ಮಂಗಳೂರಿನಲ್ಲಿ ಧರ್ಮ ಸಭೆ ; ರಾಜ್ಯ ಸರ್ಕಾರ ಹಿಂದೂ ವಿರೋಧಿ ನಡೆ ಕೈ ಬಿಡದಿದ್ದರೆ ಉಪವಾಸ ಸತ್ಯಾಗ್ರಹ

swamiji 2
Published on

ಮಂಗಳೂರು: ರಾಜ್ಯ ಸರ್ಕಾರ ಹಿಂದೂ ವಿರೋಧಿ ನಡೆ ಕೈ ಬಿಡದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಒಡಿಯೂರು ಗುರುದೇವಾನಂದ ಸ್ವಾಮೀಜಿ ಹಾಗೂ ಗುರುಪುರ ವಜ್ರದೇಹಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಹಿಂದೂ ವಿರೋಧಿ ನಡೆಯ ವಿರುದ್ಧ ಮಂಗಳೂರಿನಲ್ಲಿ ಧರ್ಮ ಸಭೆ ವಿಚಾರ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸ್ವಾಮೀಜಿಗಳು, ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ಕಾಯ್ದೆ ವಾಪಾಸ್ ನಿರ್ಧಾರ ಕೈ ಬಿಡಲು‌ ಆಗ್ರಹಿಸಿದ್ದಾರೆ.

ಸರ್ಕಾರಕ್ಕೆ ಗೋ ಹತ್ಯೆ ನಿಷೇಧ ಕಾಯ್ದೆ ವಾಪಾಸ್ ಪಡೆಯದಂತೆ ಮನವಿ ಮಾಡಲು‌ ನಿರ್ಧರಿಸಲಾಗಿದ್ದು, ವಾಪಾಸ್ ಪಡೆದರೆ ಸಮಾಜದಲ್ಲಿ ಸಂಘರ್ಷವಾಗಬಹುದು. ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಮತಾಂತರ ನಿಷೇಧ ಕಾಯ್ದೆ ರದ್ದತಿ ನಿರ್ಧಾರ ಖಂಡನೀಯ. ಗೋ ಹತ್ಯೆ‌ ನಿಷೇಧ ರದ್ದು ಮಾಡಿದರೆ ಗೋ ಸಂತತಿ ನಾಶವಾಗಲಿದೆ. ಈ ನಿರ್ಣಯ ಹಿಂದೂ ವಿರೋಧಿ ನಿರ್ಣಯ. ಇದರ ವಿರುದ್ದ ಹೋರಾಟಕ್ಕೆ ಸಿದ್ಧ. ನಿರ್ಧಾರ ವಾಪಾಸ್ ಪಡೆಯದಿದ್ದರೆ ಸಂತರಿಂದ ಹೋರಾಟ ನಡೆಸಲಾಗುವುದು. ಅದಕ್ಕೂ ಬಗ್ಗದಿದ್ದರೆ ಸಂತ ಸಮೂಹ ಉಪವಾಸ ಸತ್ಯಾಗ್ರಹ ಮಾಡಲಿದೆ ಎಂದು ಸ್ವಾಮೀಜಿಗಳು ತಿಳಿಸಿದರು.

ಸರ್ಕಾರ ವಾಪಾಸ್ ಪಡೆಯಲ್ಲ ಎಂಬ ವಿಶ್ವಾಸವಿದೆ. ಇಲ್ಲದಿದ್ದರೆ ಉಪವಾಸ ನಿಶ್ಚಿತ. ಸಂತರು ಉಪವಾಸ ಕೂತರೆ ಹಿಂದೂ ಸಮಾಜ ಎದ್ದೇಳಲಿದೆ. ಆದ್ದರಿಂದ ಸರ್ಕಾರ ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ನಿರ್ಧಾರ ವಾಪಾಸ್ ಪಡೆಯಲಿ. ರಾಜ್ಯದ ಶಾಂತಿ ಐಕ್ಯತೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಆ್ಯಂಟಿ ಕಮ್ಯೂನಲ್ ವಿಂಗ್ ಮೂಲಕ ಹಿಂದೂ ಯುವಕರ ಹತ್ತಿಕ್ಕುವ ಪ್ರಯತ್ನ ನಡೆಯುತ್ತಲಿದೆ. ಅಷ್ಟೇ ಅಲ್ಲ, ಹಿಂದೂ ಯುವಕರನ್ನ ಗಡಿಪಾರು ಮಾಡುವ ಕೆಲಸಗಳು ನಡೆಯುತ್ತಿದೆ ಎಂದು ಸ್ವಾಮೀಜಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಸಂತ ಸಮುದಾಯ ತೀವ್ರ ಹೋರಾಟದ ನಿರ್ಣಯಕ್ಕೆ ಬಂದಿದೆ. ಸೆಪ್ಟೆಂಬರ್ ಹತ್ತರ ನಂತರ ರಾಜ್ಯಪಾಲರ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. ಆ ಬಳಿಕ ಕೇಂದ್ರ ಗೃಹ ಸಚಿವರು ಹಾಗೂ ಪ್ರಧಾನಿಯನ್ನು ಭೇಟಿಯಾಗಲು ನಿರ್ಧಾರ ಮಾಡಲಾಗಿದೆ ಎಚ್ಚರಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾಣಿಲ ಸ್ವಾಮೀಜಿ, ಕೇಮಾರು ಸೇರಿ ಹಲವು ಸಂತರು, ವಿಎಚ್ಪಿ, ಭಜರಂಗದಳ ಹಾಗೂ ಆರ್.ಎಸ್.ಎಸ್ ಪ್ರಮುಖರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net