

ಹುಮನಾಬಾದ್: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕುರಿತು ಜಿಲ್ಲೆಯಾದ್ಯಂತ ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ ಧ್ಯೇಯದೊಂದಿಗೆ ಅಕ್ಟೋಬರ್ ೨ರವರೆಗೆ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಪ್ರತಿ ಗ್ರಾಮದಲ್ಲಿ ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸಬೇಕು ಎಂದು ಜಿಪಂ ಸಿಇಒ ಡಾ.ಗಿರೀಶ್ ಬದೋಲೆ ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಮಂಗಳವಾರ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಪಾರಿವಾಳ ಹಾರಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದ ಅವರು, ಸ್ವಚ್ಛತೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಜನರಿಗೆ ಗ್ರಾಮಗಳ ಶುಚಿತ್ವ, ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವುದೇ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಅಭಿಯಾನ ಉದ್ದೇಶವಾಗಿದೆ. ಜಿಲ್ಲೆಯಲ್ಲಿರುವ ಪ್ರಮುಖ ಬೀದಿಗಳು, ಶಾಲೆ, ಕಾಲೇಜು, ಅಂಗನವಾಡಿ, ಕಲ್ಯಾಣಿ, ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಸರ್ಕಾರಿ ಕಚೇರಿ, ವಸತಿ ನಿಲಯ ಸೇರಿ ಮುಂತಾದ ಸ್ಥಳಗಳಲ್ಲಿ ಅಕ್ಟೋಬರ್ ೨ರಂದು ಗಾಂಧಿ ಜಯಂತಿ ದಿನದಂದು ಸ್ವಚ್ಛ ಭಾರತ ದಿವಸ್ ಎಂಬ ಬೃಹತ್ ಕಾರ್ಯಕ್ರಮ ಆಯೋಜಿಸಬೇಕೆಂದು ನಿರ್ದೇಶನ ನೀಡಿದರು.
ಜಿಪಂ ಯೋಜನಾ ನಿರ್ದೇಶಕ ಜಗನಾಥ ಮೂರ್ತಿ, ಸ್ವಚ್ಛ ಭಾರತ ಮಿಷನ್ ವಿಶೇಷ ನಿರ್ದೇಶಕ ಡಾ. ಗೌತಮ ಅರಳಿ, ತಾಪಂ ಸಹಾಯಕ ನಿರ್ದೇಶಕ ಜಗನ್ನಾಥ ಹಾಗೂ ಶಿವಲೀಲಾ, ತಾಪಂ ಇಒ ದೀಪಿಕಾ ನಾಯ್ಕರ್, ತಾಲೂಕಿನ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ, ಪಿಡಿಒ ಇತರರು ಪಾಲ್ಗೊಂಡಿದ್ದರು.
ಸ್ವಚ್ಛತೆ ಪ್ರಜ್ಞೆ ಪ್ರತಿಯೊಬ್ಬರಿಂದ ಹೊರಹೊಮ್ಮಬೇಕು. ಇದರಿಂದ ಕುಟುಂಬ, ಸಮಾಜ, ಗ್ರಾಮ ಸ್ವಚ್ಛವಾಗಿರುತ್ತವೆ. ಗ್ರಾಪಂದಿಂದ ಈಗಾಗಲೇ ಸ್ವಚ್ಛ ವಾಹಿನಿಗಳನ್ನು ನೀಡಲಾಗಿದ್ದು. ಕಸ ಎಲ್ಲೆಂದರಲ್ಲಿ ಬಿಸಾಡದೆ ಹಸಿ, ಒಣ ಕಸ ಪ್ರತ್ಯೇಕವಾಗಿ ನೀಡಬೇಕು ಮತ್ತು ಗ್ರಾಮೀಣ ಪ್ರದೇಶದಲ್ಲಿ ಉತ್ಪತ್ತಿಯಾಗುವ ಕಸವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವ ಕುರಿತಂತೆ ಸ್ವಸಹಾಯ ಸಂಘ ಸದಸ್ಯರಿಗೆ ಅರಿವು ಮೂಡಿಸುವ ಚಟುವಟಿಕೆ ಕೈಗೊಳ್ಳಬೇಕು.
| ದೀಪಿಕಾ ನಾಯ್ಕರ್ ತಾಪಂ ಇಒ