ಸ್ವಾಮಿ ವಿವೇಕಾನಂದ ಮಹಾನ್ ನಾವಿಕ

21 ckm 4
ಚಿಕ್ಕಮಗಳೂರಿನ ಓಂಕಾರೇಶ್ವರ ದೇವಾಲಯದ ಸಭಾಂಗಣದಲ್ಲಿ ಯುವ ಲೇಖಕಿ ನಾಗಶ್ರೀ ತ್ಯಾಗರಾಜ್ ಅವರು ಬರೆದಿರುವ 'ಚಿಕ್ಕಮಗಳೂರು ಟು ಚಿಕಾಗೋ' ಕೃತಿಯನ್ನು ಖ್ಯಾತ ವಾಗ್ಮಿ ವೀಣಾ ಬನ್ನಂಜೆ ಲೋಕಾರ್ಪಣೆಗೊಳಿಸಿದರು. ನಾಗಶ್ರೀ ತ್ಯಾಗರಾಜ್, ಹಿರೇಮಗಳೂರು ಕಣ್ಣನ್, ಸ.ಗಿರಿಜಾಶಂಕರ್, ಕಾಡಶೆಟ್ಟಿಹಳ್ಳಿ ಶ್ರೀನಿವಾಸ್ ಪದ್ಮ ಚರಣ್ ಉಪಸ್ಥಿತರಿದ್ದರು.
Published on

ಚಿಕ್ಕಮಗಳೂರು: ಸ್ವಾಮಿ ವಿವೇಕಾನಂದ ಎಂಬ ಮಹಾನ್ ನಾವಿಕ ಅಮೇರಿಕಾದ ವಿಶ್ವಧರ್ಮ ಸಮ್ಮೇಳನ ಎಂಬ ಸಾಗರವನ್ನು ಯಶಸ್ವಿಯಾಗಿ ದಾಟಿದರಾದರೂ, ಆ ಮಹಾನ್ ಯತಿಯ ಸುಧೀರ್ಘ ಪಯಣಕ್ಕೆ ಗಂಗೋತ್ರಿ ಆದವರು ಅಳಸಿಂಗ ಪೆರುಮಾಳರು ಎಂದು ಖ್ಯಾತ ವಾಗ್ಮಿ ವೀಣಾ ಬನ್ನಂಜೆ ತಿಳಿಸಿದರು.

ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರನ್ನು ಚಿಕಾಗೋದ ವಿಶ್ವಧರ್ಮ ಸಮ್ಮೇಳನಕ್ಕೆ ಕಳುಹಿಸಿಕೊಟ್ಟ ಅಳಸಿಂಗ ಪೆರುಮಾಳ್ ಕುರಿತು ಯುವ ಲೇಖಕಿ ನಾಗಶ್ರೀ ತ್ಯಾಗರಾಜ್ ಅವರು ಬರೆದಿರುವ 'ಚಿಕ್ಕಮಗಳೂರು ಟು ಚಿಕಾಗೋ' ಕೃತಿಯನ್ನು ನಗರದ ಓಂಕಾರೇಶ್ವರ ದೇವಾಲಯದ ಸಭಾಂಗಣದಲ್ಲಿ ಭಾನುವಾರ ಲೋಕಾರ್ಪಣೆ ಮಾಡಿ ಮಾತನಾಡಿದರು.
