

ಹೊಸದುರ್ಗ: ಬುದ್ಧ ಹಾಗೂ ಬಸವಣ್ಣ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಆತ್ಮಕಲ್ಯಾಣ ಸಾಧಿಸಿ ಲೋಕಕ್ಕೆ ಬೆಳಕನ್ನು ಕರುಣಿಸಿದರು. ಅವರ ತತ್ವಗಳ ಮೇಲೆ ಸಮಾಜ ಮುನ್ನಡೆದರೆ ಮತ್ತೆ ಕಲ್ಯಾಣ ರಾಜ್ಯ ಸಾಕಾರಗೊಳ್ಳುತ್ತದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರೀಲಂಕಾದ ಕೊಲಂಬೊ ನಗರದಲ್ಲಿ ಸೋಮವಾರ ಸಂಜೆ ರಾಷ್ಟ್ರೀಯ ಬಸವ ಪ್ರತಿಷ್ಠಾನ ದಶಮಾನೋತ್ಸವ ಆಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬುದ್ಧ ಬಸವರ ಬೆಳಕು ಉಪನ್ಯಾಸ ಹಾಗೂ ಚಿಂತನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಬುದ್ಧ ಹಾಗೂ ಬಸವಣ್ಣ ಮಾನವೀಯತೆಯುಳ್ಳ ಎರಡು ಧರ್ಮಗಳ ಸಂಸ್ಥಾಪಕರು. ಬುದ್ಧ ಬಿಹಾರದಲ್ಲಿ, ಬಸವಣ್ಣ ಕರ್ನಾಟಕದಲ್ಲಿ ಜನರ ಭಾಷೆಯಲ್ಲಿಯೇ ತಮ್ಮ ಧರ್ಮ ಬೋಧಿಸಿದರು. ಒಬ್ಬರು ಏಷ್ಯಾ ಖಂಡಕ್ಕೆ ಬೆಳಕಾದರೆ ಮತ್ತೊಬ್ಬರು ವಿಶ್ವಕ್ಕೆ ಬೆಳಕಾದರು. ಅವರಿಬ್ಬರೂ ಹೇಳಿದಂತೆ ಅರಿವು ಗುರುವಾದರೆ ಮಾತ್ರ ಆತ್ಮಸಾಕ್ಷಾತ್ಕಾರದ ದಾರಿ ಸಿಗುತ್ತದೆ ಎಂದರು.
ರಾಷ್ಟ್ರೀಯ ಬಸವ ಪ್ರತಿಷ್ಠಾನವು ಶ್ರೀಲಂಕಾದಲ್ಲಿ ಬುದ್ಧ-ಬಸವ ವಿಚಾರಗೋಷ್ಠಿ ಆಯೋಜಿಸಿರುವ ನೆನಪಿಗಾಗಿ ಇಲ್ಲಿ ಗ್ರಂಥಾಲಯ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಬೇಕು. ಗ್ರಂಥಾಲಯದಲ್ಲಿ ಬಸವಾದಿ ಶರಣರ ಸಾಹಿತ್ಯವನ್ನು ಇರಿಸುವ ಜತೆಗೆ ಬಸವಣ್ಣನ ಮೂರ್ತಿ ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಸಮಿತಿಯು ಯೋಚಿಸಬೇಕು ಎಂದು ತಿಳಿಸಿದರು.
ಸಾಹಿತಿ ರಂಜಾನ್ ದರ್ಗಾ ಮಾತನಾಡಿ, ಬುದ್ಧ ಹಾಗೂ ಬಸವಣ್ಣನ ಬದುಕಿನ ಕಾಲ ಬೇರೆಯಾಗಿದ್ದರೂ ಇಬ್ಬರ ತತ್ವ ಸಿದ್ಧಾಂತಗಳಲ್ಲಿ ಸಾಮ್ಯತೆ ಕಂಡುಬರುತ್ತದೆ. ಇಬ್ಬರ ಚಿಂತನೆಗಳು ಒಂದೇ ಆಗಿದ್ದವು. ಸಾಮಾಜಿಕ ಪರಿವರ್ತನೆಯ ಮೂಲ ಉದ್ದೇಶವನ್ನು ಇಬ್ಬರೂ ಹೊಂದಿದ್ದರು ಎಂದರು.
ಕಾರ್ಯಕ್ರಮಕ್ಕೆ ಮುನ್ನ ಶಿವಸಂಚಾರದ ಕಲಾವಿದರಾದ ನಾಗರಾಜ್ ಹಾಗೂ ದಾಕ್ಷಾಯಿಣಿ ವಚನ ಗೀತೆಗಳನ್ನು ಹಾಡಿದರು. ನಂತರ ಸಾಣೇಹಳ್ಳಿ ಶಿವಕುಮಾರ ಕಲಾಸಂಘದ ಕಲಾವಿದರು ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರು ರಚಿಸಿದ ಮರಣವೇ ಮಹಾನವಮಿ ನಾಟಕವನ್ನು ಅಭಿನಯಿಸಿದರು.
ಕಾರ್ಯಕ್ರಮದಲ್ಲಿ ತುಮಕೂರಿನ ಚಂದ್ರಶೇಖರ್ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಇಸ್ರೋ ಮಾಜಿ ಅಧ್ಯಕ್ಷ ಕಿರಣಕುಮಾರ್, ಚಿಂತಕ ಮಹೇಶ್ ಚಟ್ನಳ್ಳಿ, ಬಸವ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಇತರರಿದ್ದರು.
ಬುದ್ಧ ಹಾಗೂ ಬಸವಣ್ಣ ಜಾತಿ ನಂಬಿಕೆಗಳನ್ನು ಮೀರಿ ಸಮಾಜಕ್ಕೆ ಶಾಂತಿಯ ಅಮೃತ ನೀಡಿದ ಮಹಾತ್ಮರು. ಇಬ್ಬರೂ ಭಾರತದಲ್ಲಿಯೇ ಹುಟ್ಟಿದರೂ ಬುದ್ಧನ ವಿಚಾರಗಳು ದೇಶದ ಹೊರಗೂ ಹರಡಿದವು. ಆದರೆ ಬಸವಣ್ಣನ ವಿಚಾರಧಾರೆ ಸಮಾಜ ಪರಿವರ್ತನೆಯಲ್ಲಿ ಅತ್ಯಂತ ಗಟ್ಟಿತನ ಹೊಂದಿದ್ದರೂ ಕೂಡ ದೇಶದ ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ಬಸವ ಪರಂಪರೆಯ ಲಿಂಗಾಯತ ಮಠಗಳು ಬಸವಣ್ಣನ ವಿಚಾರಗಳನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿವೆ.ಎಸ್.ಲಿಂಗಮೂರ್ತಿ, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