತ್ಕಾರ್ಯಗಳನ್ನು ನಿರೀಕ್ಷೆ ಮಾಡಬಹುದು, ಆಧುನಿಕ ಜಗತ್ತಿನಲ್ಲಿ ಇದೊಂದು ರೀತಿಯಲ್ಲಿ ವಿಸ್ಮಯ. ಆಧುನಿಕ ಜಗತ್ತು ವಿಜ್ಞಾನದಲ್ಲಿ ನಂಬಿಕೆಯಲ್ಲಿ ಇರುವಂತಹದ್ದು. ಗುರೂಜಿ ಕೂಡ ಇಂಜಿನಿಯರಿಂಗ್ ಓದಿ, ಫ್ರಾನ್ಸ್‌ನಲ್ಲಿ ಕೆಲಸ ಮಾಡಿ ಆಧುನಿಕ ಜಗತ್ತನ್ನು ಅರಿತಿರುವಂತಹವರು ಎಂದರು.
ಮೆಡಿಕಲ್ ಕಾಲೇಜಿನ ವೈದ್ಯರು, ವಿದ್ಯಾರ್ಥಿಗಳೆಲ್ಲರನ್ನೂ ವಿನಯ ಗುರೂಜಿ ಆಶೀರ್ವದಿಸಿದರು. ಅಲ್ಲದೆ ಕಾಲೇಜಿಗೆ ಒಳ್ಳೆಯದಾಗಲಿ, ಇನ್ನು ಹೆಚ್ಚು ಜನರ ಸೇವೆ ಮಾಡುವಂತಾಗಲಿ ಎಂದು ಆಶಿಸಿದರು.
ಪರಮೇಶ್ವರ ದಂಪತಿಯನ್ನು ಆಶೀರ್ವದಿಸಿ ಮಾತನಾಡಿದ ವಿನಯಗುರೂಜಿ, ಕಾಂಗ್ರೆಸ್‌ನಲ್ಲಿ ಗಾಂಧಿವಾದ, ಕರ್ಮ ಸಿದ್ಧಾಂತ ಪ್ರತಿ ಕಣಕಣದಲ್ಲೂ ಆಚರಣೆಯಲ್ಲಿಟ್ಟುಕೊಂಡವರಲ್ಲಿ ಪರಮೇಶ್ವರ್ ಮೊದಲಿಗರು, ಕಾಲೇಜು ಕಟ್ಟಿ ಎಷ್ಟೋ ಬಡ ಮಕ್ಕಳಿಗೆ ವಿದ್ಯೆ ಕಲಿಸಿ, ಉದ್ಯೋಗ ದೊರಕಿಸಿಕೊಟ್ಟಿದ್ದಾರೆ ಎಂದರು.