

“ಶ್ರೀ ಕೃಷ್ಣನನ್ನು ಅರಿಯಬೇಕೆಂದರೆ ಭಗವದ್ಗೀತೆಯನ್ನು ಓದಬೇಕು, ಭಾರತವನ್ನು ಅರಿಯಬೇಕೆಂದರೆ ಮೊದಲಿಗೆ ಸ್ವಾಮಿ ವಿವೇಕಾನಂದರ ಕುರಿತು ತಿಳಿಯಬೇಕು, ಇದು ವಿವೇಕಾನಂದರ ಕುರಿತ ಖ್ಯಾತ ಕವಿ ರವೀಂದ್ರನಾಥ ಠಾಗೂರ್ ಅವರ ನುಡಿಮುತ್ತುಗಳು. ವಿವೇಕಾನಂದರು ಈ ನಾಡಿನಲ್ಲಿ ಹುಟ್ಟಿ 158 ವರ್ಷ ಕಳೆದರೂ, ಜಗತ್ತಿನ ಯುವಕರ ಮನಸ್ಸಿನಲ್ಲಿ ಅವರು ಮೂಡಿಸಿದ ಸ್ಪೂರ್ತಿಯ ಚಿಲುಮೆ ಮಾಸದೆ ಹಾಗೆಯೇ ಉಳಿದುಹೋಗಿದೆ. ಹಾಗಾಗಿಯೇ ಅವರನ್ನು ವಿಶ್ವಗುರು, ಸಂತ ಎಂದು ಕರೆಯುವುದು. 39 ವರ್ಷಗಳ ತಮ್ಮ ಜೀವಿತಾವಧಿಯಲ್ಲಿ ಯಾರೂ ಊಹಿಸಲಾರದಷ್ಟು ಸಾಧನೆ ಮಾಡಿದ ವಿವೇಕಾನಂದರ ಸಂದೇಶ, ಆದರ್ಶ, ಚಿಂತನೆಗಳು ಇಂದಿಗೂ ಎಂದಿಗೂ ಎಂದೆಂದಿಗೂ ಅಜರಾಮರ.
ವಿವೇಕಾನಂದರ ಬಾಲ್ಯದ ಜೀವನ ಎಲ್ಲರಿಗೂ ತಿಳಿದ ವಿಚಾರ. ಹಾಗೆಯೇ ಸ್ವಾಮಿ ವಿವೇಕಾನಂದರು 1893 ನೇ ಇಸವಿ, ಸೆಪ್ಟಂಬರ್ 11ನೇ ತಾರೀಖಿನಂದು ಅಮೇರಿಕಾದ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಹಿಂದು ಧರ್ಮದ ಪ್ರತಿನಿಧಿಯಾಗಿ ಭಾಷಣ ಮಾಡಿದ್ದು, ಭಾಷಣದಲ್ಲಿ ಮೊದಲಿಗೆ “ಅಮೇರಿಕದ ಸಹೋದರ ಸಹೋದರಿಯರೇ ಎಂದು ಸಭಿಕರನ್ನು ಸಂಬೋಧಿಸಿದ್ದಕ್ಕೆ, ಕಿವಿ ಕಿವುಡಾಗುವಂತೆ ಎರಡು ನಿಮಿಷಗಳ ಕರತಾಡವಾಯಿತು” ಎಂಬ ವಿಚಾರವನ್ನು ನಾವು ತಿಳಿದ್ದಿದ್ದೇವೆ. ಕೇವಲ ಅಮೇರಿಕಾದ ಸಹೋದರ ಸಹೋದರಿಯೇ ಎಂದಿದ್ದಕ್ಕೇ ಅವರನ್ನು ವಿಶ್ವಗುರುವೆಂದು ಪರಿಗಣಿಸಲಿಲ್ಲ. ವಿಶ್ವಧರ್ಮ ಸಮ್ಮೇಳನದಲ್ಲಿ ಉಪನ್ಯಾಸ ನೀಡುವ ಮುಂಚೆ ಅನಾಮಧೇಯರಾಗಿದ್ದ ವಿವೇಕಾನಂದರು ಉಪನ್ಯಾಸದ ನಂತರ ಜಗದ್ವಿಖ್ಯಾತರಾದರು. ಅಂದು ಅವರು ಜಗತ್ತಿನ ಧರ್ಮಗಳ ಅಂಧಕಾರ ಹೋಗಲಾಡಿಸಲು ಮಾಡಿದ ಸುಮಾರು 15 ನಿಮಿಷಗಳ ಭಾಷಣದ ಬಗ್ಗೆ ಬೆಳಕು ಚೆಲ್ಲುವುದೇ ನಮ್ಮ ಉದ್ದೇಶ.
ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಉಪನ್ಯಾಸ ನೀಡುವುದಕ್ಕೂ ಮುನ್ನ ಹಲವರು ಭಾಷಣ ಮಾಡಿದ್ದರು. ಅವರಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬ್ರಹ್ಮಸಮಾಜದ ಮಜುಂದಾರ್ ರವರು, ಥಿಯಾಸಫಿಕಲ್ ಸೊಸೈಟಿ ಪ್ರಧಾನಿಯಾದ ಶ್ರೀಮತಿ ಅನಿಬೆಸಂಟ್ ತಮ್ಮ ಸುಂದರ ಭಾಷಣವನ್ನು ಮುಗಿಸಿದ್ದರು. ಸಭೆಯಲ್ಲಿ ಅಂತಿಮವಾಗಿ ವಿವೇಕಾನಂದರಿಗೆ ಭಾಷಣ ಮಾಡಲು ಅವಕಾಶ ದೊರೆಯಿತು. ಸಭೆಯ ಕಡೆಯ ಗಳಿಗೆಯಾದ್ದರಿಂದ ಸಭಿಕರೆಲ್ಲರೂ ಸಭಾಗಣ ತೊರೆಯುತ್ತಿದ್ದರು. ಈ ವೇಳೆ ವಿವೇಕಾನಂದರು, “ಅಮೇರಿಕಾದ ಸಹೋದರ ಸಹೋದಿಯರೆ” ಎಂದು ಸಭಿಕರನ್ನು ಸಂಭೋದಿಸಿದರು. ತಕ್ಷಣ ಸಭೆಯಿಂದ ತೆರಳುತ್ತಿದ್ದ ಸಭಿಕರು ನಿಂತಲ್ಲಿಯೇ ಸ್ಥಬ್ದರಾಗಿ ಹಿಂದೆ ನೋಡಿದರು. ಏಕೆಂದರೆ, ಇದುವರೆಗೆ ಯಾವ ಉಪನ್ಯಾಸಕರು ಸಭಿಕರನ್ನು ಸಹೋದರ ಸಹೋದರಿಯರೆ ಎಂದು ಸಂಬೋಧಿಸಿರಲಿಲ್ಲ. ಅನ್ಯದೇಶ ಸನ್ಯಾಸಿಯೊಬ್ಬರು, ಬೇರೆ ಧರ್ಮಕ್ಕೆ ಸೇರಿದವರು ನಮ್ಮನೆಲ್ಲ ಸಹೋದರ ಸಹೋದರಿ ಎಂದು ಕರೆಯಬೇಕಾದರೆ ಅವರ ಹೃದಯ ಎಷ್ಟು ವಿಶಾಲವಾಗಿರಬೇಕು ಎಂಬುದನ್ನು ಈ ಮಾತುಗಳಿಂದ ಅರಿತರು.
