

ತಿಪಟೂರು: ಎಲ್ಲ ಸಮಾಜಕ್ಕೂ ಸಮಪಾಲು ಕೊಟ್ಟು, ಬಸವ, ರೇಣುಕರ ತತ್ವ ಸಿದ್ಧಾಂತ ಪರಿಪಾಲಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆಂಬಲಕ್ಕೆ ನಾವಿದ್ದೇವೆ ಎಂದು ಅಖಿಲ ಕರ್ನಾಟಕ ಶ್ರೀ ವೀರಶೈವ ಲಿಂಗಾಯತ ಮಠಾಧಿಪತಿಗಳ ವೇದಿಕೆ ಅಧ್ಯಕ್ಷ ಡಾ.ರುದ್ರಮುನಿ ಸ್ವಾಮೀಜಿ ಹೇಳಿದರು.
ಸಿಎಂ ಯಡಿಯೂರಪ್ಪ ವೀರಶೈವ ಸಮಾಜಕ್ಕೆ ಸೀಮಿತವಾಗದೆ, ಎಲ್ಲ ಸಮಾಜದವರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಮೂಲಕ ಮಾನವಧರ್ಮ ಅಳವಡಿಸಿಕೊಂಡು ಬಸವ ತತ್ವ ಪರಿಪಾಲಿಸುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚುನಾವಣೆ ಪೂರ್ವದಲ್ಲಿ ಹೈಕಮಾಂಡ್, ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ ನಂತರ, ಅವರ ನಾಯಕತ್ವದಲ್ಲಿ 100ಕ್ಕೂ ಹೆಚ್ಚು ಶಾಸಕರು ಆರಿಸಿ ಬಂದಿದ್ದಾರೆ. ಸಂಖ್ಯಾ ಬಲ ಕಡಿಮೆ ಬಂದಾಗ ಅನ್ಯ ಪಕ್ಷದವರು ಅವರ ನಾಯಕತ್ವ ಒಪ್ಪಿ ಸರ್ಕಾರ ರಚನೆಗೆ ಬೆಂಬಲಿಸಿದ್ದಾರೆ. ಆದರೆ, ಎಲ್ಲವೂ ಸುಗಮವಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಭಿನ್ನಮತದ ದನಿ ಕೇಳಿಬಂದಿದೆ.
ಯಡಿಯೂರಪ್ಪ ಅವರ ಬಗ್ಗೆ ಇಲ್ಲಸಲ್ಲದ ಮಾತನಾಡಿ, ಮಾನಸಿಕವಾಗಿ ಕುಗ್ಗಿಸಿ, ಆತ್ಮಸ್ಥೈರ್ಯ ಕಸಿಯುವ ಪ್ರಯತ್ನ ನಡೆದಿದೆ. ಯಡಿಯೂರಪ್ಪ ಅವರಿಗೆ ವಯಸ್ಸಾಯಿತು, ದಾರಿ ಬಿಡಿ, ಎಂದು ಬಿಂಬಿಸಲಾಗುತ್ತಿದೆ. ನೆರೆಯ ತಮಿಳುನಾಡಿನಲ್ಲಿ ಅನಾರೋಗ್ಯಕ್ಕೀಡಾಗಿ 15 ವರ್ಷ ಗಾಲಿ ಕುರ್ಚಿಯಲ್ಲಿ ಕುಳಿತು ರಾಜ್ಯ ಆಳಿದ ಎಂ.ಕರುಣಾನಿಧಿ, ಇಂದಿನ ದಿನಗಳಲ್ಲೂ, ರಾಜಕೀಯದಲ್ಲಿ ಯುವಕರು ನಾಚುವಂತೆ ಉತ್ಸಾಹ ತೋರುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿದರ್ಶನಕ್ಕೆ ಹೋಲಿಸಿದರೆ, ಯಡಿಯೂರಪ್ಪ ಅವರನ್ನು ರಾಜಕೀಯದಿಂದ ಹಿಂದೆ ಸರಿಸಲು ಯಾವುದೇ ಸಕಾರಣಗಳಿಲ್ಲ. ಇಲ್ಲಿ ವಯಸ್ಸು ಮುಖ್ಯವಲ್ಲ, ಸಂಕಲ್ಪ ಮತ್ತು ಇಚ್ಛಾಶಕ್ತಿ ಮುಖ್ಯ. ಇವೆರಡೂ ಯಡಿಯೂರಪ್ಪ ಅವರಲ್ಲಿದೆ. ಇದಕ್ಕೂ ಮೀರಿ, ಅವರಿಗೆ ತೊಂದರೆ ಕೊಡುವುದನ್ನು ನಮ್ಮ ವೇದಿಕೆ ಖಂಡಿಸುತ್ತದೆ. ಮತ್ತು ಮುಂದಿನ 2 ವರ್ಷ ಅವರು ರಾಜ್ಯಭಾರ ನಡೆಸಲು ನಮ್ಮಿಂದಾದ ಸಕಲ ರೀತಿಯ ನೆರವು ನೀಡಲು ನಮ್ಮ ವೇದಿಕೆ ಕಟಿಬದ್ಧವಾಗಿದೆ ಎಂದರು.
