

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿವಿಧ ಕಾರ್ಯಕ್ರಮಗಳಿಗಾಗಿ ನಗರಕ್ಕೆ ಆಗಮಿಸಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶನಿವಾರ ಶ್ರಮಿಕ ವರ್ಗದವರ ಮನೆಗಳಿಗೆ ತೆರಳಿ ಅವರ ಕಷ್ಟ-ಸುಖಗಳನ್ನು ಆಲಿಸಿದರು.
ಇಲ್ಲಿನ ಲಕ್ಷ್ಮೀಸಿಂಗನಕೇರಿ ಹಾಗೂ ಮಾಡಳಮಡ್ಡಿಯಲ್ಲಿನ ಶ್ರಮಿಕ ಹಾಗೂ ಕಾರ್ಮಿಕರ ಮನೆಗಳಿಗೆ ತೆರಳಿದ ಶ್ರೀಗಳು ಭಕ್ತರೊಂದಿಗೆ ಸೌಹಾರ್ದಯುತವಾಗಿ ಪಾದಯಾತ್ರೆ ಮೂಲಕ ಬಡಾವಣೆಗಳಲ್ಲಿ ಸಾಗಿದರು. ಸ್ವಾಮೀಜಿ ಆಗಮನ ಹಿನ್ನೆಲೆಯಲ್ಲಿ ಭಕ್ತರು ರಸ್ತೆಯುದ್ದಕ್ಕೂ ಜಾಂಜ್ ಮೇಳ ಹಾಗೂ ಹೂ ಹಾಸಿಗೆ ಮೂಲಕ ಸ್ವಾಗತ ಕೋರಿದರು. ಬಡಾವಣೆಗಳಲ್ಲಿನ ವಿವಿಧ ದೇವಸ್ಥಾನ, ಮನೆಗಳಿಗೆ ಭೇಟಿ ನೀಡಿ ಸ್ವಾಮೀಜಿ ಮಾತುಕತೆ ನಡೆಸಿದರು.
ಪಾದಯಾತ್ರೆ ಮಧ್ಯದಲ್ಲಿ ಶ್ರೀಗಳು ಲಕ್ಷ್ಮೀಸಿಂಗನಕೇರಿಯ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಹಿಂದೂ ಸಮಾಜದ ಎಲ್ಲ ವರ್ಗದ ಜನರನ್ನು ಸೇರಿಸಿ ಮಾತುಕತೆ ನಡೆಸಿದರು. ಈ ವೇಳೆ ಮಹಾನಗರ ಪಾಲಿಕೆ ನಾಮನಿರ್ದೇಶಿತ ಸದಸ್ಯ ತುಳಸಪ್ಪ ಪೂಜಾರ, ದಲಿತ ಸಮಾಜದ ಯುವತಿಯರ ಮೇಲೆ ಅನ್ಯ ಧಮೀರ್ಯರಿಂದ ಆಗುತ್ತಿರುವ ದೌರ್ಜನ್ಯಗಳ ಬಗ್ಗೆ ನೋವು ತೋಡಿಕೊಂಡರು. ಇಳಕಲ್ನಲ್ಲಿ ಅನ್ಯ ಕೋಮಿನ ಯುವಕನೋರ್ವ ದಲಿತ ಯುವತಿ ಮೇಲೆ ಮಾಡಿರುವ ದೌರ್ಜನ್ಯದ ಘಟನೆ ಪ್ರಸ್ತಾಪಿಸಿ, ಯಾವ ಸ್ವಾಮೀಜಿಗಳು ಧ್ವನಿ ಎತ್ತಿಲ್ಲ ಎಂದು ಅವಲತ್ತುಕೊಂಡರು.
ಇದಕ್ಕೆ ಸ್ಪಂದಿಸಿದ ಸ್ವಾಮೀಜಿ, ಇಂತಹ ಘಟನೆಗಳನ್ನು ನಾವು ಖಂಡಿಸಿ ಸಮಾಜವನ್ನು ಎಚ್ಚರಿಸಬೇಕು. ಆದರೆ, ಅದು ಸ್ಥಳಿಯವಾಗಿರುವ ವಿಎಚ್ಪಿ ಶಾಖೆಗಳ ಮೂಲಕ ಮಾಹಿತಿ ಬರಬೇಕು. ಆಗ ಕೇಂದ್ರ ಮಟ್ಟದಲ್ಲಿ ನಾವು ಧ್ವನಿ ಎತ್ತುತ್ತೇವೆ ಎಂದು ಭರವಸೆ ನೀಡಿದರು.
ತಮ್ಮ ಕಷ್ಟ ಹೇಳಿಕೊಂಡು ಭಕ್ತರು ಮಠಗಳಿಗೆ ಹೋಗುವುದು ಸಾಮಾನ್ಯ. ಆದರೆ, ಪೇಜಾವರ ಶ್ರೀಗಳು ನಮ್ಮ ಮನೆ ಬಾಗಿಲಿಗೇ ಬಂದು ಕಷ್ಟ ಸುಖ ಆಲಿಸಿದ್ದು, ಭಕ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದಂತಾಗಿದೆ ಎಂದು ತುಳಜಪ್ಪ ಪೂಜಾರ ಸ್ವಾಮೀಜಿ ಕಾರ್ಯ ಶ್ಲಾಘಿಸಿದರು.
ಶ್ರೀಧರ ನಾಡಿಗೇರ, ಆರ್.ಎಂ. ಕುಲಕರ್ಣಿ, ಕೃಷ್ಣ ದೇಶಪಾಂಡೆ, ವಿನಾಯಕ ಜೋಶಿ, ಭೀಮಸಿ ನೇಮಕಲ್, ನಾಗರಾಜ ನಾಯಕ, ಸುರೇಶ ಹಿರೇಮನಿ, ಪಾಲಿಕೆ ಸದಸ್ಯ ವಿಷ್ಣು ತೀರ್ಥ ಕೊರ್ಲಹಳ್ಳಿ, ಇತರರು ಇದ್ದರು.