

ಮೈಸೂರು: ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೂ ಸ್ವಾಮಿ ಶಾಂಭವಾನಂದಜೀ, ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಖುದ್ದು ಭಾಗಿ ಆಗುವ ಮೂಲಕ ಆದರ್ಶವಾಗಿದ್ದರು ಎಂದು ಶ್ರೀರಾಮಕೃಷ್ಣ ಆಶ್ರಮ ಶಾಲೆಯ ನಿವೃತ್ತ ಪ್ರಾಂಶುಪಾಲ ಕೀರ್ತಿ ಕುಮಾರ್ ಬಣ್ಣಿಸಿದರು.
ಶ್ರೀರಾಮಕೃಷ್ಣ ಆಶ್ರಮ ಭಾನುವಾರ ಆಯೋಜಿಸಿದ್ದ ಸ್ವಾಮಿ ಶಾಂಭವಾನಂದಜೀ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾಶಾಲೆಯಲ್ಲಿ ಶಿಕ್ಷಣ ಮತ್ತು ಸೇವೆಯನ್ನು ಕುರಿತಂತೆ ಸ್ವಾಮಿ ಶಾಂಭವಾನಂದಜೀ ಅವರ ದರ್ಶನ ವಿಷಯವಾಗಿ ಮಾತನಾಡಿದರು.
ಸ್ವಾಮೀಜಿ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸ್ವಾಮಿ ವಿವೇಕಾನಂದರ ಚಿಂತನೆ, ಆಧ್ಯಾತ್ಮಿಕ ಮೌಲ್ಯವನ್ನು ಬೋಧಿಸುತ್ತಿದ್ದರು. ಆದರೂ ಯಾವುದೇ ಅತ್ಯಾಧುನಿಕ ಸೌಲಭ್ಯಗಳು ಇಲ್ಲದ 1936ರ ಕಾಲದಲ್ಲಿ ಸ್ವಾಮೀಜಿ ಕಾಲ್ನಡಿಗೆಯಲ್ಲಿ ಪೊನ್ನಂಪೇಟೆಯ ಸುತ್ತ ಮುತ್ತಲ ಗ್ರಾಮಗಳಿಗೆ ತೆರಳಿ ಮಲೇರಿಯಾ ಕುರಿತು ಜಾಗೃತಿ ಮೂಡಿಸಿದ್ದರು. ಯಾವ ಸೊಳ್ಳೆಯಿಂದ ಮಲೇರಿಯಾ ಬರುತ್ತದೆ ಎನ್ನುವುದನ್ನು ಚಿತ್ರ ಸಹಿತ ಗ್ರಾಮಸ್ಥರಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟಿದ್ದರು. ಸರ್ಕಾರ ನೀಡಿದ ಮಾತ್ರೆಗಳನ್ನು ಜನರಿಗೆ ವಿತರಿಸಿದ್ದರು ಎಂದರು.
ಲಾವಣಿ ಮೂಲಕ ಜಾಗೃತಿ:
ಮೈಸೂರು ಮಹಾರಾಜರು ಜನರಿಗೆ ಶಿಕ್ಷಣ ನೀಡಬೇಕು, ಅವರಲ್ಲಿ ಚಿತ್ರ, ಹಾಡುಗಳ ಮೂಲಕ ಜಾಗೃತಿ ಮೂಡಿಸಬೇಕು ಎನ್ನುವ ಸಲಹೆಗೆ ಸ್ಪಂದಿಸಿದ ಸ್ವಾಮಿ ಶಾಂಭವಾನಂದಜೀ ತಾವೇ 19 ಪುಟಗಳ ಲಾವಣಿ ಬರೆದು ಯುವ ತಂಡದೊಂದಿಗೆ ಹಾಡಿಸುವ ಮೂಲಕ ಜಾಗೃತಿಗೆ ಕಾರಣಕರ್ತರಾಗಿದ್ದರು ಎಂದು ಕೀರ್ತಿ ಕುಮಾರ್ ಹೇಳಿದರು.
