

ಮಂಡ್ಯ: ಯುವಶಕ್ತಿಯ ಸಂಕೇತ ವಿವೇಕಾನಂದರ ಜನ್ಮದಿನದಂದೇ ಮದ್ಯಸೇವಿಸುವವರ ವಯಸ್ಸನ್ನು 18ಕ್ಕೆ ಇಳಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿರುವುದು ಖಂಡನೀಯ ಎಂದು ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಮಾರ್ಗದರ್ಶಿ ಸುನಂದಾ ಜಯರಾಂ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಚಿಕ್ಕಮಂಡ್ಯ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಜಿಲ್ಲಾ ಘಟಕದಿಂದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ನಮ್ಮ ನಡಿಗೆ ವಿಜ್ಞಾನದೆಡೆಗೆ’ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ವಿವಾದದಿಂದ ಕೂಡಿರುವ ಆದೇಶವನ್ನು ಕೂಡಲೇ ಹಿಂಪಡೆಯದಿದ್ದರೆ ಪರಿಷತ್ ವತಿಯಿಂದ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸ್ವಾಮಿ ವಿವೇಕಾನಂದರ ಪ್ರಾಮಾಣಿಕತೆಯೇ ಅವರ ಗುರಿ ಸಾಧನೆಯ ಮಾರ್ಗವಾಗಿತ್ತು. ಮಕ್ಕಳು ವಿವೇಕಾನಂದರ ವ್ಯಕ್ತಿತ್ವವನ್ನು ಬದುಕಿನಲ್ಲಿ ರೂಢಿಸಿಕೊಂಡು ತಮ್ಮ ಜತೆಗೆ ಸಮಾಜದ ಭವಿಷ್ಯವನ್ನು ಉಜ್ವಲಗೊಳಿಸಬಹುದು ಎಂದು ಅಭಿಪ್ರಾಯಪಟ್ಟರು.
ಪರಿಷತ್‌ನ ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ.ಬಸವರಾಜು ಮಾತನಾಡಿ, ಸ್ವಾಮಿ ವಿವೇಕಾನಂದ ಎಂಬುದು ಬಹುದೊಡ್ಡ ಶಕ್ತಿಯ ಸಂಕೇತವೆಂದು ವಿಶ್ವವೇ ಭಾವಿಸಿದೆ. ಆದರೆ, ನಮ್ಮ ಸರ್ಕಾರಗಳು, ಜನತೆ ಇಂದಿಗೂ ಅವರನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಗಾಂಧೀಜಿ, ತಿಲಕ್, ಸುಭಾಷ್‌ಚಂದ್ರ ಬೋಸ್ ಸೇರಿದಂತೆ ಹಲವಾರು ಸ್ವಾತಂತ್ರ್ಯ ಹೋರಾಟಗಾರರಿಗೆ ವಿವೇಕಾನಂದರು ಸ್ಫೂರ್ತಿ ಆಗಿದ್ದರು. ವಿವೇಕಾನಂದರ ಪ್ರಕಾರ ದೇಶಭಕ್ತಿ ಎಂದರೆ ದೀನದಲಿತರು, ಬಡಜನರನ್ನು ಪ್ರೀತಿಸುವುದು ಎಂದು ಅರ್ಥ. ಅವರ ಬದುಕಿನ್ನುದ್ದಕ್ಕೂ ಮಾನವೀಯತೆಯನ್ನು ಮೈಗೂಡಿಸಿಕೊಂಡು ಸ್ವತಃ ಆಚರಣೆಯಲ್ಲಿ ತೊಡಗಿದ್ದರು ಎಂದು ಅವರು ಸ್ಮರಿಸಿದರು.
ಶಿಕ್ಷಕ ಶ್ರೀಧರಮೂರ್ತಿ ವಿವೇಕಾನಂದ ಅವರ ಕುರಿತು ಉಪನ್ಯಾಸ ನೀಡಿದರು. ಜನಪರ ಚಿಂತಕ ಯಲಿಯೂರು ಹನುಮಂತು, ಪರಿಷತ್ ಜಿಲ್ಲಾಧ್ಯಕ್ಷ ದೊಡ್ಡರಸಿಕೆರೆ ಶಿವಲಿಂಗಯ್ಯ, ಕಾರ್ಯದರ್ಶಿ ಕೆಂಪರಾಜು, ತೂಬಿನಕೆರೆ ಲಿಂಗರಾಜು, ವಸಂತಮ್ಮ, ಗುರುಮೂರ್ತಿ, ಪುಷ್ಪಲತಾ, ನಿವೃತ್ತ ಶಿಕ್ಷಕ ಸಿ.ಎಸ್.ಶಂಕರಯ್ಯ, ಪರಿಷತ್ ಮದ್ದೂರು ತಾಲೂಕು ಅಧ್ಯಕ್ಷ ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಿವಕುಮಾರ್, ಶಾಲೆಯ ಮುಖ್ಯಶಿಕ್ಷಕ ಎಚ್.ಎನ್.ದೇವರಾಜು ಇತರರಿದ್ದರು.