

ಮೈಸೂರು: ಸ್ವಾಮಿ ವಿವೇಕಾನಂದರ ತತ್ವಗಳು ಇಂದಿನ ಯುವಕರಿಗೆ ಪ್ರೇರಣೆ. ಅವರು ನೀಡಿರುವ ತತ್ವಗಳಿಂದ ತಮ್ಮ ವ್ಯಕ್ತತ್ವವನ್ನು ರೂಪಿಸಿಕೊಳ್ಳಬೇಕು ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.
ನೆಹರು ಯುವ ಕೇಂದ್ರ, ಮೈಸೂರು ನಗರ ಸಂಚಾರ ಪೊಲೀಸ್ ವತಿಯಿಂದ ಮಹಾರಾಜ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಯುವಜನರ ಮೇಲೆ ಅಪಾರ ನಂಬಿಕೆ ಹೊಂದಿದ್ದರು. ವಿವೇಕಾನಂದರ ಜೀವನ ಸಂದೇಶವನ್ನು ಯುವಜನರು ಅಳವಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅವರ ಜನ್ಮ ದಿನವನ್ನು ‘ಯುವ ದಿನ’ವಾಗಿ ಆಚರಿಸಲಾಗುತ್ತಿದೆ ಎಂದರು.
ಯುವಶಕ್ತಿಗೆ ಯಾವ ರೀತಿ ಪ್ರೇರಣೆ ನೀಡುತ್ತೇವೆಯೋ, ಅವರನ್ನು ಯಾವ ರೀತಿ ರೂಪಿಸುತ್ತೇವೆಯೋ ಆ ರೀತಿ ದೇಶ ಅಭಿವೃದ್ಧಿ ಹೊಂದುತ್ತದೆ. ಹೀಗಾಗಿ ಯುವಶಕ್ತಿ ಜಾಗೃರಾಗಿ ದೇಶ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸ್ವಾಮಿ ವಿವೇಕಾನಂದ ಜಯಂತಿ ಕೇವಲ ಆಚರಣೆಯಾಗಿ ಉಳಿಯಬಾರದು. ಈ ಜಯಂತಿ ಮೂಲಕ ಯುವಜನರ ಮನಪರಿವರ್ತನೆ ಆಗಬೇಕು. ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಅರಿತು ಮುನ್ನಡೆಯಬೇಕು ಎಂದರು.
ಪೊಲೀಸ್ ನಿರೀಕ್ಷಕ ಮೊಹಮ್ಮದ್ ಇರ್ಷಾದ್, ಪ್ರಾಂಶುಪಾಲ ಉದಯ್‌ಶಂಕರ್, ಉಪ ಪ್ರಾಂಶುಪಾಲ ಡಾ.ಡಿ.ಮಹೇಶ್, ಗುರುಪ್ರಸಾದ್, ಅಭಿಷೇಕ ಚವರೆ ಇತರರಿದ್ದರು.