

ಹುಬ್ಬಳ್ಳಿ : ಆಧುನಿಕತೆ, ಪಾಶ್ಚಿಮಾತ್ಯ ಪ್ರಭಾವದಿಂದಾಗಿ ನಮ್ಮ ಭವ್ಯ ಸಂಸ್ಕೃತಿ, ಧರ್ಮ, ಆಚಾರ ವಿಚಾರಗಳು ಗೌಣವಾಗುತ್ತವೆ. ಇಂತಹ ಸಂದರ್ಭದಲ್ಲಿ ಇವುಗಳ ಉಳಿವು ಸದ್ಭಕ್ತರಿಂದ ಮಾತ್ರ ಸಾಧ್ಯವಿದೆ ಎಂದು ಸುಳ್ಳ ಪಂಚಗ್ರಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸುಳ್ಳ ಗ್ರಾಮದ ಶ್ರೀ ಗುರು ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಗ್ರಾಮದ ಗುರು, ಹಿರಿಯರು ಹಾಗೂ ಧಾರವಾಡ ವೀರಶೈವ ಜಂಗಮ ಸಂಸ್ಥೆ ಸಂಯುಕ್ತವಾಗಿ ಷ.ಬ್ರ. ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ಸುಳ್ಳ ಪಂಚಗ್ರಹ ಹಿರೇಮಠಕ್ಕೆ ಪಟ್ಟಾಭಿಷಕ್ತರಾಗಿ 10 ವರ್ಷ ಪೂರೈಸಿದ ನಿಮಿತ್ಯ ಶುಕ್ರವಾರ ಆಯೋಜಿಸಿದ್ದ 10 ನೇ ವರ್ಷದ ಪಟ್ಟಾಧಿಕಾರ ವರ್ಧಂತಿ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಭಕ್ತರಿಂದ ಮಾತ್ರ ಮಠ, ಮಂದಿರಗಳು ಉಳಿದು, ಬೆಳೆಯಲು ಸಾಧ್ಯ. ಪರಂಪರೆ, ಆಚಾರ ವಿಚಾರಗಳನ್ನು ಪಾಲಕರು ಮಕ್ಕಳಿಗೆ ಕಲಿಸಬೇಕು. ಸಂಸ್ಕಾರ ಕಲಿಸುವುದೇ ಶ್ರೇಷ್ಠ ಶಿಕ್ಷಣ. ಇಂದು ವೀರಶೈವ ಲಿಂಗಾಯತ ಧರ್ಮದ ಆಚಾರ, ಸಂಸ್ಕೃತಿ ಕಡಿಮೆ ಆಗುತ್ತಿದೆ. ಇದರ ಬಗ್ಗೆ ಎಲ್ಲರೂ ಜಾಗೃತಿ ವಹಿಸಬೇಕು ಎಂದರು.
ದಾನ, ಧರ್ಮ ಮಾಡುವ ಕೈಗಳು, ದೈವಿ ಭಕ್ತಿಯ ಮನಸ್ಸುಗಳು ಮತ್ತು ಧಮಾಭಿಮಾನಿಗಳು ಇರುವವರೆಗೆ ವೀರಶೈವ ಲಿಂಗಾಯತ ಧರ್ಮ ಬೆಳೆದು ಬರುತ್ತದೆ. ಎಲ್ಲರಲ್ಲೂ ಸಂಸ್ಕಾರ ಮುಖ್ಯ ಎಂದು ತಿಳಿಸಿದರು.
ವೀರಶೈವ ಜಂಗಮ ಸಂಸ್ಥೆ ಅಧ್ಯಕ್ಷ ಡಾ.ಸುರೇಶ ಹಿರೇಮಠ, ಸಣಕಲ್ಲಪ್ಪ ಒಂಟಿ, ಅಡವಯ್ಯ ಅರಳಿಮಟ್ಟಿಮಠ ಸೇರಿದಂತೆ ಇತರರು ಪೂಜ್ಯರಿಗೆ ನುಡಿ ನಮನ ಸಲ್ಲಿಸಿದರು.
ವೀರಶೈವ ಜಂಗಮ ಸಂಸ್ಥೆ ಉಪಾಧ್ಯಕ್ಷ ಮೃತ್ಯುಂಜಯ ಕೋರಿಮಠ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪದಾಧಿಕಾರಿಗಳು, ಗ್ರಾಮದ ಪ್ರಮುಖರು ವೇದಿಕೆಯಲ್ಲಿದ್ದರು.
ಗ್ರಾಮದ ಹಿರಿಯರಾದ ಅರ್ಜುನಪ್ಪ ಮೆಣಸಿನಕಾಯಿ, ಮಲ್ಲಿಕಾರ್ಜುನ ಅಸುಂಡಿ, ಹೊಳೆಪ್ಪ ಪೂಜಾರ, ಸತೀಶ ದೇಮಕ್ಕನವರ, ಸಣಕಲ್ಲಪ್ಪ ಒಂಟಿ, ಮಲ್ಲಿಕಾಜಿಗೌಡ ಹಿರೇಗೌಡರ, ನಿಂಗಪ್ಪ ಶಿವಳ್ಳಿ, ಸಿದ್ರಾಮಪ್ಪ ದೇಮಕ್ಕನವರ, ಮಹಾದೇವ ಪೂಜಾರ, ಪ್ರದೀಪ ದೇಮಕ್ಕನವರ, ದೊಡ್ಡಯಲ್ಲಪ್ಪ ನೆರ್ತಿ ಹಾಗೂ ಇತರರು ಭಾಗವಹಿಸಿದ್ದರು.
ವೇದಮೂರ್ತಿ ಸಿದ್ಧರಾಮಯ್ಯ ಚನ್ನವೀರಯ್ಯ ಹಿರೇಮಠ ಸ್ವಾಗತಿಸಿದರು. ಗ್ರಾಮದ ಮುಖಂಡ ಸಣಕಲ್ಲಪ್ಪ ಒಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ರಾಮಯ್ಯ ಹಿರೇಮಠ ನಿರೂಪಿಸಿದರು. ಮಂಜುನಾಥ ಹಿರೇಮಠ ವಂದಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಷ.ಬ್ರ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳ ಪಾದಪೂಜೆ ಮಾಡಲಾಯಿತು. ನಂತರ ವಿವಿಧ ಸಂಘ, ಸಂಸ್ಥೆಗಳು, ಗ್ರಾಮಸ್ಥರು, ಭಕ್ತರು ಭಕ್ತಿಯ ಗೌರವ ಸಮರ್ಪಣೆ ಮಾಡಿದರು.
ಮಹಾಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.