ಮಾರ್ಡನ್ ರತಿಯೊಂದಿಗೆ ಸ್ವದೇಶಿ ಕಾಮಣ್ಣ

Published on

ಬಳ್ಳಾರಿ ; ಹೋಳಿ ಹುಣ್ಣಿಮೆ ನಿಮಿತ್ತ ಇಲ್ಲಿನ ಕುರುಹಿನಶೆಟ್ಟಿ ಸಮಾಜದ ಶ್ರೀನೀಲಕಂಠೇಶ್ವರ ದೇವಸ್ಥಾನದಲ್ಲಿ ಕಾಮಣ್ಣ ಸಮಿತಿಯಿಂದ ವಿಶೇಷ ರತಿ ಕಾಮಣ್ಣನ ಪ್ರತಿಮೆ ಪ್ರತಿಷ್ಠಾಪಿಸಿದೆ. ವಿದೇಶಿ ಮಾದರಿಯ ಸ್ತ್ರೀ ವೇಷಧಾರಿ ರತಿಯೊಂದಿಗೆ ಪೌರಾಣಿಕ ದೇಶಿಯ ವೇಷಧಾರಿ ಕಾಮನ ಪ್ರತಿಮೆ ನೋಡುಗರ ಗಮನಸೆಳೆಯಿತು.

ಮಾ.11ರ ರಾತ್ರಿ ದೇಶೀಯ ಕಾಮನ ಜತೆ ವಿದೇಶಿ ಮಹಿಳೆಯ ಹೋಲುವ ರತಿ ಪ್ರತಿಷ್ಠಾಪಿಸಿದ್ದು, ಶುಕ್ರವಾರ ಗುಳೇದಗುಡ್ಡ ಸೀರೆ ಉಡಿಸಿ ಅಲಂಕರಿಸಿದ್ದಾರೆ. ವಿದೇಶಿ ಮಾರ್ಡನ್ ರತಿಯ ಪ್ರತಿಮೆ ಪಟ್ಟಣದಲ್ಲಿ ವೈರಲ್‌ಯಾಗಿದ್ದು ನೋಡುಗರಲ್ಲಿ ನಗೆಯನ್ನುಂಟು ತರಿಸುತ್ತಿದೆ.

ಸಾಮಾನ್ಯವಾಗಿ ಪೌರಾಣಿಕ ಕಾಮನೊಂದಿಗೆ ಪೌರಾಣಿಕ ಹಿನ್ನೆಲೆಯ ರತಿದೇವಿಯನ್ನು ಪ್ರತಿಷ್ಠಾಪಿಸುವುದುಂಟು. ಆದರೆ, ಪಟ್ಟಣಿಗರ ಗಮನ ಸೆಳೆಯಲು ಕಳೆದ ವರ್ಷದಿಂದ ಕಾಮನೊಂದಿಗೆ ಫ್ರಾಕ್ ತೊಟ್ಟ, ಕೂದಲು ಇಳಿ ಬಿಟ್ಟು, ತಲೆಗೆ ಛತ್ರಿಯನ್ನು ಸಿಕ್ಕಿಸಿಕೊಂಡ ಆಧುನಿಕ ಶೈಲಿಯ ವಿದೇಶಿ ರತಿ ಪ್ರತಿಮೆ ಗಮನಸೆಳೆಯುತ್ತಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಮಾರ್ಡನ್ ರತಿಯ ಗತ್ತು ಗಮ್ಮತ್ತೇ ವಿಶೇಷವಾಗಿತ್ತು.

