

ಕುಂದಗೋಳ: ಪಟ್ಟಣದ ನಾಡಗೇರಿ ಓಣಿಯಲ್ಲಿ ಸ್ವಾಮಿ ವಿವೇಕಾನಂದ ಗ್ರುಪ್ ವತಿಯಿಂದ ಭಾನುವಾರ ಸಿಡಿಲ ಸಂತ ಸ್ವಾಮಿ ವಿವೇಕಾನಂದರ 165ನೇ ಜಯಂತ್ಯುತ್ಸವ ಆಚರಿಸಲಾಯಿತು.
ಪಂಚಗ್ರಹ ಹಿರೇಮಠದ ಶಿತಿಕಂಠೇಶ್ವರ ಶಿವಾಚಾರ್ಯರು, ಕಲ್ಯಾಣಪುರಮಠದ ಅಭಿನವ ಬಸವಣ್ಣಜ್ಜನವರು ಹಾಗೂ ಶಿವಾನಂದ ಮಠದ ಮಹಾಂತ ಮಹಾಸ್ವಾಮೀಜಿಯವರು ಸ್ವಾಮಿ ವಿವೇಕಾನಂದ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದಕ್ಕೂ ಮುನ್ನ ಸವಾಯಿ ಗಂಧರ್ವ ಸ್ಮಾರಕ ಭವನದ ಮುಂಭಾಗದಿಂದ ಕುಂದಗೋಳ ನಗರದ ಪ್ರಮುಖ ಬೀದಿಗಳಲ್ಲಿ ಸ್ವಾಮಿ ವಿವೇಕಾನಂದ ಅವರ ಭಾವಚಿತ್ರದೊಂದಿಗೆ ಬೈಕ್ ರ‍್ಯಾಲಿ ನಡೆಸಲಾಯಿತು. ಪುಟ್ಟರಾಜ ಗವಾಯಿಗಳ ಶಿಷ್ಯ ಮೆಹಬೂಬಸಾಬ್ ನದಾಫ್ ಅವರು ಸ್ವಾಮಿ ವಿವೇಕಾನಂದರ ಹಾಡುಗಳೊಂದಿಗೆ ಸಂಗೀತ ಸುಧೆ ಹರಿಸಿದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ, ಕೆಪಿಸಿಸಿ ಸದಸ್ಯರಾದ ಚಂದ್ರಶೇಖರ ಜುಟ್ಟಲ, ಗೌಡಪ್ಪಗೌಡ ಪಾಟೀಲ, ರಾಜ್ಯ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಡಾ.ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು. ಶಂಕ್ರಪ್ಪ ಗೌರಿ, ಸಂಭಾಜಿ ತಡಸದ, ಬಸವರಾಜ ಶಿರಸಂಗಿ, ಬಸವರಾಜ ಮಾವಿನಕಾಯಿ, ಕಲ್ಲಪ್ಪ ದಿವಟಿ, ಯಲ್ಲಪ್ಪ ಮಾನಪ್ಪನವರ, ಪೀರಸಾಬ್ ನದಾಫ್, ಅನಿಲಕುಮಾರ ಮಾವಿನಕಾಯಿ, ಇತರರಿದ್ದರು.