ಗಜಾನನ ಸ್ವಾಮೀಜಿ ರಕ್ಷಣೆಗೆ ಪ್ರವಾಹ ತಡೆ

Published on

ಶ್ರೀರಂಗಪಟ್ಟಣ: ತಾಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮ ಹೊರವಲಯದ ಕಾವೇರಿ ನದಿಯ ನಡುಗಡ್ಡೆಯಲ್ಲಿರುವ ಗೌತಮಕ್ಷೇತ್ರದ ಸ್ವಾಮೀಜಿ ಗಜಾನನ ಶ್ರೀ ರಕ್ಷಣೆಗೆ ಮುಂದಾದ ಅಗ್ನಿಶಾಮಕ ದಳದ ಸಿಬ್ಬಂದಿಯೇ ಇದೀಗ ಪ್ರವಾಹದೊಳಗೆ ಸಿಲುಕಿದ್ದಾರೆ.
ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಜಿಲ್ಲಾ ಮತ್ತು ತಾಲೂಕು ಆಡಳಿತದ ಆಧಿಕಾರಿಗಳು ಗೌತಮ ಕ್ಷೇತ್ರದ ಪೀಠಾಧಿಪತಿ ಗಜಾನನ ಶ್ರೀ ಮತ್ತು ಅವರ ಪರಿವಾರದವರನ್ನು ಪ್ರವಾಹ ತಗ್ಗುವವರೆಗೂ ಮಠ ಬಿಟ್ಟು ಹೊರಬರಲು ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ಆಗಮಿಸುವಂತೆ ಮನವಿ ಮಾಡಿದ್ದರು. ಆದರೆ ಹಠಮಾಡಿ ಪ್ರವಾಹದಲ್ಲೇ ಉಳಿದುಕೊಳ್ಳುವುದಾಗಿ ಅಧಿಕಾರಿಗಳನ್ನು ಶ್ರೀಗಳು ಹೊರ ಕಳುಹಿಸಿದ್ದರು. ಆದರೆ ಬುಧವಾರ ಸಂಜೆ ಗೌತಮ ಕ್ಷೇತ್ರವನ್ನು ಸುತ್ತುವರೆದ ಕಾವೇರಿ ನದಿಯ ಭಾರಿ ಪ್ರವಾಹದ ನೀರಿನ ಸೆಳೆತಕ್ಕೆ ತಡರಾತ್ರಿಯೆ ಹೆದರಿ ಸ್ಥಳಾಂತರಕ್ಕೆ ತಾಲೂಕು ಅಡಳಿತಕ್ಕೆ ಮನವಿ ಮಾಡಿ ಪೀಠಾಧಿಪತಿ, ಗಜಾನನ ಸ್ವಾಮೀಜಿ ತಮ್ಮ ತಾಯಿ ಮಾತಾಜಿ ಕೋಕಿಲಾಬಾಯಿ ಮತ್ತು ಸೇವಕಿ ರತ್ನಮ್ಮ ಅವರುಗಳೊಂದಿಗೆ ತಮ್ಮನ್ನು ರಕ್ಷಿಸಿ ಸ್ಥಳಾಂತರಿಸಲು ಮನವಿ ಮಾಡಿದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಅಗ್ನಿಶಾಮಕ ದಳದೊಂದಿಗೆ ಗುರುವಾರ ರಕ್ಷಣೆಗೆ ಮುಂದಾಗಿತ್ತು. ಆದರೆ ನಡುಗಡ್ಡೆ ಸುತ್ತುವರಿದಿದ್ದ ಕಾವೇರಿ ನದಿಯ ಪ್ರವಾಹದ ಸೆಳೆತ ಹೆಚ್ಚಿದ್ದ ಕಾರಣ ದೋಣಿಗಳು ನದಿಯ ನೀರಲ್ಲಿ ಸಂಚರಿಸಲು ಸಾಧ್ಯವಾಗದೆ ರಕ್ಷಣೆಗೆ ತೆರಳಿದ್ದ ಅಗ್ನಿಶಾಮಕ ಸಿಬ್ಬಂದಿ ನಡುಗಡ್ಡೆಯಲ್ಲಿ ಸಿಲುಕಿಕೊಂಡರು. ಇದೀಗ ಇವರೆಲ್ಲರ ಪ್ರಾಣರಕ್ಷಣೆಗೆ ಕೆ.ಆರ್.ಸಾಗರದಲ್ಲಿರುವ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ಸ್ (ಎಂಇಜಿ) ತಂಡದಿಂದ ವಿಶೇಷ ದೋಣಿಗಳ ಮೂಲಕ ಹೊರಕ್ಕೆ ಕರೆತರೆಸಲು ಮುಂದಾದ ಜಿಲ್ಲಾಡಳಿತ ಸುರಕ್ಷಿತ ಸ್ಥಳಾಂತರಕ್ಕೆ ಮುಂದಾಗಿದ್ದಾರೆ.

ಹೈ-ಅಲರ್ಟ್ : ಶ್ರೀರಂಗಪಟ್ಟಣ ಪುರಸಭೆ ವ್ಯಾಪ್ತಿಯ ಪಟ್ಟಣ, ಪಶ್ಚಿಮವಾಹಿನಿ ಹಾಗೂ ಗಂಜಾಂನ ತೀರ ಪ್ರದೇಶಗಳ ನಿವಾಸಿಗಳು ಕಾವೇರಿಯ ಅಬ್ಬರದ ಪ್ರವಾಹದ ಅರಿವೆ ಇಲ್ಲದೆ ಸಾಕಷ್ಟು ಮನೆಗಳಲ್ಲಿ ನಿವಾಸಿಗಳು ನಿಗ್ರೆಗೆ ಜಾರಿದ್ದರು. ಬಳಿಕ ಟೌನ್ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಎಸ್.ಪ್ರಕಾಶ್ ಹಾಗೂ ಮುಖ್ಯಾಧಿಕಾರಿ ಎಂ.ರಾಜಣ್ಣ ಸಿಬ್ಬಂದಿ ಜತೆಗೂಡಿ ಬುಧವಾರ ಮಧ್ಯರಾತ್ರಿವರೆಗೆ ಕಾರ್ಯಾಚರಣೆ ನಡೆಸಿ ತೀರ ಪ್ರದೇಶಗಳಲ್ಲಿದ್ದ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ಶ್ರಮಿಸಿದರು. ಉಳಿದಂತೆ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲೂ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಹಾಗೂ ತಾಪಂ ಇಒ ವೇಣು ಸೇರಿದಂತೆ ಎಲ್ಲ ಅಧಿಕಾರಿಗಳು ಜನರಿಗೆ ಜಾಗೃತಿ ಮೂಡಿಸಿ ಎಚ್ಚರ ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net