

ಮಂಡ್ಯ: ಸ್ವಾಮಿ ವಿವೇಕಾನಂದ ಅವರು ಹಲವು ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆಯಾದರೆ, ಕೋಟ್ಯಂತರ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
ನಗರದ ಕೆಎಚ್‌ಬಿ ಬಡಾವಣೆಯಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದ ಆವರಣದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 160ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಸ್ವಾಮಿ ವಿವೇಕಾನಂದರ ಸಂದೇಶ, ಅವರು ನೀಡಿರುವಂತಹ ಅಮೂಲ್ಯವಾದ ಮಾತುಗಳನ್ನು ಅನುಸರಿಸಬೇಕು. ಅವರ ಆಚಾರ-ವಿಚಾರ, ನಡೆ ನುಡಿಗಳನ್ನು ಪಾಲಿಸಿದರೆ ಜೀವನದಲ್ಲಿ ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ. ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಬಹಳ ಸಂತೋಷವಾಗುತ್ತಿದೆ ಎಂದರು.
ನಗರಸಭಾ ಅಧ್ಯಕ್ಷ ಎಚ್.ಎಸ್.ಮಂಜು ಮಾತನಾಡಿ, ಜಗತ್ತು ಕಂಡ ಅಪರೂಪದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರು. ಅವರೊಬ್ಬ ಮಾನವತೆಯ ಮಹಾನ್ ಚೇತನ. ತಮ್ಮ ದೇಶಪ್ರೇಮ, ಯುವಜನಪರ ಚಿಂತನೆಗಳಿಂದ ಆದರ್ಶಪ್ರಾಯರಾದ ಮೇರು ವ್ಯಕ್ತಿ ಎಂದು ಹೇಳಿದರು.
ಆಶ್ರಮದ ಗೌರವಾಧ್ಯಕ್ಷ ಬಿ.ಸಿ.ಶಿವಾನಂದ, ಧರ್ಮದರ್ಶಿ ಜಿ.ವಿ.ನಾಗರಾಜು, ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ, ಗಿರಿದಾಸ್, ಮಂಜುನಾಥ್ ಇತರರಿದ್ದರು.