“ನೀವು ನಮಗೆ ಪ್ರೀತಿಪೂರ್ವಕವಾಗಿ ಕೊಟ್ಟ ಸ್ವಾಗತಕ್ಕೆ ಉತ್ತರ ಹೇಳಬೇಕೆಂದು ಬಯಸಿದಾಗ, ನನ್ನ ಹೃದಯ ಒಂದು ಅವರ್ಣನೀಯ ಆನಂದದಿಂದ ತುಂಬಿ ತುಳುಕಾಡುತ್ತದೆ. ಜಗತ್ತಿನಲ್ಲಿ ಅತ್ಯಂತ ಪ್ರಾಚೀನ ಸನ್ಯಾಸಿಗಳ ಪಂಥದ ಪರವಾಗಿ ನಾನು ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಎಲ್ಲಾ ಮತಕ್ಕೆ ಸೇರಿದ ಕೋಟ್ಯಾನುಕೋಟಿ ಭಾರತೀಯರ ಪರವಾಗಿ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಜಗತ್ತಿಗೆಲ್ಲ ಧಾರ್ಮಿಕ ಸಹಾನುಭೂತಿ ಮತ್ತು ಸಾರ್ವತ್ರಿಕ ಅಂಗೀಕಾರವನ್ನು ಬೋಧಿಸಿದ ಧರ್ಮಕ್ಕೆ ನಾನು ಸೇರಿರುವೆನು ಎಂಬುದು ಒಂದು ಹೆಮ್ಮೆ. ನಾವು, ಭಾರತೀಯರು ವಿಶ್ವ ಸಹಾನುಭೂತಿಯನ್ನು ಮಾತ್ರ ಒಪ್ಪಿಕೊಳ್ಳುತ್ತೇವೆ. ಎಲ್ಲಾ ಜನಾಂಗದಲ್ಲಿಯೂ ಎಲ್ಲಾ ಧರ್ಮದಲ್ಲಿಯೂ ಕೋಟಲೆಗೆ ಸಿಕ್ಕಿ ತುತ್ತಾಗಿ ನಿರಾಶ್ರಿತರಾದವರಗೆ ಆಶ್ರಯವನ್ನು ಕಲ್ಪಿಸಿಕೊಟ್ಟ ದೇಶಕ್ಕೆ ನಾನು ಸೇರಿದವನೆಂಬುದು ನನಗೆ ಹೆಮ್ಮೆ. ರೋಮನ್ ಚಕ್ರಾಧಿಪತ್ಯದ ದೌರ್ಜನ್ಯದಿಂದ ಯಹೂದ್ಯರ ಪವಿತ್ರ ದೇವಾಲಯ ನುಚ್ಚುರಾಗಿಹೋಯಿತೋ, ಆಗ ಯಹೂದ್ಯರು ದಕ್ಷಿಣ ಭರತಖಂಡಕ್ಕೆ ಬಂದು ನಮ್ಮ ಆಶ್ರಯವನ್ನು ಪಡೆದರು. ಅವರನ್ನು ಕೂಡ ಹೃದಯದಲ್ಲಿ ಅಳವಡಿಸಿಕೊಂಡಿರುವೆವು ಎಂದು ಹೇಳುವುದು ನನಗೆ ಹೆಮ್ಮೆ. ಪ್ರಖ್ಯಾತರಾದ ಜರತುಷ್ಟ ಜನಾಂಗದವರಿಗೆ (ಪಾರ್ಸಿ ಮತ) ಆಶ್ರಯವಿತ್ತು, ಇಂದಿಗೂ ಅವನ್ನು ಪೋಷಿಸುತ್ತಿರುವ ಧರ್ಮಕ್ಕೆ ನಾನು ಸೇರಿದವನೆಂದು ಹೇಳಿಕೊಳ್ಳುವುದು ನನಗೆ ಹೆಮ್ಮೆ.
ಭಗವದ್ಗೀತೆಯಲ್ಲಿ ಭಗವಂತನು ಹೇಳಿರುವಂತೆ, “ಬೇರೆ ಬೇರೆ ಸ್ಥಳಗಳಲ್ಲಿ ಹುಟ್ಟುವ ಹಲವು ನದಿಗಳು ಕೊನೆಗೆ ಎಲ್ಲಾ ಸಾಗರಕ್ಕೆ ಸೇರುವಂತೆ, ಹೇ ಭಗವಂತನೇ, ಮಾನವರು ಅವರವರ ಸಂಸ್ಕಾರಗಳಿಗೆ ತಕ್ಕಂತೆ ತಮ್ಮ ಧರ್ಮಗಳನ್ನು ಅನುಸರಿಸುವರು, ನೇರವಾಗಿಯೋ ವಕ್ರವಾಗಿಯೋ ಇರುವ ಬೇರೆ ಬೇರೆ ದಾರಿಗಳಿಂದ ಭಗವಂತನೆಡೆಗೆ ಸೇರುವರು” . ಭಗವಂತನು ಹೇಳಿದ ಹಾಗೆ " ಯಾರದರೂ ಆಗಲಿ, ಯಾವ ಆಕಾರವನ್ನಾದರೂ ಆಗಲಿ ಪೂಜಿಸಿ ನಮ್ಮಲ್ಲಿಗೆ ಬಂದರೆ ನಾನು ಅವರನ್ನು ಹಾಗೆಯೇ ಅನುಗ್ರಹಿಸುವೆನು, ಪ್ರತಿ ಧರ್ಮದ ಅನುಯಾಯಿಗಳು ಕೊನೆಗೆ ಹಲವು ಆಚರಣೆಗಳ ಮೂಲಕ ನನ್ನನ್ನೇ ಮುಟ್ಟುವ ಪ್ರಯತ್ನಗಳಲ್ಲಿರುವರು - ಎಂಬ ಸಂದೇಶವನ್ನು ಜಗತ್ತಿಗೆ ಸಾರುವುದಕ್ಕೆ ಈ ವಿಶ್ವಧರ್ಮ ಸಮ್ಮೇಳನವೇ ಸಾಕ್ಷಿ.