ಮಾದಿಹಳ್ಳಿ ಹಿರೇಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಬೀರೂರು ರಂಭಾಪುರಿ ಶಾಖಾ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ನುಗ್ಗೇಹಳ್ಳಿ ಹಿರೇಮಠದ ಶ್ರೀ ಮಹೇಶ್ವರ ಸ್ವಾಮೀಜಿ, ಬೀಳಲಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಚಾರ್ಯ ಸ್ವಾಮೀಜಿ, ಹಂಬಲದೇವರಹಳ್ಳಿ ಉಜ್ಜನೀಶ್ವರ ಮಠದ ಶ್ರೀ ಉಜ್ಜನೀಶ್ವರ ಶಿವಾಚಾರ್ಯ ಸ್ವಾಮೀಜಿ ಇದ್ದರು.
ಸಚಿವ ಸಂಪುಟ ರಚನೆಗೂ ಮುಂಚೆ ನೆರೆ ಬಂದಾಗ, ಒಬ್ಬಂಟಿಯಾಗಿ ರಾಜ್ಯದೆಲ್ಲೆಡೆ ಸಂಚರಿಸಿದ ಯಡಿಯೂರಪ್ಪ ಅವರಿಗೆ ಆಗ ವಯಸ್ಸಾಗಿರಲಿಲ್ಲವೇ? ಎಲ್ಲ ಸಮುದಾಯಗಳನ್ನು ಸಮವಾಗಿ ಸ್ವೀಕರಿಸಿ, ಬಸವ ತತ್ವಾದರ್ಶದಂತೆ ಆಡಳಿತ ನಡೆಸುತ್ತಿರುವ ಬಿಎಸ್‌ವೈ ಅವರ ರಾಜ್ಯಭಾರಕ್ಕೆ ಯಾವುದೇ ರೀತಿಯ ತೊಂದರೆ, ಕಿರುಕುಳ ಕೊಟ್ಟರೆ ವೀರಶೈವ ವೇದಿಕೆ ಸಹಿಸುವುದಿಲ್ಲ. ಡಾ.ರುದ್ರಮುನಿ ಸ್ವಾಮೀಜಿ, ಅಖಿಲ ಕರ್ನಾಟಕ ಶ್ರೀ ವೀರಶೈವ ಲಿಂಗಾಯತ ಮಠಾಧಿಪತಿಗಳ ವೇದಿಕೆ ಅಧ್ಯಕ್ಷರು, ಷಡಕ್ಷರ ಮಠ, ತಿಪಟೂರು ಬಿ.ಎಸ್.ಯಡಿಯೂರಪ್ಪ 2ನೇ ಬಾರಿ ಮುಖ್ಯಮಂತ್ರಿ ಆದಾಗ ರಾಜ್ಯ ಸಂಸ್ಕೃತ ವಿಶ್ವ ವಿದ್ಯಾಲಯಕ್ಕೆ 100 ಎಕೆರೆ ಜಮೀನು ಕೊಟ್ಟಿದ್ದಾರೆ. ರಾಜ್ಯದಲ್ಲಿ 300 ಕ್ಕೂ ಹೆಚ್ಚು ಸಂಸ್ಕೃತ ಪಾಠಶಾಲೆಗಳು ಮತ್ತು 15ಕ್ಕೂ ಹೆಚ್ಚು ಸಂಸ್ಕೃತ ಕಾಲೇಜುಗಳಿವೆ. ಇಂತಹ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಮೂಲಕ ಈಗ ನಾಲ್ಕನೇ ಬಾರಿ ಮುಖ್ಯ ಮಂತ್ರಿ ಆಗಿರುವ ಯಡಿಯೂರಪ್ಪ ಅವರು ಸಂಸ್ಕೃತ ಭಾಷೆಗೆ ಹೆಚ್ಚಿನ ಶಕ್ತಿ ತುಂಬುವ ಪ್ರಯತ್ನ ಮಾಡಬೇಕು. ಡಾ.ರಮಾನಂದ ಸ್ವಾಮೀಜಿ, ವನಕಲ್ಲು ಮಲ್ಲಿಕಾರ್ಜುನ ಸಂಸ್ಥಾನ ಮಠಾಧ್ಯಕ್ಷ