

ಅರಕಲಗೂಡು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತಮ ಅಡಿಪಾಯ ಹಾಕಿದಾಗ ಮಾತ್ರ ಜವಾಬ್ದಾರಿಯುತ ಪ್ರಜೆಗಳನ್ನು ಕಾಣಲು ಸಾಧ್ಯ ಎಂದು ಅರೆಮಾದನಹಳ್ಳಿ ಸಂಸ್ಥಾನ ಮಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಹೇಳಿದರು.
ರಾಮನಾಥಪುರದ ಜೆಎಸ್‌ಪಿ ಪ್ರಾಥಮಿಕ ಶಾಲೆ 32ನೇ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಪಾಲಕರು ಸರಿಯಾದ ವೇಳೆಗೆ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಬೇಕು. ಶಿಕ್ಷಕರು ಜವಾಬ್ದಾರಿಯಿಂದ ಪಾಠವನ್ನು ಬೋಧಿಸಬೇಕು. ಮಕ್ಕಳು ವಿಧೇಯತೆಯಿಂದ ಜ್ಞಾನಾರ್ಜನೆಗೆ ಒತ್ತು ನೀಡಬೇಕು. ವಿದ್ಯಾಭ್ಯಾಸದ ಜತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಪವನ್ ಕುಮಾರಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಆರ್.ಎಸ್. ನರಸಿಂಹಮೂರ್ತಿ, ಸದಸ್ಯರಾದ ಪುಷ್ಪಾ, ಸಿದ್ದರಾಜು, ಸಿಆರ್‌ಪಿ ಸತೀಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಮಾರಸ್ವಾಮಿ, ಮುಖಂಡ ಗೋವಿಂದರಾಜು ಇತರರಿದ್ದರು.