ನೀಲಕಂಠೇಶ್ವರ ದೇವಸ್ಥಾನದಲ್ಲಿ ಐವತ್ತು ವರ್ಷಗಳಿಂದ ಕಾಮರತಿ ಕೂಡಿಸಲಾಗುತ್ತಿತ್ತು. ಕಳೆದ 23ವರ್ಷಗಳಿಂದ ಯುವಕರು ಕಾಮರತಿ ಕೂಡಿಸುವ ಜವಾಬ್ದಾರಿ ಹೊತ್ತಿದ್ದೇವೆ. ಪಟ್ಟಣದಲ್ಲಿ ವಿಶೇಷತೆ ಮೂಡಿಸಲಿಕ್ಕಾಗಿ ಕಳೆದ ವರ್ಷದಿಂದ ರತಿಗಾಗಿ ಬೆಂಗಳೂರಿನಿಂದ ಮಾರ್ಡನ್ ಲೇಡಿ ಗೊಂಬೆ, ಡ್ರೆಸ್ ಖರೀದಿಸಿ ಪ್ರತಿಷ್ಠಾಪಿಸಿದೆ. ವಿದೇಶಿಯರು ಭಾರತೀಯ ಸಂಪ್ರದಾಯದವನ್ನು ಮೆಚ್ಚಿ ಭಾರತೀಯತೆಯನ್ನು ಅಳವಡಿಸಿಕೊಳ್ಳುವ ಪ್ರತೀಕವಾಗಿ, ಮೊದಲ ದಿನ ಮಾರ್ಡನ್ ಲೇಡಿಯನ್ನು ದೇಶಿಯ ರತಿಯಾಗಿ ಅಲಂಕರಿಸಿ, ನಂತರದ ದಿನಗಳಲ್ಲಿ ಇಲಕಲ್, ಗುಳೇದಗುಡ್ಡ, ಟೋಪನ್ ಸೀರೆ ಉಡಿಸಿ ಅಪ್ಪಟ ದೇಶೀಯ ರತಿಯನ್ನಾಗಿ ಪರಿವರ್ತಿಸಲಾಗುತ್ತದೆ. ಆಧುನೀಕತೆಯಿಂದಾಗಿ ಕಾಮನ ಹಬ್ಬ ರಂಗು ಕಳೆದುಕೊಳ್ಳುತ್ತಿದೆ. ಮೊದಲಿನಷ್ಟು ಉತ್ಸಾಹ, ಉಲ್ಲಾಸ, ಜನ ಪಾಲ್ಗೊಳ್ಳುವಿಕೆಯ ಹಿತಾಸಕ್ತಿ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾಮನ ಹಬ್ಬವನ್ನು ವಿಶೇಷವಾಗಿ ಗಮನಸೆಳೆಯಲು ಮಾರ್ಡನ್ ರತಿ ಪ್ರತಿಷ್ಠಾಪಿಸಿದೆ. ಮುಂದಿನ ವರ್ಷಗಳಲ್ಲಿ ದೇಶೀಯ ಸಂಸ್ಕೃತಿಯನ್ನು ಉಳಿಸಿಕೊಂಡು, ಅದನ್ನು ಪೋಷಿಸುವ ನಿಟ್ಟಿನಲ್ಲಿ ಇನ್ನಷ್ಟು ಜನಮನ ಸೆಳೆಯುವ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ನೀಲಕಂಠೇಶ್ವರ ಕಾಮಣ್ಣ ಸೇವಾ ಸಮಿತಿಯ ಸದಸ್ಯರಾದ ಜಿ.ಎಚ್.ಶಶಿಧರಗೌಡ, ಅಕ್ಕಸಾಲಿ ಗಿರಿರಾಜಾಚಾರ್, ಬೂದಗುಂಪಿ ಶಿವರಾಜ, ಎಲಿಗಾರ ವೆಂಕಟರೆಡ್ಡಿ, ಯು.ಎಂ.ವಿದ್ಯಾಶಂಕರ, ಕೆ.ವಿ.ಸಂದೀಪ್ ತಿಳಿಸಿದರು. ಮಾ.14ರ ಹೋಳಿ ಹುಣ್ಣಿಮೆಯಂದು ಸಂಜೆ ಕಾಮನ ಹಾಡನ್ನು ಹಾಡುತ್ತ ಕಾಮನಪಟ ಮೆರವಣಿಗೆ ನಡೆಸಲಾಗುವುದು. ನಂತರ ಮಧ್ಯರಾತ್ರಿ ಕಾಮ ಮತ್ತು ರತಿಯರ ಚಿತ್ರಪಟವನ್ನು ದಹಿಸಲಾಗುತ್ತದೆ. ಕಾಮ ಪ್ರತಿಷ್ಠಾಪಿಸಿದ ಆವರಣದಲ್ಲಿ ಮಾ.15ರಂದು ಹೋಳಿ ಬಣ್ಣದಾಟ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net