ಶಿಕ್ಷಣದ ವ್ಯವಸ್ಥೆ ಕುಸಿದರೆ ದೇಶದ ಭವಿಷ್ಯ ಹಾಳು ; ಬೆಟ್ಟದಹಳ್ಳಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿಕೆ

10 gubbi lead
Published on

ಗುಬ್ಬಿ : ಯಾವ ದೇಶ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆಯೋ ಆ ದೇಶ ಖಂಡಿತವಾಗಿಯೂ ಅಭಿವೃದ್ಧಿ ಹೊಂದುತ್ತದೆ ಎಂದು ಬೆಟ್ಟದಹಳ್ಳಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಬಾವಿಮನೆ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ತಾಲೂಕು ವೀರಶೈವ ಲಿಂಗಾಯತ ನೌಕರರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣದ ವ್ಯವಸ್ಥೆ ಕುಸಿದರೆ ದೇಶದ ಭವಿಷ್ಯವೇ ಹಾಳಾಗುತ್ತದೆ ಎಂದು ಬೇಸರಿಸಿದ ಅವರು, ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗದಂತೆ ಸರ್ಕಾರ ಕೆಲಸ ಮಾಡಬೇಕಾಗಿದೆ. ದೇಶವು ಪುರಾತನ ಕಾಲದಿಂದಲೂ ವಿದ್ಯಾರ್ಥಿಗಳಿಗೆ ಸಂಸ್ಕೃತಿ ಮತ್ತು ಸಂಸ್ಕಾರ ಹೇಳಿಕೊಡುತ್ತಲೇ ಬರುತ್ತಿದೆ. ಇದು ದೇಶದ ಅವಿಭಾಜ್ಯ ಅಂಗ ಎಂಬುದನ್ನು ಯಾರೂ ಮರೆಯಬಾರದು ಹಾಗೂ ವಿದ್ಯಾರ್ಥಿಗಳಿಗೆ ಪೋಷಕರು ಹಾಗೂ ಶಿಕ್ಷಕರು ಹೆಚ್ಚಿನ ಸಂಸ್ಕಾರ ಕಲಿಸುವಂತಹ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಂಸದ ಜಿ ಎಸ್ ಬಸವರಾಜು ಮಾತನಾಡಿ, ಯಾವುದೇ ಸಮಾಜ ಬೆಳವಣಿಗೆ ಆಗಬೇಕೆಂದರೆ 4 ಮುಖಂಡರಿಂದ ಆಗಲು ಸಾಧ್ಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಪ್ರತಿಯೊಂದು ಸಮಾಜವೂ ಅಭಿವೃದ್ಧಿಯಾಗುತ್ತದೆ ಎಂದರು.

ನಾನು ಸುಮಾರು ನಲವತ್ತು ವರ್ಷಗಳಿಂದ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ಗುಬ್ಬಿ ತಾಲೂಕಿಗೆ ಸುಮಾರು ಎಂಎಸ್‌ಎಸ್‌ಗಳನ್ನು ತಂದು ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ. ಸಮಾಜದಲ್ಲಿ ಬೆಳೆಯುವಂತಹ ಸಂದರ್ಭದಲ್ಲಿ ಯಾರು ಯಾರ ಕಾಲನ್ನು ಎಳೆಯುವಂತಹ ಕೆಲಸ ಮಾಡಬೇಡಿ, ಇದರಿಂದ ಯಾರೂ ಉದ್ಧಾರವಾಗುವುದಿಲ್ಲ. ಸಮಾಜದ ಪರಿವರ್ತನೆಗೆ ನಾವೆಲ್ಲರೂ ಸಹಕರಿಸಬೇಕು. ಸಮಾಜ ಅಭಿವೃದ್ಧಿ ಆಗಬೇಕು ಎಂದರೆ ನಮ್ಮ ಕೈನಲ್ಲಿ ಆದ ಸಹಕಾರ ಮತ್ತು ಸಹಾಯ ನೀಡಬೇಕು ಎಂದ ಅವರು ಬಸವೇಶ್ವರರ ತತ್ವ ಆದರ್ಶಗಳನ್ನು ಪಾಲಿಸಿದರೆ ಇಡೀ ಸಮಾಜವೇ ಬದಲಾವಣೆ ಕಾಣುತ್ತದೆ ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯೆ ನವ್ಯ ಚಂದ್ರಶೇಖರ್ ಬಾಬು ಮುಖಂಡರಾದ ಭಾರತಿ ಹಿತೇಶ್, ಪಿ.ಬಿ.ಚಂದ್ರಶೇಖರ್ ಬಾಬು, ವಕೀಲರಾದ ಪ್ರಸನ್ನಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎನ್.ಸಿ.ಪ್ರಕಾಶ್, ವೀರಭದ್ರೇಶ್ವರ ಏಜೆನ್ಸಿಯ ವಿಶ್ವಾರಾಧ್ಯ, ದಿವ್ಯಪ್ರಕಾಶ್, ನಿವೃತ್ತ ಉಪ ನಿರ್ದೇಶಕ ಸಿದ್ದಲಿಂಗಪ್ಪ ,ಬಿಇಒ ಸೋಮಶೇಖರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯೋಗಾನಂದ, ಬಿಆರ್‌ಸಿ ಸಿದ್ದಲಿಂಗಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ರಮೇಶ್, ಬಗರ್ ಹುಕುಂ ಸದಸ್ಯ ಚಂದ್ರಮೌಳಿ, ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಸದಸ್ಯರು, ಶಿಕ್ಷಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net