

ಮಂಡ್ಯ: ದೇಶದ ಯುವಕ ಆಸ್ತಿಯಾಗಬೇಕು. ಅಂತೆಯೇ ಅದು ಸರಿಯಾದ ರೀತಿಯಲ್ಲಿ ಸದ್ಭಳಕೆ ಆದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
ನಗರದ ಮಾಂಡವ್ಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾ ಯುವ ಪರಿಷತ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಎಸ್.ಬಿ ಎಜುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ 161ನೇ ಜನ್ಮ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಯುವ ಪ್ರಶಸ್ತಿ ಪ್ರದಾನ ಹಾಗೂ ಜಿಲ್ಲಾ ಯುವ ಪರಿಷತ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಜೀವನವನ್ನು ಸರಿಯಾದ ರೀತಿಯಲ್ಲಿ ರೂಪಿಸಿಕೊಳ್ಳುವಲ್ಲಿ ನಮ್ಮ ಭವಿಷ್ಯ ನಿಂತಿದೆ. ಪಾಲಕರು ಮತ್ತು ಶಿಕ್ಷಕರು ಮಕ್ಕಳನ್ನು ಮಾದರಿ ವಿದ್ಯಾರ್ಥಿಗಳನ್ನಾಗಿ ಮಾಡಲು ಹಠ ತೊಟ್ಟಿರುತ್ತಾರೆ. ಪಾಲಕರು ತಮ್ಮ ಮಕ್ಕಳು ಈ ದೇಶಕ್ಕೆ ಆಸ್ತಿಯಾಗಬೇಕು ಎಂದು ಬೆಳೆಸುತ್ತಾರೆ. ಇವರಿಬ್ಬರೇ ನಿಮ್ಮ ಬೆನ್ನು ತಟ್ಟಿ ಪ್ರೋತ್ಸಾಹಿಸುವಂತಹವರು. ಆದರೆ ಒಳ್ಳೆಯವರ ಸಹವಾಸ ಮಾಡಿದರೆ ಒಳ್ಳೆಯದನ್ನು ಕಲಿಯುತ್ತೇವೆ. ಕೆಟ್ಟವರ ಸಹವಾಸದಿಂದ ಕೆಟ್ಟ ಹಾದಿಯನ್ನು ತುಳಿಯುತ್ತೇವೆ. ಎಲ್ಲವೂ ನಮ್ಮ ಕೈಯ್ಯಲ್ಲೇ ಇದೆ. ಆದ್ದರಿಂದ ಆಯ್ಕೆಯನ್ನು ಬಹು ಎಚ್ಚರದಿಂದ ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಮಾತನಾಡಿ, ಮಾದಕ-ಮೋದಕಗಳಿಂದ ನೆನಪಿನ ಶಕ್ತಿ ಕಳೆದುಕೊಳ್ಳಬೇಕಾಗುತ್ತದೆ. ಮೊಬೈಲ್‌ನಿಂದ ನೆನಪಿನ ಶಕ್ತಿ ಹಾಳಾಗುತ್ತಿದೆ. ಆದ್ದರಿಂದ ಜ್ಞಾನ ಸಂಪತ್ತನ್ನು ಬೆಳೆಸಿಕೊಳ್ಳಬೇಕು. ಯಾವುದೇ ಮೊಬೈಲ್ ಟೆಕ್ನಾಲಜಿ ಇಲ್ಲದೆ ರಾಷ್ಟ್ರದ ಪ್ರತಿಭೆಯನ್ನು ಎತ್ತಿ ಹಿಡಿದವರು ಸ್ವಾಮಿ ವಿವೇಕಾನಂದರು. ಹಳೆಯ ತತ್ವಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಎಷ್ಟೇ ಅಭಿವೃದ್ಧಿಯಾದರೂ ಹಳೆಯ ತಳಹದಿಯ ಮೇಲೆ ಕಟ್ಟಬೇಕು. ಏಕಾಏಕಿ ಎಲ್ಲವನ್ನೂ ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಭಾರತೀಯ ರೆಡ್‌ಕ್ರಾಸ್ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್ ಉನ್ನತ ಶಿಕ್ಷಣ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಭೀಮರಾಜ್ ಈರೇಗೌಡ ವಿಶೇಷ ಉಪನ್ಯಾಸ ನೀಡಿದರು. ಕೃಷಿಕ್ ಲಯನ್ಸ್ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಮಾತನಾಡಿದರು. ಜಿಲ್ಲಾ ಯುವ ಪರಿಷತ್ ಅಧ್ಯಕ್ಷರಾಗಿ ಕಾರಸವಾಡಿ ಮಹದೇವು ಮತ್ತು ತಂಡದವರಿಗೆ ಮಾಜಿ ಅಧ್ಯಕ್ಷ ಮಂಗಲ ಎಂ. ಯೋಗೀಶ್ ಜವಾಬ್ದಾರಿ ಹಸ್ತಾಂತರಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕೆ.ಆರ್.ಪೇಟೆ ತಾಲೂಕು ಹೊಸಹೊಳಲು ಗ್ರಾಮದ ಕೆ.ಎನ್.ಪದ್ಮಿನಿ ಪ್ರಸನ್ನಕುಮಾರ್, ನಾಗಮಂಗಲ ಟಿ.ಬಿ ಬಡಾವಣೆಯ ಎ.ಎಂ.ಸಚ್ಚಿನ್‌ಕುಮಾರ್, ಪಾಂಡವಪುರ ತಾಲೂಕು ಮೇಲುಕೋಟೆಯ ಕೆ.ಆರ್.ಗಿರೀಶ್, ಶ್ರೀರಂಗಪಟ್ಟಣ ತಾಲೂಕು ಹೆಬ್ಬಾಡಿಹುಂಡಿಯ ಪುಟ್ಟಸ್ವಾಮಿ, ಮಂಡ್ಯ ತಾಲೂಕು ಬೇವಿನಹಳ್ಳಿಯ ಬಿ.ಎಸ್.ಚಂದ್ರಶೇಖರ್, ಮದ್ದೂರು ತಾಲೂಕು ಹೊಸಗಾವಿ ಗ್ರಾಮದ ಎಂ.ಪಿ.ಸೋನು ಹಾಗೂ ಮಳವಳ್ಳಿ ತಾಲೂಕು ದೇವಿಪುರ ಗ್ರಾಮದ ಶೇಖರ್ ಅವರಿಗೆ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು.