

ಮಂಡ್ಯ: ಹಿಂದು ಧರ್ಮದ ಪರಿಕಲ್ಪನೆಯನ್ನು ಇಡೀ ಜಗತ್ತಿಗೆ ಪರಿಚಯಿಸಿದ ಸ್ವಾಮಿ ವಿವೇಕಾನಂದ ಅವರು ಮಹಾಚೇತನ ಎಂದು ವೈದ್ಯ ಡಾ. ಚಂದ್ರಶೇಖರ್ ಹೇಳಿದರು.
ನಗರದ ಎಸ್.ಡಿ. ಜಯರಾಂ ಆಸ್ಪತ್ರೆಯಲ್ಲಿ ಎಸ್.ಡಿ. ಜಯರಾಂ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಜಿಲ್ಲಾ ಗಾಯಕರ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಅವರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಇಂದು ಭಾರತದ ಜತೆಗೆ ಇಡೀ ಪ್ರಪಂಚವೇ ಮಹಾಚೇತನ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಆಚರಿಸುತ್ತಿದೆ. ಅವರ ವೈಜ್ಞಾನಿಕ ಚಿಂತನೆ, ಜಗತ್ತಿನ ಯುವಶಕ್ತಿಗೆ ನೀಡಿದ ಸಂದೇಶಗಳನ್ನು ನೆನಪಿಸಿಕೊಳ್ಳುವ ಸುದಿನ ನಡೆದಿದೆ. ಯುವ ಸಮುದಾಯಕ್ಕೆ ಬಹಳ ಸ್ಫೂರ್ತಿದಾಯಕ ವ್ಯಕ್ತಿತ್ವ ವಿವೇಕಾನಂದ ಅವರದ್ದಾಗಿದೆ ಎಂದರು.
ಆಸ್ಪತ್ರೆ ವೈದ್ಯಾಧಿಕಾರಿ ಡಾ. ಮಾದೇಶ್ ಮಾತನಾಡಿ, ವಿಶ್ವಕಂಡ ಸೋದರತ್ವದ ಭ್ರಾತೃತ್ವವನ್ನು ಬಿತ್ತರಿಸಿದ ಸ್ವಾಮಿ ವಿವೇಕಾನಂದ ಅವರ ಆದರ್ಶ, ಮೌಲ್ಯಗಳು ಮತ್ತು ಚಿಂತನೆಗಳನ್ನು ಮೈಗೂಡಿಸಿಕೊಂಡು ದೇಶ ಕಟ್ಟುವ ನಿಟ್ಟಿನಲ್ಲಿ ಯುವ ಸಮೂಹ ಸಾಗಬೇಕಿದೆ ಎಂದು ಹೇಳಿದರು. ಡಾ. ಕಾರ್ತಿಕ್, ಕೃಷ್ಣಮೂರ್ತಿ, ವಿದ್ಯಾಶ್ರೀ, ಆಶಾ, ಗಿರೀಶ್ ಇತರರಿದ್ದರು.