

ಬಸವಕಲ್ಯಾಣ: ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ವೆಂಕಟೇಶ್ವರ ಸ್ವಾಮೀಜಿ ಅವರಲ್ಲಿ ಬರೋಬ್ಬರಿ 45 ಕೆಜಿ ಚಿನ್ನ, 19 ಕೆಜಿ ಬೆಳ್ಳಿ ಇದೆ. ಹೀಗಂತ ಅವರು ನಾಮಪತ್ರದ ಜತೆಗೆ ಸಲ್ಲಿಸಿರುವ ಆಸ್ತಿಘೋಷಣಾ ಪತ್ರದಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಜನತಾ ಪಕ್ಷದಿಂದ ಸ್ವಾಮೀಜಿ ಅವರು ನಾಮಪತ್ರ ದಾಖಲಿಸಿದ್ದಾರೆ. ಇವರರು ಮೂಲತಃ ವಿಜಯಪುರ ಜಿಲ್ಲೆಯ ಬರಡೋಲದವರು. ಇವರ ಒಟ್ಟು ಸ್ಥಿರ ಹಾಗೂ ಚರಾಸ್ತಿ 35.87 ಕೋಟಿ ರೂ. ಗಳಿಷ್ಟಿದೆ. ಬಿಕಾಂ ಓದಿರುವ ಸ್ವಾಮೀಜಿ ಈವರೆಗೆ ವಿವಿಧೆಡೆ 25 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಈಗ 26ನೇ ಬಾರಿ ಶರಣನಾಡಿನ ಅಖಾಡದಿಂದ ಕಣಕ್ಕಿಳಿದಿದ್ದಾರೆ. ಈವರೆಗಿನ ನಾಮಪತ್ರ ಸಲ್ಲಿಕೆ ಮಾಡಿದ ಅಭ್ಯರ್ಥಿಗಳಲ್ಲಿ ಇವರೇ ಶ್ರೀಮಂತರೆನಿಸಿದ್ದಾರೆ.
ತಮ್ಮಲ್ಲಿ 45 ಕೆಜಿ ಚಿನ್ನಾಭರಣವಿದ್ದು, ಇದರ ಮೌಲ್ಯ ಅಂದಾಜು 22.50 ಕೋಟಿ ರೂ. ಎಂದು ತಿಳಿಸಿದ್ದಾರೆ. 12.81 ಲಕ್ಷ ರೂ. ಮೌಲ್ಯದ 19 ಕೆಜಿ ಬೆಳ್ಳಿಯಿದೆ. ಪತ್ನಿ ಕವಿತಾ ಅವರ ಹತ್ತಿರವೂ ಅರ್ಧ ಕೆಜಿ ಬಂಗಾರ, 6 ಕೆಜಿ ಬೆಳ್ಳಿ ಇದೆ. ಮುಂಬೈನ ಬಾಲಾಜಿ ಡೆವಲಪರ್ಸ್ ನಿಂದ 3.16 ಕೋಟಿ ರೂ. ಮತ್ತು ಅಹಮದಾಬಾದ್ನ ಎಸ್ಪಿ ಇನ್ಫ್ರಾ ದಿಂದ 7.81 ಕೋಟಿ ರೂ. ಕೈ ಸಾಲ (ಹ್ಯಾಂಡ್ ಲೋನ್) ಪಡೆದಿರುವುದಾಗಿಯೂ ತಿಳಿಸಿದ್ದಾರೆ.
ಬೀದರ್ ಜಿಲ್ಲೆಯ ಚುನಾವಣೆ(ರಾಜಕೀಯ) ಇತಿಹಾಸದಲ್ಲೇ ಇಷ್ಟೊಂದು ಚಿನ್ನವಿದೆ ಎಂದು ಆಸ್ತಿ ಘೋಷಣಾ ಪ್ರಮಾಣಪತ್ರದಲ್ಲಿ ತಿಳಿಸಿರುವ ಮೊದಲ ಅಭ್ಯರ್ಥಿ ಎಂಬ ದಾಖಲೆ ಈಗ ವೆಂಕಟೇಶ್ವರ ಸ್ವಾಮೀಜಿ ಅವರ ಮುಡಿಗೇರಿದೆ.