ಸ್ವಾಮಿ ವಿವೇಕಾನಂದರ ಚಿಂತನೆ ಶಾಶ್ವತ: ಸಿ.ಎ.ಬಸವರಾಜೇಂದ್ರ

3
Published on

ಮೈಸೂರು: ಸ್ವಾಮಿ ವಿವೇಕಾನಂದರ ಚಿಂತನೆ, ತತ್ವ, ಸಂದೇಶ ಜನರ ಮನಸ್ಸಿನಲ್ಲಿ ಸದಾ ಉಳಿದಿದೆ ಎಂದು ಮೈಸೂರಿನ ಚಾರ್ಟರ್ಡ್ ಅಕೌಂಟೆಂಟ್ ಸಿ.ಎ.ಬಸವರಾಜೇಂದ್ರ ತಿಳಿಸಿದರು.
ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್, ಭಾರತ್ ಸೌಟ್ಸ್ ಮತ್ತು ಗೈಡ್ಸ್, ಯೂತ್ ರೆಡ್ ಕ್ರಾಸ್, ಕ್ರೀಡಾ ವಿಭಾಗ, ಐಕ್ಯೂಎಸಿ ಘಟಕದಿಂದ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ, ಸ್ವಾಮಿ ವಿವೇಕಾನಂದರ 161ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಷಿಕಾಗೋ ವಿಶ್ವಧರ್ಮ ಸಮ್ಮೇಳನದ ನಾಲ್ಕು ನಿಮಿಷದ ಭಾಷಣ ವಿದೇಶದಲ್ಲಿ ವಿವೇಕಾನಂದರ ನಾಲ್ಕು ವರ್ಷಗಳ ಸಂಚಾರ ಸಂಚಲನಕ್ಕೆ ಹೇಗೆ ಕಾರಣವಾಯಿತು ಎನ್ನುವುದು ಎಲ್ಲರಿಗೂ ತಿಳಿದಿದೆ. ಅಂದು ಮೂಡಿಸಿದ ಸಂಚಲನದಿಂದಾಗಿ ವಿವೇಕಾನಂದರು ಭೌತಿಕವಾಗಿ ಅಳಿದರೂ ಅವರ ಚಿಂತನೆ, ತತ್ವ, ಸಂದೇಶ ಜನರ ಮನಸ್ಸಿನಲ್ಲಿ ಸದಾ ಉಳಿದಿದೆ ಎಂದು ಹೇಳಿದರು.
ತಂದೆಯ ಸಾವಿನಿಂದ ವಿಚಲಿತನಾದ ನರೇಂದ್ರ ಅವರು, ಲೌಖಿಕ ಬದುಕಿನಿಂದ ಹೊರಬಂದು ಶ್ರೀರಾಮಕೃಷ್ಣ ಪರಮಹಂಸರ ಮಾರ್ಗದರ್ಶನದಲ್ಲಿ ಭಾರತದ ಆಧ್ಯಾತ್ಮಿಕ ಶಕ್ತಿಯಾಗಿ ಸ್ವಾಮಿ ವಿವೇಕಾನಂದರಾಗಿ ರೂಪುಗೊಂಡು ವಿಶ್ವಗುರುವಾದರು ಎಂದು ಬಣ್ಣಿಸಿದರು.
ನರೇಂದ್ರ ಜಗತ್ತಿಗೆ ಶಿಕ್ಷಣ ಕೊಡುತ್ತಾನೆ ಎಂಬ ರಾಮಕೃಷ್ಣರ ಇಚ್ಛಾಶಕ್ತಿಯನ್ನು, ವಿವೇಕಾನಂದರು ತಮ್ಮ ಸಂಚಾರ ದರ್ಶನದಿಂದ ಕ್ರಿಯಾಶೀಲಗೊಳಿಸಿದರು. ಕನ್ಯಾಕುಮಾರಿ ಕಡಲ ನಡು ಬಂಡೆ ಮೇಲೆ ಕುಳಿತು, ಮೂರು ಹಗಲು ಮೂರು ರಾತ್ರಿ ತಪಸ್ಸು ಮಾಡಿ, ಭಾರತಮಾತೆಯ ದರ್ಶನ ಪಡೆದಿದ್ದು, ಭಗವದ್ಗೀತೆಯ ಸಾರ ಸತ್ವವನ್ನು ಜಗತ್ತಿಗೆ ಸಾರಿದರು. ವಿವೇಕಾನಂದರ ಜೀವನ ನಮಗೆ ಸ್ಫೂರ್ತಿ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಮರೀಗೌಡ ಮಾತನಾಡಿ, ಸ್ವಾಮಿ ವಿವೇಕಾನಂದರ ವಿಚಾರಗಳು ಹೇಗೆ ಯುವ ಶಕ್ತಿಯ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ವಿವರಿಸಿದರು. ವಾಣಿಜ್ಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ.ಎಸ್.ಪೂರ್ಣಿಮಾ, ಅಧ್ಯಾಪಕ ಸಲಹೆಗಾರರರಾದ ಪ್ರೊ.ಡಿ.ಪಲ್ಲವಿ, ಪ್ರೊ.ಆರ್.ಅರವಿಂದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net