

ಮಂಡ್ಯ: ಸ್ವಚ್ಛತಾ ಹೀ ಸೇವಾ ಆಂದೋಲನದ ಅಂಗವಾಗಿ ನಗರದಲ್ಲಿ ಶ್ರಮದಾನ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಎಸ್ಪಿ ಎನ್.ಯತೀಶ್ ಸ್ವತಃ ಸ್ವಚ್ಛತೆ ಮಾಡುವ ಮೂಲಕ ಮಾದರಿಯಾದರು. ಅಂತೆಯೇ ಇದರಿಂದ ಪ್ರೇರಣೆಗೊಂಡ ಸಿಬ್ಬಂದಿ ಕೂಡ ಶ್ರಮದಾನಕ್ಕೆ ಸಾಥ್ ನೀಡಿದರು.
ಜಿಲ್ಲಾಧಿಕಾರಿ ಕಚೇರಿ, ಪ್ರಮುಖ ಬೀದಿ, ರಸ್ತೆ ಬದಿ ಸೇರಿದಂತೆ ಹಲವೆಡೆ ನಡೆದ ಶ್ರಮದಾನದಲ್ಲಿ ಕಸ ಸಂಗ್ರಹಿಸಲಾಯಿತು. ಅದರಲ್ಲಿಯೂ ಡಿಸಿ ಅವರ ಶ್ರಮದಾನ ಗಮನಸೆಳೆಯಿತು. ಪೊರಕೆ ಹಿಡಿದು ಬೀದಿಗಳಲ್ಲಿ ಕಸ ಗುಡಿಸುವ ಮೂಲಕ ಮಾದರಿಯಾದರು. ಬಳಿಕ ಮಾತನಾಡಿದ ಅವರು, ಎಲ್ಲ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಬೀದಿಗೆ ಇಳಿದು ಸ್ವಚ್ಛ ಮಾಡಿ ಸಾರ್ವಜನಿಕರಿಗೆ ಅರಿವು ಮೂಡಿಸಲಿ ಎನ್ನುವ ಉದ್ದೇಶದೊಂದಿಗೆ ಶ್ರಮದಾನ ಮಾಡುತ್ತಿದ್ದೇವೆ. ನಮ್ಮ ಮನೆ, ಕಚೇರಿ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛತೆ ಎನ್ನುವುದು ಮನಸ್ಸಿಗೆ ಸಂಬಂಧಪಟ್ಟ ವಿಷಯ. ಅಂತೆಯೇ ಮನಸ್ಸು ಸ್ವಚ್ಚವಾಗಿದ್ದರೆ. ನಮ್ಮ ಪರಿಸರ ಉತ್ತಮವಾಗಿರಬೇಕು. ಮನಸ್ಸು ಹಾಗೂ ಪರಿಸರ ಸ್ವಚ್ಛವಾಗಿದ್ದರೆ ದೈಹಿಕವಾಗಿ ಆರೋಗ್ಯವಾಗಿರಬಹುದು. ಜಿಲ್ಲೆಯಲ್ಲಿ 4 ಕಡೆ ಸಿಬ್ಬಂದಿ ಶ್ರಮದಾನದಲ್ಲಿ ಭಾಗಿಯಾಗಿದ್ದಾರೆ ಎಂದು ವಿವರಿಸಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರ ಮಣಿ, ನಗರಸಭೆ ಆಯುಕ್ತ ಮಂಜುನಾಥ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮಿ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್. ನಿರ್ಮಲಾ ಇತರರಿದ್ದರು.
ಶ್ರಮದಾನದ ನಂತರ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಉಪಹಾರ ಸೇವಿಸಲಾಯಿತು. ಡಿಸಿ ಡಾ.ಕುಮಾರ, ಎಡಿಸಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಎಸ್ಪಿ ಎನ್.ಯತೀಶ್ ಸಿಬ್ಬಂದಿಗೆ ಊಟ ಬಡಿಸುವ ಮೂಲಕ ಗಮನಸೆಳೆದರು.