

ಕೊರಟಗೆರೆ : ಸೋಂಪುರದ ಪುಟ್ಟೇಶ್ವರಸ್ವಾಮಿ ವಿರಕ್ತ ಮಠದ ಆಡಳಿತವನ್ನು ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠಕ್ಕೆ ಹಸ್ತಾಂತರ ಮಾಡಲಾಯಿತು. ವಯಸ್ಸಹಜ ಅನಾರೋಗ್ಯ ಕಾರಣದಿಂದ ಪುಟ್ಟೇಶ್ವರಸ್ವಾಮಿ ಮಠದ ಪೀಠಾಧ್ಯಕ್ಷ ಸೋಮಶೇಖರ ಸ್ವಾಮೀಜಿ ಅವರು ಮಠದ ಆಡಳಿತವನ್ನು ಬುಧವಾರ ಮುರುಘಾ ಮಠಕ್ಕೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಅಭಿನಂದನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಡಾ.ಶಿವಮೂರ್ತಿ ಮುರುಘಾ ಶರಣರು, ಈ ಹಿಂದೆ ಪೂರ್ವಿಕರಲ್ಲಿ ಹಳ್ಳಿಗೊಂದು ಮಂದಿರ, ಮಠ ಕಲ್ಪೃನೆ ಇತ್ತು. ನಾವ್ಲೆರೂ ಈ ಆಚರಣೆಯನ್ನು ಮುಂದುವರಿಸಿಕೊಂಡು ಹೋಗಬೇಕಿದೆ ಎಂದರು.
ಮಠಗಳು ಧಾರ್ಮಿಕ, ತಾತ್ವಿಕ ಮೌಲ್ಯ ಬಿತ್ತರಿಸುವಂತಹ ಕೇಂದ್ರಗಳು. ಮಠಾಧಿಪತಿ ಆಗುವುದು ಸುಖಕ್ಕಾಗಿ ಅ್ಲ, ಕಷ್ಟ ಪಡಲಿಕ್ಕಾಗಿ. ಈ ಹಿನ್ನೆಲೆಯಲ್ಲಿ ಇಲ್ಲಿನ ಪೀಠಾಧಿಪತಿಗಳಾದ ಸೋಮಶೇಖರ ಸ್ವಾಮೀಜಿ ಮಠಕ್ಕಾಗಿ ಮಾಡಿದ ತ್ಯಾಗ ಮತ್ತು ಸೇವೆ ಅನನ್ಯವಾಗಿದೆ. ಅವರ ಸೇವೆಗೆ ಶ್ರೀಮಠ ಸೇರಿ ಎಲ್ಲ ಭಕ್ತರು ಗೌರವಪೂರ್ಣ ಅಭಿನಂದನೆ ಸಲ್ಲಿಸಬೇಕು ಎಂದರು.
ಹನುಮಂತಪುರದ ನವಗ್ರಹ ಲಕ್ಷ್ಮೀಶ್ವರಿ ಮಠದ ಪೀಠಾಧ್ಯಕ್ಷ ಡಾ.ನಾಗೇಂದ್ರ ಸ್ವಾಮೀಜಿ ಮಾತನಾಡಿ, ಸೋಮಶೇಖರ ಸ್ವಾಮೀಜಿ ಮಠವನ್ನು ಹಸ್ತಾಂತರ ಮಾಡುತ್ತಿರುವುದು ಸಂತೋಷ ಹಾಗೂ ನೋವು ಎರಡನ್ನೂ ನೀಡುತ್ತಿದೆ. ಸ್ವಯಂ ಕೃಷಿಕರಾಗಿ ಮಠಕ್ಕಾಗಿ ನೇಗಿಲು ಹಿಡಿದು ಕೆಲಸ ಮಾಡಿ ಭಕ್ತರಿಗೆ ಅನ್ನದಾಸೋಹ ನಡೆಸಿದ್ದ ಶ್ರೀಗಳು ಮಾತೃ ಹೃದಯಿ. ಈಗ ಅವರಿಗೆ ಆರೋಗ್ಯದ ಸಮಸ್ಯೆ ಎದುರಾಗಿದ್ದು, ಅವರು ಮಠ ಹಾಗೂ ಭಕ್ತರ ಅಸ್ತಿತ್ವದ ಉಳಿವಿಗಾಗಿ ಮಠವನ್ನು ಹಸ್ತಾಂತರ ಮಾಡಿದ್ದು, ಅವರ ಆರೋಗ್ಯ ಸುಧಾರಣೆ ಆಗಲಿ ಎಂದು ಆಶಿಸಿದರು.