ಸ್ವಮತಾಭಿಮಾನ, ಅನ್ಯಮತದ್ವೇಷ, ನನ್ನ ಧರ್ಮವೇ ಶ್ರೇಷ್ಠ ಮತ್ತು ಇವುಗಳಿಂದ ಉತ್ಪನ್ನವಾದ ಘೋರಧರ್ಮ, ದುರಭಿಮಾನ, ಈ ಸುಂದರ ಜಗತ್ತನ್ನು ಬಹುಕಾಲದಿಂದಲೂ ಆವರಿಸಿಕೊಂಡು ಜಗತ್ತನ್ನು ಹಿಂಸೆಯಿಂದ ತುಂಬುವಂತೆ ಮಾಡಿದೆ. ಧರ್ಮ ಧರ್ಮಗಳ ಸಂಘರ್ಷ ಹಲವು ವೇಳೆ ನರರಕ್ತದಿಂದ ತೋಯಿಸಿರುವುವು. ಸಂಸ್ಕೃತಿಗಳನ್ನು ನಾಶಮಾಡಿರುವುವು, ಹಲವು ದೇಶಗಳನ್ನು ನಿರಾಶೆಯ ಕೂಪಕ್ಕೆ ತಳ್ಳಿರುವುವು. ಇಂತಹ ಉಗ್ರದೈತ್ಯನಿಲ್ಲದೇ ಇದ್ದಿದ್ದರೆ, ಮಾನವಜನಾಂಗ ಇಂದಿಗಿಂತಲೂ ಎಷ್ಟೋ ಮುಂದುವರಿಯಬಹುದಾಗಿತ್ತು. ಆದರೆ ಅವುಗಳ ಅಂತ್ಯಕಾಲ ಸಮೀಪಿಸಿದೆ. ಈ ವಿಶ್ವಧರ್ಮ ಸಮ್ಮೇಳನವು ಸೂಚಿಸಿದ ಘಂಟಾನಾದವು, ಖಡ್ಗದ ಮೂಲಕವಾಗಲಿ, ಲೇಖನಿಯ ಮೂಲಕವಾಗಲಿ, ಎಲ್ಲಾ ಮತಾಂಧತೆಯ, ಅನ್ಯಮತ ಹಿಂಸೆಯು ಸಂಪೂರ್ಣವಾಗಿ ನಿಲ್ಲಬೇಕು. ಹಾಗೆಯೇ ಎಲ್ಲಾ ಮತಗಳು ಒಂದೇ ಗುರಿಯೆಡೆಗೆ ಸಾಗುವ ದಾರಿಗಳಲ್ಲಿ ಆದ ಮನಸ್ತಾಪಗಳೆಂಬ ಭೂತಗಳ ಅಂತ್ಯಕ್ರಿಯೆಯನ್ನು ಜಗತ್ತಿಗೆ ಈ ಸಮ್ಮೇಳನದ ಮೂಲಕ ಧ್ವನಿಯಾಗಲೆಂಬುದೇ ನನ್ನ ಆಶಯ ಎಂದು ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದಲ್ಲಿನ ವೈಚಾರಿಕ ಜ್ಞಾನ, ಅಂತಃಸತ್ವವನ್ನು ಮನಮುಟ್ಟುವಂತೆ ವಿಷದಪಡಿಸಿದರು.