ಭಾರತದ ಇತಿಹಾಸದಲ್ಲಿ ಮಹತ್ತರ ತಿರುವು ದೊರೆತ ಘಟ್ಟ ಸ್ವಾಮಿ ವಿವೇಕಾನಂದರ ಅವತರಣದ ಕಾಲ. ಸನ್ಯಾಸ ಎಂಬ ಪದಕ್ಕೆ ಕ್ರಾಂತಿಕಾರಿ ಅರ್ಥವನ್ನು ಒದಗಿಸಿದ ಹಾಗೂ ವಿಶ್ವದ ಯಾವುದೇ ವಿಷಯಕ್ಕೆ ಧನಾತ್ಮಕವಾದ ಚಿಂತನೆಯ ದಿಶೆಯಿತ್ತು ಮಾನವ ಅಭ್ಯುದಯಕ್ಕೆ ನಾಂದಿ ಹಾಡಿದ ವಿಶ್ವಗುರು ಸ್ವಾಮಿ ವಿವೇಕಾನಂದ. ಆ ಮಹಾನ್ ಯತಿಯ ಬದುಕಿನುದ್ದಕ್ಕೂ ಊರುಗೋಲಿನಂತೆ ಸಹಾಯವಿತ್ತು ಸೇವೆಗೈದ ಆಹರ್ನಿಶಿ ಗುರುವಿನ ಸೇವೆಗಾಗಿಯೇ ಶ್ರಮಿಸಿದವರು ಅಳಸಿಂಗ ಪೆರುಮಾಳರು ಎಂದರು.
ಅಳಸಿಂಗ ಪೆರುಮಾಳರು ತಮಗಾಗಿ ಹುಟ್ಟಿ ಬಂದವರಲ್ಲ. ಬದಲಿಗೆ ಸ್ವಾಮಿ ವಿವೇಕಾನಂದ ಅವರ ಮೂಲಕ ಭಾರತೀಯ ಸಂಸ್ಕೃತಿ. ಪರಂಪರೆಯನ್ನು ಬೆಳೆಸಲು ಬಂದವರು. ಸ್ವಾಮಿ ವಿವೇಕಾನಂದರಿಗೆ ಮೆಟ್ಟಿಲಾಗಿ ನಿಂತವರು. ಅಳಸಿಂಗ ಪೆರುಮಾಳರು ಶ್ರೀರಾಮನಿಗೆ ಕೋದಂಡವಿದ್ದ ಹಾಗೆ, ಅರ್ಜುನನಿಗೆ ಗಾಂಡೀವವಿದ್ದ ಹಾಗೆ. ಪೆರುಮಾಳರಿಲ್ಲದೇ ವಿವೇಕಾನಂದರು ಅಪೂರ್ಣ ಎಂದು ತಿಳಿಸಿದರು.
ಅಳಸಿಂಗ ಪೆರುಮಾಳರು ವೀರ ಸನ್ಯಾಸಿ ವಿವೇಕಾನಂದರನ್ನು ಅಮೆರಿಕಕ್ಕೆ ಕಳುಹಿಸುವ ಕೆಲಸವನ್ನಷ್ಟೇ ಮಾಡಲಿಲ್ಲ. ನಂತರದ ಪರಿಣಾಮಗಳನ್ನು, ವಿವೇಕಾನಂದರ ವಿದ್ವತ್ ಪ್ರಪಂಚವನ್ನು ಭಾರತೀಯರಿಗೆ ಪರಿಚಯಿಸುವ ಕೆಲಸವನ್ನೂ ಮಾಡಿದರು. ವಿವೇಕಾನಂದ ಎಂಬ ಯುಗಯೋಗಿಯ ಬದುಕಿನಲ್ಲಿ ಗುಪ್ತಗಾಮಿನಿಯಂತೆ ಪ್ರವಹಿಸಿದ ಕೀರ್ತಿ ಅಳಸಿಂಗರಿಗೆ ಸಲ್ಲುತ್ತದೆ ಎಂದರು.
