ರಾಮಕೃಷ್ಣ ಚರಣದಲ್ಲಿ ಸ್ವಾಮಿ ರಘುವೀರಾನಂದ ಲೀನ

h23-raghuveeranand swamiji
Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಕಲ್ಯಾಣ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ರಘುವೀರಾನಂದ ಮಹಾರಾಜರು (60) ಸೋಮವಾರ ಬೆಳಗ್ಗೆ 10ಗಂಟೆಗೆ ರಾಮಕೃಷ್ಣ ಚರಣದಲ್ಲಿ ಲೀನರಾದರು.
ಶ್ರೀ ಸ್ವಾಮಿ ರಘುವೀರಾನಂದ ಮಹಾರಾಜರ ಪಾರ್ಥಿವ ಶರೀರವನ್ನು ಭಕ್ತರ ದರ್ಶನಕ್ಕೆಂದು ಆಶ್ರಮದ ಆವರಣದಲ್ಲಿ ಇಡಲಾಗಿದೆ.
ಮಹಾರಾಜರ ಅಂತ್ಯಸಂಸ್ಕಾರವು ಸೆ. 24ರಂದು ಬೆಳಗ್ಗೆ 11 ಗಂಟೆಗೆ ಕೇಶ್ವಾಪುರದ ಮುಕ್ತಿಧಾಮದಲ್ಲಿ ರಾಮಕೃಷ್ಣ ಆಶ್ರಮದ ಪರಂಪರೆಯಂತೆ ನಡೆಯಲಿದೆ ಎಂದು ಆಶ್ರಮದ ಮೂಲಗಳು ತಿಳಿಸಿವೆ.
ಮಹಾರಾಜರ ಹಿನ್ನೆಲೆ: 1964ರಲ್ಲಿ ಜನಿಸಿದ್ದ ಶ್ರೀ ಸ್ವಾಮಿ ರಘುವೀರಾನಂದರು ಬಿಇ ಪದವೀಧರರು. 1988ರಲ್ಲಿ ತಮ್ಮ ಕಾಲೇಜು ದಿನಗಳಲ್ಲಿಯೇ ಬೆಂಗಳೂರಿನ ರಾಮಕೃಷ್ಣ ಮಠದ ಸಂಪರ್ಕಕ್ಕೆ ಬಂದರು. ವಿವೇಕಾನಂದ ಯುವಕ ಸಂಘದ ಸದಸ್ಯರಾಗುವ ಮೂಲಕ ತಮ್ಮನ್ನು ಆಶ್ರಮದ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಸ್ವಾಮಿ ಪುರುಷೋತ್ತಮಾನಂದಜಿ ಮಹಾರಾಜರಿಂದ ಸ್ಫೂರ್ತಿಗೊಂಡು ದಿವ್ಯತ್ರಯರ ಸೇವೆಗೆ ತಮ್ಮ ಜೀವನ ಸಮರ್ಪಿಸಿದರು. ಸ್ವಾಮಿಗಳ ಮಾರ್ಗದರ್ಶನದಂತೆ 1992ರಲ್ಲಿ ಬೆಂಗಳೂರಿನಲ್ಲಿ ರಾಮಕೃಷ್ಣ ಸಂಕೀರ್ತನ ಸಭೆ ಪ್ರಾರಂಭಿಸಿದರು. ಭಜನೆ, ಸಂಕೀರ್ತನೆಗಳ ಮೂಲಕ ದಿವ್ಯತ್ರಯರ ಸಂದೇಶ ಮನೆ ಮನೆಗೂ ಮನಮನಕ್ಕೂ ತಲುಪಿಸುವ ಕಾರ್ಯ ಆರಂಭಿಸಿದರು.
1993ರಲ್ಲಿ ಸ್ವಾಮಿ ಪುರುಷೋತ್ತಮಾನಂದಜಿಯವರು ಪೊನ್ನಂಪೇಟೆಗೆ ಹೋದಾಗ ಅವರೊಂದಿಗೆ ಅಲ್ಲಿಗೆ ಹೋಗಿ ಸೇವೆ ಸಲ್ಲಿಸಿದರು. 1994ರಲ್ಲಿ ಬೆಂಗಳೂರಿಗೆ ಹಿಂದಿರುಗಿ ರಾಮಕೃಷ್ಣ ಯೋಗಾಶ್ರಮ ಪ್ರಾರಂಭಿಸಿದರು. 2000ರಲ್ಲಿ ಧಾರವಾಡದ ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ಬಂದು ಅಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದರು. ನಂತರ ಸ್ವಾಮಿ ಪುರುಷೋತ್ತಮಾನಂದಜಿ ಆದೇಶದಂತೆ ಹುಬ್ಬಳ್ಳಿಗೆ ಬಂದು 2002ರ ಮೇ 13ರಂದು ರಾಮಕೃಷ್ಣ ವಿವೇಕಾನಂದ ಆಶ್ರಮ ಸ್ಥಾಪಿಸಿದರು. ಉತ್ತರ ಕರ್ನಾಟಕದಾದ್ಯಂತ ದಿವ್ಯತ್ರಯರ ಸಂದೇಶ ಪ್ರಚಾರ ಮಾಡಿದರು. ತಮ್ಮ ಸುಮಧುರ ಕಂಠದಿಂದ ಭಜನೆ ಹಾಡುತ್ತಿದ್ದರು. ಉಪನ್ಯಾಸ ಮೂಲಕ ಪ್ರಖ್ಯಾತಿ ಹೊಂದಿದ್ದರು. ಸ್ವಾಮೀಜಿ ಕಳೆದ ಒಂದೂವರೆ ತಿಂಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ವಿವಿಧ ಸ್ವಾಮೀಜಿಗಳು, ಗಣ್ಯರು, ಭಕ್ತರು ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net