ಸದ್ಭಾವನಾ ಪಾದಯಾತ್ರೆಯಲ್ಲಿ 50ಕ್ಕೂ ಸ್ವಾಮೀಜಿ ಭಾಗಿ

16MDG1 SADBHAVANA PADAYATRE
Published on

ಮುಂಡರಗಿ: ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ನಡೆಯುತ್ತಿರುವ ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳವರ 157ನೇ ಜಯಂತಿ ಮಹೋತ್ಸವ ಪ್ರಯುಕ್ತ ಸೋಮವಾರ ಪಟ್ಟಣದ ಕೆಲ ವಾರ್ಡ್​ಗಳು ಸೇರಿ ತಾಲೂಕಿನ ಹಾರೋಗೇರಿ ಮತ್ತು ಹಿರೇವಡ್ಡಟ್ಟಿ ಗ್ರಾಮದಲ್ಲಿ ಕುಮಾರೇಶ್ವರ ಜಯಂತಿ ಮಹೋತ್ಸವ ಸಮಿತಿಯ 50ಕ್ಕೂ ಹೆಚ್ಚು ಸ್ವಾಮೀಜಿಗಳು ಸದ್ಭಾವನಾ ಪಾದಯಾತ್ರೆ ನಡೆಸಿದರು.

ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳ ಭಾವಚಿತ್ರ ಹಿಡಿದು ಸಂಚರಿಸಿದ ಪೂಜ್ಯರು ಹಾನಗಲ್ಲ ಕುಮಾರೇಶ್ವರರ ವಿಚಾರಧಾರೆ ಜನಸಾಮಾನ್ಯರಿಗೆ ಮುಟ್ಟಿಸುವುದರೊಂದಿಗೆ ಭಕ್ತರಿಗೆ ರುದ್ರಾಕ್ಷಿ, ಭಸ್ಮ ಧಾರಣೆ ಮಾಡಲಾಯಿತು.

ಪಾದಯಾತ್ರೆ ಸಂಚರಿಸುವ ಭಾಗದ ಮನೆಗಳ ಮುಂದೆ ಅಂಗಳದಲ್ಲಿ ರಂಗೋಲಿಗಳನ್ನು ಬಿಡಿಸಿ ಸಿಂಗರಿಸಲಾಗಿತ್ತು. ಸಂಚಾರದ ಉದ್ದಕ್ಕೂ ಭಕ್ತರು ಹೂವುಗಳನ್ನು ಚೆಲ್ಲಿ ಪೂಜ್ಯರನ್ನು ಸ್ವಾಗತಿಸಿದರು. ವಾದ್ಯಮೇಳಗಳು ಪಾದಯಾತ್ರೆಗೆ ಮೆರುಗು ನೀಡಿದವು.

ಪೂಜ್ಯರು ಭಾನುವಾರ ಸಹ ಇಲ್ಲಿನ ಕೆಲ ವಾರ್ಡಗಳು ಮತ್ತು ಬರದೂರು, ಮೇವುಂಡಿ ಗ್ರಾಮದಲ್ಲಿ ಸದ್ಭಾವನಾ ಪಾದಯಾತ್ರೆ ನಡೆಸಿದರು. ಸೆ. 24ರವರೆಗೂ ಪ್ರತಿದಿನವೂ ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪೂಜ್ಯರು ಸಂಚರಿಸಿ ಪಾದಯಾತ್ರೆ ಕೈಗೊಂಡು ಕುಮಾರೇಶ್ವರರ ವಿಚಾರಗಳನ್ನು ಜನರಿಗೆ ತಲುಪಿಸುವ ಕಾರ್ಯ ನಡೆಸುತ್ತಿದ್ದಾರೆ.

ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಚನ್ನವೀರ ಸ್ವಾಮೀಜಿ, ಡಾ.ಅಲ್ಲಮಪ್ರಭು ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಡಾ.ಹಿರಿಯ ಶಾಂತವೀರ ಸ್ವಾಮೀಜಿ, ಶ್ರೀ ಶಿವಕುಮಾರ ಸ್ವಾಮೀಜಿ, ಪಂ.ಅನ್ನದಾನೀಶ್ವರ ಶಾಸ್ತ್ರೀಗಳು, ವಾಗೀಶ ಪಂಡಿತಾರಾಧ್ಯ ಸ್ವಾಮೀಜಿ, ಶಿವಕುಮಾರ ದೇವರು, ಚೆನ್ನಬಸವ ಸ್ವಾಮೀಜಿ, ನಿರಂಜನ ದೇವರು, ಶಿವಬಸವ ಸ್ವಾಮೀಜಿ, ಅಮರಸಿದ್ಧೇಶ್ವರ ಸ್ವಾಮೀಜಿ, ಶಿವಲಿಂಗೇಶ್ವರ ಸ್ವಾಮೀಜಿ ಇನ್ನಿತರ ಸ್ವಾಮೀಜಿಗಳು, ದೇವರುಗಳು ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಹಾಗೂ ಭಕ್ತರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net