ಯುವ ಜನರಿಗೆ ಸ್ವಾಮಿ ವಿವೇಕಾನಂದ ಸ್ಫೂರ್ತಿಯ ಸಂಕೇತ: ಶಾಸಕ ಎಚ್.ಪಿ. ಸ್ವರೂಪ್ ಅಭಿಮತ

12_HSN_04
Published on

ಹಾಸನ: ಭಾರತ ದೇಶದ ಶಕ್ತಿ ಏನೆಂಬುದನ್ನು ಇಡೀ ವಿಶ್ವಕ್ಕೆ ತಿಳಿಸಿಕೊಟ್ಟ ಕೀರ್ತಿ ಸ್ವಾಮಿ ವಿವೇಕಾನಂದರವರಿಗೆ ಸಲ್ಲುತ್ತದೆ. ಜತೆಗೆ ವಿವೇಕಾನಂದರು ಯುವ ಜನರಿಗೆ ಸ್ಫೂರ್ತಿಯ ಸಂಕೇತ ಎಂದು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಹೇಳಿದರು.

ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ಎಸ್‌ಡಿಎಂ ಕಾಲೇಜು ಅವರ ಸಹಯೋಗದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ಸಪ್ತಾಹ - 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಹೆಚ್ಚೆಚ್ಚು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಪುಸ್ತವನ್ನು ಆತ್ಮೀಯ ಸ್ನೇಹಿತನಾಗಿ ಮಾಡಿಕೊಳ್ಳಬೇಕು. ವಿವೇಕಾನಂದರ ಪುಸ್ತಕ ಓದುವಾಗ ಇನ್ನಷ್ಟು ಓದಬೇಕೆನ್ನುವ ಆಸಕ್ತಿ ಬರುತ್ತದೆ ಎಂದರು.

ಸ್ವಾಮಿ ವಿವೇಕಾನಂದರು ವಿದ್ವಾಂಸರು. ಲೋಕ ಸಂಚಾರಿ. ರಾಮಕೃಷ್ಣ ಪರಮಹಂಸರ ಪ್ರೇರಣೆಯಿಂದ, ಒಡನಾಟದಿಂದ ಅವರು ಕೂಡ ಆಧ್ಯಾತ್ಮಿಕವಾಗಿ ಚಿಂತಕರಾಗಿದ್ದಾರೆ. ಅಮೇರಿಕದಲ್ಲಿ ಅವರು ಮಾಡಿದ ಭಾಷಣ ಜಗದ್ವಿಖ್ಯಾತಿ ತಂದುಕೊಟ್ಟಿತು. ಲಂಡನ್‌ನಲ್ಲಿಯೂ ಕೂಡ ಅವರ ಒಂದು ಪುತ್ಥಳಿಯನ್ನು ಅನಾವರಣ ಮಾಡಲಾಗಿದೆ. ವಿವೇಕಾನಂದರ ಮೌಲ್ಯಗಳನ್ನು ನಾವುಗಳು ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.

ನಗರಸಭೆ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, ಸ್ವಾಮಿ ವಿವೇಕಾನಂದರು ಬಿಟ್ಟು ಹೋಗಿರುವ ಸಮಯ ಪಾಲನೆ, ಅವರ ಆದರ್ಶ, ಪ್ರೀತಿ, ವಿಶ್ವಾಶ, ತತ್ವ ಸಿದ್ಧಾಂತ ಹಾಗೂ ಯಾವ ರೀತಿ ಬದುಕಬೇಕು ಎನ್ನುವ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯದ ಮೂಲಕ ಬದುಕು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.