ಜೇನು ಸಾಕಣೆಯನ್ನೇ ಜೀವನ ಮಾಡಿಕೊಂಡಿದ್ದ ಕಾಡುಜನರಿಗಾಗಿ ಜೇನುಕೃಷಿ ತರಬೇತಿ ನೀಡಿದರು. ಅದಕ್ಕಾಗಿ ವಿದೇಶಗಳಿಂದ ಪುಸ್ತಕಗಳನ್ನು ತರಿಸಿ ಅಧ್ಯಯನ ಮಾಡಿದ್ದಲ್ಲದೇ, ಮಾರುಕಟ್ಟೆಗಾಗಿ ಅಂದಿನ ಕಾಲದಲ್ಲಿಯೇ ಸಹಕಾರ ಸಂಘದ ಪರಿಕಲ್ಪನೆಯನ್ನು ತಂದಿದ್ದ ಅವರ ದೂರಗಾಮಿ ಚಿಂತನೆ ಶ್ಲಾಘನೀಯ ಎಂದು ಹೇಳಿದರು.
ವಿದ್ಯಾಶಾಲೆ ಕಟ್ಟಿದ ರೂವಾರಿ:
ಪೊನ್ನಂಪೇಟೆ ಆಶ್ರಮವನ್ನು ಕಟ್ಟಿ ಅದಕ್ಕೊಂದು ಬುನಾದಿ ಹಾಕಿದ ಬಳಿಕ 1941 ಮೈಸೂರಿಗೆ ಬಂದಾಗ ಕೇವಲ ಒಂದೆರಡು ಕಟ್ಟಡಗಳಿಗೆ ಮಾತ್ರ ಸೀಮಿತವಾಗಿದ್ದ ಆಶ್ರಮವನ್ನು ಹಿರಿಯರ ಮಾರ್ಗದರ್ಶನದಲ್ಲಿ ದೊಡ್ಡದಾಗಿ ಬೆಳೆಸಿದರು. ಮಹಾರಾಜರ ಮೂಲಕ ರೈಲ್ವೆ ಇಲಾಖೆಯಿಂದ ಜಮೀನು ಪಡೆದಿದ್ದಲ್ಲದೇ ದಾನಿಗಳಿಂದ ಜಾಗ ಪಡೆದು ಹಾಸ್ಟೆಲ್, ವಿದ್ಯಾಶಾಲೆಯನ್ನು ಆರಂಭಿಸುವ ಮೂಲಕ ಆಶ್ರಮಕ್ಕೆ ಸ್ಪಷ್ಟ ಮಾರ್ಗಸೂಚಿ ಹಾಕಿಕೊಟ್ಟರು. ಸ್ವತಃ ತಾವೇ ಕಲ್ಲು, ಇಟ್ಟಿಗೆಗಳನ್ನು ಹೊತ್ತು ಶ್ರಮ ವಹಿಸಿದ್ದರು ಎಂದು ಕೀರ್ತಿ ಕುಮಾರ್ ತಾವು ವಿದ್ಯಾರ್ಥಿಗಳಾಗಿದ್ದಾಗ ಕಂಡ ಸ್ವಾಮೀಜಿ ವ್ಯಕ್ತಿತ್ವವನ್ನು ಬಣ್ಣಿಸಿದರು.
ಆಶ್ರಮ ಶಾಲೆಯ ಹಳೆ ವಿದ್ಯಾರ್ಥಿಯಾದ ಮಡಿಕೇರಿ ಭಾರತೀಯ ವಿದ್ಯಾಭವನದ ಮಾಜಿ ಅಧ್ಯಕ್ಷ ಕೆ.ಪಿ.ಉತ್ತಪ್ಪ ಮಾತನಾಡಿ, ತಾವು ವಿದ್ಯಾರ್ಥಿಯಾಗಿ ಸ್ವಾಮೀಜಿಯಲ್ಲಿ ಕಂಡಂಥ ವಿಶೇಷತೆಯನ್ನು ವಿವರಿಸಿದರು. ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ, ವಿದ್ಯಾಶಾಲೆಯ ಸಂಯೋಜಕರಾದ ಸ್ವಾಮಿ ಯುಕ್ತಿದಾನಂದಜೀ ಸಾನ್ನಿಧ್ಯ ವಹಿಸಿದ್ದರು.