ಅಳಸಿAಗ ಪೆರುಮಾಳರ ಕುರಿತ ಕೃತಿಯನ್ನು ಬರೆಯುವ ಮೂಲಕ ನಾಗಶ್ರೀ ತ್ಯಾಗರಾಜ್ ಅವರು ಬಹಳ ದೊಡ್ಡ ಕೆಲಸವನ್ನು ಮಾಡಿದ್ದಾರೆ. ಈ ಕೃತಿ ಅನುವಾದ ಎನಿಸುವುದೇ ಇಲ್ಲ. ಬದಲಿಗೆ ಮೂಲಕೃತಿಯೇ ಇದು ಎಂಬAತಿದೆ. ಚಿಕ್ಕಪುಸ್ತಕದಲ್ಲಿ ಮೇರು ವ್ಯಕ್ತಿತ್ವವನ್ನು ಹಿಡಿದಿಟ್ಟ ರೀತಿಯೂ ಸೊಗಸಾಗಿದೆ ಎಂದು ಶ್ಲಾಘಿಸಿದರು.
ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ, ಚಿಕ್ಕಮಗಳೂರಿನಿಂದ ಚಿಕಾಗೋ ಧರ್ಮ ಸಮ್ಮೇಳನಕ್ಕೆ ಅಳಸಿಂಗ ಪೆರುಮಾಳ್ ಎಂಬ ವ್ಯಕ್ತಿ ವಿವೇಕಾನಂದರನ್ನು ಹಣ ಸಂಗ್ರಹಿಸಿ ಕಳುಹಿಸಿಕೊಟ್ಟರೆಂಬ ವಿಚಾರ ಇಲ್ಲಿನ ಜನಕ್ಕೆ ತಿಳಿದಿಲ್ಲದಿರುವುದು ವಿಷಾದಕರ ಸಂಗತಿ. ಅಳಸಿಂಗರು ಹುಟ್ಟಿದ್ದು ಚಿಕ್ಕಮಗಳೂರಿನ ಬಸವನಹಳ್ಳಿಯಲ್ಲಿ. ಅಳಸಿಂಗರು ಪೂಜಾರ್ಹ ವ್ಯಕ್ತಿ ಎಂದರು.
ಲೇಖಕಿ ನಾಗಶ್ರೀ ತ್ಯಾಗರಾಜ್ ಮಾತನಾಡಿ, ಈ ಕೃತಿಯ ಬಿಡುಗಡೆಯ ಮೂಲಕ ತಮ್ಮ ಏಳು ವರ್ಷಗಳ ಕನಸು ನನಸಾಗಿದೆ. ಈ ಕೃತಿಯ ಮೂಲ ಕರ್ತೃ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್. ಅವರ ಪ್ರೇರಣೆ, ನಿರಂತರ ಪ್ರೋತ್ಸಾಹದಿಂದಾಗಿ ಕೃತಿಯನ್ನು ಬರೆಯಲು ತಮಗೆ ಸಾಧ್ಯವಾಯಿತು ಎಂದು ತಿಳಿಸಿದರು.
ಇದೇ ವೇಳೆ ಲೇಖಕಿ ನಾಗಶ್ರೀ ತ್ಯಾಗರಾಜ್ ದಂಪತಿ ಮತ್ತು ಖ್ಯಾತವಾಗ್ಮಿ ವೀಣಾ ಬನ್ನಂಜೆ ಅವರನ್ನು ವಿವಿಧ ಸಂಘ ಸಂಸ್ಥೆಗಳಿAದ ಸನ್ಮಾನಿಸಲಾಯಿತು. ಅಳಸಿಂಗ ಪೆರುಮಾಳ್ ಅವರ ಮರಿ ಮಗ ಕಣ್ಣನ್ ಹಾಗೂ ಅವರ ಕುಟುಂಬದವರನ್ನು, ಪುಸ್ತಕ ಹೊರ ತರಲು ಸಹಕರಿಸಿದವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಹಿರಿಯ ಪತ್ರಕರ್ತ ಸ. ಗಿರಿಜಾ ಶಂಕರ್. ಉದ್ಯಮಿ ಕಾಡಶೆಟ್ಟಿಹಳ್ಳಿ ಶ್ರೀನಿವಾಸ್ ಪದ್ಮ ಚರಣ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net