ಹುಬ್ಬಳ್ಳಿಯಲ್ಲಿ ಸ್ವದೇಶಿ ಮೇಳ 5ರಿಂದ

Published on

ಹುಬ್ಬಳ್ಳಿ: ಸ್ವದೇಶಿ ಜಾಗರಣ ಮಂಚ್ ಕರ್ನಾಟಕ ವತಿಯಿಂದ ಇಲ್ಲಿಯ ವಿದ್ಯಾನಗರದ ಹೊಸ ಕೋರ್ಟ್ ಹಿಂಭಾಗದ ಕಲ್ಲೂರ ಲೇಔಟ್‌ನಲ್ಲಿ ಫೆ. 5ರಿಂದ 9ರವರೆಗೆ ಸ್ವದೇಶಿ ಮೇಳ ಏರ್ಪಡಿಸಲಾಗಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಆರ್‌ಎಸ್‌ಎಸ್ ಹಾಗೂ ಸ್ವದೇಶಿ ಜಾಗರಣ ಮಂಚ್ ಪ್ರಚಾರಕ ಕೆ. ಜಗದೀಶ ಹಾಗೂ ಸಂಯೋಜಕ ಜಯತೀರ್ಥ ಕಟ್ಟಿ ಮಾತನಾಡಿದರು.

8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಫೆ. 5ರಂದು ಮಧ್ಯಾಹ್ನ 3ರಿಂದ 4ರವರೆಗೆ ದೇಶೀಯ ಕ್ರೀಡೆಗಳು ನಡೆಯಲಿವೆ. ಸಂಜೆ 5.30ಕ್ಕೆ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಉದ್ಘಾಟಿಸುವರು. ಆರ್‌ಎಸ್‌ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಅವರು ಮುಖ್ಯ ಭಾಷಣ ಮಾಡುವರು. ರಾಯನಾಳ ರೇವಣಸಿದ್ಧೇಶ್ವರ ಸಂಸ್ಥಾನ ವಿರಕ್ತ ಮಠದ ಶ್ರೀ ಅಭಿನವ ರೇವಣಸಿದ್ಧೇಶ್ವರ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ವಿಜಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಅರವಿಂದ ಬೆಲ್ಲದ ಅತಿಥಿಗಳಾಗಿ ಆಗಮಿಸುವರು. ಶಾಸಕ ಮಹೇಶ ಟೆಂಗಿನಕಾಯಿ ಅಧ್ಯಕ್ಷತೆ ವಹಿಸುವರು. ರಾತ್ರಿ 7.30ಕ್ಕೆ ನಿಖಿಲ್ ಜೋಶಿ ಸಿತಾರ್, ಸಮರ್ಥ ದೇಸಾಯಿ ಗಿಟಾರ್, ಡಾ. ಗೋಪಿಕೃಷ್ಣ ಅವರು ಪ್ಯಾಡ್ ಜುಗಲ್‌ಬಂಧಿ ನಡೆಯಲಿದೆ ಎಂದರು.

6ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಡಾ. ಅಶ್ವಿನಿ ವೆಂಕಟೇಶ ಅವರು ತಾರಸಿ ತೋಟ ತರಬೇತಿ ಕಾರ್ಯಾಗಾರ ನಡೆಸಿಕೊಡುವರು. ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಮಹಿಳಾ ಸಮಾವೇಶ ನಡೆಯಲಿದೆ. ಸಂಜೆ 6.30ಕ್ಕೆ ಉತ್ತರ ಕನ್ನಡದ ಬಾಳ್ಕಲ್ ಯಕ್ಷ ಬಳಗದಿಂದ ದಕ್ಷಯಜ್ಞ ಯಕ್ಷಗಾನ ನಡೆಯಲಿದೆ.

7ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 12.30ರವರೆಗೆ ನಿರುದ್ಯೋಗ ಸಮಸ್ಯೆ ಮತ್ತು ಪರಿಹಾರ ಮಾರ್ಗಗಳ ಕುರಿತು ಕಾಲೇಜ ವಿದ್ಯಾರ್ತಿಗಳೊಂದಿಗೆ ಸಂವಾದ ನಡೆಯಲಿದೆ. ಮಧ್ಯಾಹ್ನ 2.30ರಿಂದ ಸಂಜೆ 4.30ರವರೆಗೆ ಆಯುರ್ವೇದ ಆರೋಗ್ಯ ಶಿಬಿರ ನಡೆಯಲಿದೆ. ರಾತ್ರಿ 7ಕ್ಕೆ ಅನೂರು ಅನಂತಕೃಷ್ಣ ಶರ್ಮಾ ತಂಡದಿಂದ ಲಯ ಲಾವಣ್ಯ ಕಾರ್ಯಕ್ರಮ ಜರುಗಲಿದೆ ಎಂದರು.

8ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ನಿತ್ಯ ಬಳಕೆ ವಸ್ತುಗಳ ತಯಾರಿಕಾ ಶಿಬಿರ ನಡೆಯಲಿದೆ. ಮಧ್ಯಾಹ್ನ 3ರಿಂದ 5ರವರೆಗೆ ಕುಟುಂಬ ಪ್ರಬೋಧನಾ ಕಾರ್ಯಕ್ರಮ ಜರುಗಲಿದೆ. ರಾತ್ರಿ 7ಕ್ಕೆ ಅಜಿತಬಸಾಪುರ ತಂಡದಿಂದ ಜಾನಪದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. 9ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1ರವರೆಗೆ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 3ರಿಂದ 4.30ರವರೆಗೆ ಯೋಗಾಸನ ಮತ್ತು ಮಲ್ಲಕಂಬ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಜಗದೀಶ ಶೆಟ್ಟರ್, ಸ್ವದೇಶಿ ಜಾಗರಣ ಮಂಚ್‌ನ ಲಿಂಗಮೂರ್ತಿ, ಶಾಸಕ ಶ್ರೀನಿವಾಸ ಮಾನೆ ಇತರರು ಆಗಮಿಸುವರು. ಸಂಜೆ 7ಕ್ಕೆ ಗಂಗಾವತಿ ಪ್ರಾಣೇಶ ತಂಡದಿಂದ ಹಾಸ್ಯ ಸಂಜೆ ಜರುಗಲಿದೆ. ಪ್ರತಿದಿನ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಹಾಗೂ ಸಂಜೆ 4ರಿಂದ 7ರವರೆಗೆ ಉಚಿತ ಪಂಚಗವ್ಯ ಚಿಕಿತ್ಸಾ ಶಿಬಿರ ನಡೆಯಲಿದೆ ಎಂದರು.

ಮೇಳದಲ್ಲಿ 210 ಕ್ಕೂ ಹೆಚ್ಚು ಮಳಿಗೆಗಳು ಸ್ಥಾಪನೆಯಾಗಲಿವೆ. 2ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. 13 ಲಕ್ಷ ಕರ ಪತ್ರಗಳನ್ನು ಮನೆ ಮನೆಗೆ ತಲುಪಿಸಲಾಗಿದೆ ಎಂದರು.

ಸಂಘಟಕ ಸಂದೀಪ ಬೂದಿಹಾಳ, ಸಂಚಾಲಕಿ ರಚಿತಾ ಆಕಳವಾಡಿ, ವಿಶ್ವನಾಥ ಅಂಗಡಗಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net