

ಮಂಡ್ಯ: ಸ್ವಾಮಿ ವಿವೇಕಾನಂದರು ಮಹಾನ್ ಸಾಧನೆಯನ್ನು ಮಾಡಿದ್ದರಿಂದ ಅವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಆದ್ದರಿಂದ ಅವರ ಸಾಧನೆ ಹಾಗೂ ರಾಷ್ಟೀಯ ಯುವ ದಿನ ಯುವಕರಿಗೆ ಪ್ರೇರಣೆಯಾಗಲಿ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಶಾರದಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ವಿಶ್ವವಿದ್ಯಾಲಯ ಹಾಗೂ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟೀಯ ಯುವ ದಿನದಂದು ರಾಜ್ಯ ಸರ್ಕಾರವು ಯುವನಿಧಿ ಯೋಜನೆಯನ್ನು ಉದ್ಘಾಟಿಸುತ್ತಿರುವುದು ಸಂತೋಷದ ವಿಷಯ. ಈ ಯೋಜನೆಯ ಸೌಲಭ್ಯವನ್ನು ಎಲ್ಲ ಅರ್ಹ ಅಭ್ಯರ್ಥಿಗಳು ಪಡೆದುಕೊಳ್ಳಬೇಕು ಎಂದರು.
ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ವಿವೇಕಾನಂದರು ಘೋಷಣೆಯಂತೆ ಯುವಜನರು ಎಚ್ಚರಗೊಳ್ಳಿ. ಸ್ಟುಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್. ಆದ್ದರಿಂದ ವಿದ್ಯಾರ್ಥಿಗಳು ಬೇಡದ ವಿಚಾರಕ್ಕೆ ಗಮನಕೊಡದೇ ನಿರ್ದಿಷ್ಟ ಗುರಿಯನ್ನಿರಿಸಿಕೊಂಡು ಸಾಧನೆ ಮಾಡಬೇಕು. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಓದಿನಿಂದ ಗುರಿ ಮುಟ್ಟಲು ಸಾಧ್ಯವಾಗುವುದಿಲ್ಲ. ಆದ್ದರಿಂದ ತಮ್ಮ ಬುದ್ಧಿ ಶಕ್ತಿ ಹಾಗೂ ಕೌಶಲವನ್ನು ಹೆಚ್ಚಿಸಿಕೊಂಡು ತಮ್ಮ ಗುರಿಯಡೆಗೆ ಸಾಗಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚು ಕಾಡುತ್ತಿದ್ದು, ಈ ಸಮಸ್ಯೆ ನಿವಾರಣೆಗೆಂದು ಬಸರಾಳು ಗ್ರಾಮದಲ್ಲಿ ಕಾರ್ಖಾನೆ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ. ಜಿಲ್ಲೆಯಲ್ಲಿ 75 ಎಕರೆಯ ಜಾಗದಲ್ಲಿ ಸಾಫ್ಟ್‌ವೇರ್ ಕಂಪನಿ ನಿರ್ಮಾಣ ಮಾಡಿ ಯುವ ಸಮೂಹಕ್ಕೆ ಉದ್ಯೋಗ ಕಲ್ಪಿಸುವ ಪ್ರಯತ್ನ ಮಾಡಲಾಗುವುದು. ಅಂತೆಯೇ ಹೊಸ ಷುಗರ್ ಕಾರ್ಖಾನೆ ನಿರ್ಮಾಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ, ಬೆಂಗಳೂರು ಕರ್ನಾಟಕ ಸರ್ವೋದಯ ಮಂಡಳಿ ಅಧ್ಯಕ್ಷ ಎಚ್.ಎಸ್.ಸುರೇಶ್, ಮಂಡ್ಯ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಪುಟ್ಟರಾಜು ಇತರರಿದ್ದರು. ಇದೇ ವೇಳೆ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲೆ, ಭಾಷಣ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.