ಸ್ವಾಮಿ ವಿವೇಕಾನಂದರ ಈ ಪ್ರಖರ ಮಾತುಗಳು ನೆರೆದಿದ್ದ ಸಭಿಕರ ಹೃದಯವನ್ನು ತೂರಿಕೊಂಡು ಪ್ರವೇಶಿಸಿತು. ನೆರೆದಿದ್ದ ಎಲ್ಲರಿಗೂ ಒಮ್ಮೆ ರೋಮಾನಂಚನವಾಯಿತು. ವಿವೇಕಾನಂದರಿಗೂ ಮುಂಚೆ ಅನೇಕ ಧರ್ಮಬೋಧಕರು ತಮ್ಮತಮ್ಮ ಧರ್ಮಗಳೇ ಶ್ರೇಷ್ಠ ಎಂದು ಹೇಳಿದ ಮಾತುಗಳನ್ನು ಕೇಳಿ ಸಭಿಕರಿಗೆ ಸಾಕಾಗಿ ಹೋಗಿತ್ತು. ಸ್ವಾಮಿಗಳ ಮಾತು ಕತ್ತಲೆಯ ಕೋಣೆಗೆ ಬೆಳಕು ಚೆಲ್ಲಿದಂತೆ ಸಭಿಕರಲ್ಲಿ ಹೃದಯವೈಶಾಲ್ಯತೆಯ ಜ್ಞಾನೋದಯವಾಯಿತು. ಉಪನ್ಯಾಸ ಮಾಡುವುದಕ್ಕಿಂತ ಮೊದಲು ಅನಾಮಧೇಯರಾಗಿದ್ದ ವಿವೇಕಾನಂದರು ಜಗದ್ವಿಖ್ಯಾತರಾದರು. ಎಲ್ಲಾ ವೃತ್ತಪತ್ರಿಕೆಗಳಲ್ಲಿ ವಿವೇಕಾನಂದರ ಭಾಷಣದ ಸಾರದ ಜೊತೆಗೆ ಅವರ ಭಾವಚಿತ್ರವು ರಾರಾಜಿಸಿದವು. ಒಂದು ವೃತ್ತ ಪತ್ರಿಕೆಯಂತೂ ಅವರನ್ನು ವರ್ಣಿಸಿದ ರೀತಿ ಹೀಗಿದೆ.
"ಸರ್ವಮತ ಸಮ್ಮೇಳನದಲ್ಲಿ ವಿವೇಕಾನಂದರೇ ಶ್ರೇಷ್ಠ ವ್ಯಕ್ತಿ, ಅವರ ಭಾಷಣವನ್ನು ಕೇಳಿದಮೇಲೆ ಇಂತಹ ಸುಸಂಸ್ಕೃತ ಜನಾಂಗದ ಭಾರತಕ್ಕೆ ನಾವು(ಕೈಸ್ತರು) ಧರ್ಮ ಪ್ರಚಾರಕರನ್ನು ಕಳುಹಿಸುವುದು ಶುದ್ಧ ಮುರ್ಖತನವೆಂದು ಭಾವಿಸುತ್ತೇವೆ".
ಹೀಗೆ ವಿಶ್ವಧರ್ಮ ಸಮ್ಮೆಳನದಲ್ಲಿ ಭಾರತದ ವೀರಸನ್ಯಾಸಿ ವಿವೇಕಾನಂದರು ತಮ್ಮ ಭಾಷಣದ ಮೂಲಕ ಎಲ್ಲಾ ಧರ್ಮದವರು ತಮ್ಮ ಧರ್ಮವೇ ಶ್ರೇಷ್ಠವೆಂದುಕೊಂಡು ಬಾವಿಯ ಕಪ್ಪೆಗಳಾಂತಾಗಿದ್ದರು. ಅವರನ್ನು ಹೊರತಂದು ಬಾವಿಗಿಂತ ಸಮುದ್ರವಿದೆ ಎಂದು ತೋರಿಸಿ ಎಲ್ಲರ ಕಣ್ಣುತೆರೆಸಿದ್ದು ವಿಸ್ಮಯ.
ಕೃಪೆ: ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ
| ರಾಘವೇಂದ್ರ ಪೂಜಾರಿ ಹೆಚ್ ಎಸ್