ಶ್ರೀ ಧರ್ಮಸ್ಥಳ ಆಯುರ್ವೇದ ಮಹಾವಿದ್ಯಾಲಯದ ನಿರ್ದೇಶಕ ಡಾ. ಪ್ರಸನ್ನ ಎನ್. ರಾವ್ ಮಾತನಾಡಿ, ವಿಶ್ವಕ್ಕೆ ಶಾಂತಿ ಸಂದೇಶ ಕೊಟ್ಟವರು. ಆಧ್ಯಾತ್ಮಿಕ ಚಿಂತನೆ ಹೊಂದಿದವರ ಜನ್ಮ ದಿನಾಚರಣೆ ನಡೆಸುತ್ತಿರುವುದು ಅರ್ಥಪೂರ್ಣವಾಗಿದೆ. ವಿವೇಕಾನಂದರ ಮಾತಿನಂತೆ ‘ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬ ಮಾತುಗಳನ್ನು ಇಂದಿಗೂ ಕೂಡ ಜೀವಂತವಾಗಿದ್ದು, ಸರ್ವರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದೇ ರೀತಿ ಜೀವನದಲ್ಲಿ ಗುರಿ ಇರಬೇಕು, ಪ್ರತಿನಿತ್ಯ ನನ್ನ ಕರ್ತವ್ಯ ಏನು, ಅದಕ್ಕೆ ಪೂರಕವಾಗಿ ನಾನು ಏನು ಮಾಡಿದ್ದೇನೆ. ನನ್ನ ಗುರಿಗಾಗಿ ನಾನು ಎಷ್ಟು ಶ್ರಮ ವಹಿಸುತ್ತೇವೆ ಎಂಬುದು ಬಹು ಮುಖ್ಯವಾಗಿರುತ್ತದೆ ಎಂದರು.

ಜಿಲ್ಲಾ ಯುವ ಸಬಲೀಕರಣ ಇಲಾಖೆ ಅಧಿಕಾರಿ ಸಿ.ಕೆ. ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿವೇಕಾನಂದವರು. 1893 ರಲ್ಲಿ ಚಿಕಾಗೊದಲ್ಲಿ ಮಾಡಿದ ಭಾಷಣ ಒಂದು ಇತಿಹಾಸ. ಜಗತ್ತಿಗೆ ಭ್ರಾತೃತ್ವದ ಮಹತ್ವವನ್ನು ತಿಳಿಸಿದರು. ಯುವ ಜನಾಂಗದ ಶಕ್ತಿಯ ಬಗ್ಗೆ ಪ್ರೇರಣಾ ಪೂರ್ವಕ ಅರಿವನ್ನು ಮೂಡಿಸಿದ್ದಾರೆ. ಸ್ವಾಮಿ ವಿವೇಕಾನಂದರ ಕರೆಯಂತೆ ಸತತ ಪರಿಶ್ರಮದಿಂದ ಗುರಿ ಮುಟ್ಟುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದರು.

ಕಾರ್ಯಕ್ರಮಕ್ಕೆ ಮೊದಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಆವರಣದ ಮುಖ್ಯದ್ವಾರದಲ್ಲಿ ಬೆಳ್ಳಿ ಸಾರೋಟಿನಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರವಿಟ್ಟು ವಿವಿಧ ಕಲಾತಂಡದೊಡನೆ ಮೆರವಣಿಗೆ ಮೂಲಕ ಕರೆತರಲಾಯಿತು. ಇದೆ ವೇಳೆ ಸ್ವಾಮಿ ವಿವೇಕಾನಂದರ ಕುರಿತು ಚಿತ್ರಕಲಾ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಕಲಾವಿದರಾದ ಕೆ.ಎನ್. ಶಂಕರಪ್ಪ, ಎಚ್.ಎಸ್. ಮಂಜುನಾಥ್ ಇತರರು ಬಿಡಿಸಿದ ವಿವೇಕಾನಂದರ ಚಿತ್ರಕ್ಕೆ ಗಣ್ಯರು ಬಣ್ಣ ತುಂಬಿ ಚಾಲನೆ ನೀಡಿದರು.

ಇದೆ ಸಂದರ್ಭದಲ್ಲಿ ಉತ್ತರ ಪ್ರದೇಶದ ಸತ್ಯನಾರಾಯಣ ಸಿಂಗ್, ಎಸ್‌ಡಿಎಂ ಕಾಲೇಜು ಪ್ರಾಂಶುಪಾಲರಾದ ಶೈಲಜಾ ಪ್ರಸನ್ನ, ಗುರು ಬಸವರಾಜು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net