ನಿವೃತ್ತ ತಹಸೀಲ್ದಾರ್ ಎಚ್.ಜಿ ಪುಟ್ಟಪ್ಪಯ್ಯ, ದಾನಿಗಳಾದ ಮೈಲನಹಳ್ಳಿ ಬಸಪ್ಪ, ವಕೀಲ ಗಂಗಾಧರ್, ಮುಖಂಡರಾದ ಕೃಷ್ಣಾಚಾರ್, ನಟರಾಜ್, ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಮಾಡಲು ಹಸ್ತಾಂತರ: ನಾನು ಪೀಠಾಧ್ಯಕ್ಷನಾದಾಗ ಮಠ ಸಂಕಷ್ಟದಲ್ಲಿತ್ತು. ಯಾವುದೇ ಮೂಲ ಸೌಕರ್ಯವಿರಲ್ಲಿ. ನನ್ನ ಇಲ್ಲಿಗೆ ಉತ್ತರಾಧಿಕಾರಿ ಮಾಡುವಾಗ ಹಲವರು ನೀನು ಇಲ್ಲಿ ನಿಜವಾಗಿಯೂ ಬದುಕುತ್ತೀಯಾ... ಈ ಕಾಡಿನಲ್ಲಿ ಜೀವನ ಹೇಗೆ ಮಾಡುತ್ತೀರಾ ಎಂದು ಕೇಳಿದ್ದರು. ಆದರೆ, ಹಲವು ನೋವು-ನಲಿವುಗಳಲ್ಲಿ ಮಠವನ್ನು ಕಟ್ಟಿ ಬೆಳೆಸಿದ್ದೇನೆ. ಮಠದ ನಿರ್ವಹಣೆಗಾಗಿ ರೈತನಾಗಿ ದುಡಿದ್ದೇನೆ. ನನ್ನ ಶ್ರಮದ ಕೃಷಿಯನ್ನು ಮಠದಲ್ಲಿ ಮಾಡಿದ್ದೇನೆ. ಈಗ ನನಗೆ ಆರೋಗ್ಯ ಸಮಸ್ಯೆ ಎದುರಾಗಿದ್ದು, ನನ್ನಿಂದ ನಿರ್ವಹಣೆ ಅಸಾಧ್ಯ ಎಂದು ಅರಿವಿಗೆ ಬಂದ ಕಾರಣ ಮಠ ಹಾಳಾಗುವುದು ಬೇಡವೆಂದು ಮಠದಿಂದ ನಾನು ಮುಕ್ತನಾಗುತ್ತಿದ್ದೇನೆ. ಮಠವನ್ನು ಜೀರ್ಣೋದ್ಧಾರ ಮಾಡಲು ಮುರುಘಾಮಠಕ್ಕೆ ಹಸ್ತಾಂತರ ಮಾಡುತ್ತಿದ್ದು, ಎಲ್ಲ ಭಕ್ತರು ಅವರಿಗೆ ಹೆಚ್ಚಿನ ಸಹಕಾರ ನೀಡುವಂತೆ ನಿರ್ಗಮಿತ ಪೀಠಾಧ್ಯಕ್ಷ ಸೋಮಶೇಖರ ಸ್ವಾಮಿಜಿ ಭಾವುಕರಾದರು.
ಹಸ್ತಾಂತರದಲ್ಲಿ ಗೊಂದಲ ಸೃಷ್ಟಿ: ಮಠದ ಹಸ್ತಾಂತರದ ಬಗ್ಗೆ ಕೆಲವರು ಅಸಮ್ಮತಿ ಹೊರ ಹಾಕಿ ಹಸ್ತಾಂತರ ಪ್ರತಿಯಲ್ಲಿ ಏನು ಬರೆಯಲಾಗಿದೆ ಎನ್ನುವ ವಿಚಾರ ತಿಳಿಸಬೇಕು ಎಂದರು. ಆಗ ಇದು ಯಾವ ರೀತಿಯ ಹಸ್ತಾಂತರ ಎನ್ನುವ ಹಲವು ಗೊಂದಲಗಳು ಸೃಷ್ಟಿಯಾಗಿತ್ತು. ಡಾ.ಶಿವಮೂರ್ತಿ ಮುರುಘಾ ಶ್ರೀಗಳು ಮಧ್ಯ ಪ್ರವೇಶಿಸಿ ಪುಟ್ಟೇಶ್ವರ ಸ್ವಾಮಿ ವಿರಕ್ತ ಮಠವು ಪೂರ್ವದಲ್ಲಿ ಮುರುಘಾ ಮಠದ ಶಾಖಾ ಮಠವಾಗಿದ್ದು, ಇದರ ಸಂಪೂರ್ಣ ಅಧಿಕಾರವು ಬೃಹನ್ಮಠಕ್ಕೆ ಇದೆ. ಹಾಗಾಗಿ, ಸೋಮಶೇಖರ ಶ್ರೀಗಳು ನಮಗೆ ಹಸ್ತಾಂತರ ಮಾಡುತ್ತಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದ ಭಕ್ತರಿಗೆ ತಿಳಿ ಹೇಳಿದರು.
ಮಠಕ್ಕೆ ಬಂದ ಭಕ್ತರನ್ನು ಪೀಠಾಧಿಪತಿಗಳು ಯೋಗಕ್ಷೇಮ ವಿಚಾರಿಸುವಂತೆ, ಭಕ್ತರೂ ಮಠಾಧೀಶರ ಕುಶಲೋಪರಿ ಕೇಳಿ ಮಠಕ್ಕೆ ಬರಿಗೈಯಲ್ಲಿ ಬರದೇ ಏನಾದರೂ ಕಾಣಿಕೆ ನೀಡುವ ವಾಡಿಕೆ ಬೆಳೆಸಿಕೊಳ್ಳಬೇಕು. ಡಾ.ಶಿವಮೂರ್ತಿ ಮುರುಘಾ ಶರಣರು ಚಿತ್ರದುರ್ಗ