

ಮಂಡ್ಯ: ಜಿಲ್ಲೆಯಲ್ಲಿ ಸೆ.14 ರಿಂದ ಅ.2ರವರೆಗೆ ಸ್ವಚ್ಛತೆಯೇ ಸೇವೆ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಹೀ ಸೇವಾ ಪಾಕ್ಷಿಕ-2024 ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಂದೋಲನಕ್ಕೆ ಸಂಬಂಧಿಸಿದಂತೆ ಎಲ್ಲ ಶಾಲೆ ಮತ್ತು ಕಾಲೇಜಿನಲ್ಲಿ ಜಾಥಾ, ಪ್ರತಿಜ್ಞಾ ವಿಧಿ ಬೋಧನೆ, ಸಸಿ ನೆಡುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೆಚ್ಚು ಪಾಲ್ಗೊಳ್ಳುವಂತೆ ಮಾಡಬೇಕು. ಕಡ್ಡಾಯವಾಗಿ ಸ್ವಚ್ಛತಾ ಆಂದೋಲನದ ಬಗ್ಗೆ ಪ್ರಬಂಧ, ಚರ್ಚಾ ಸ್ಪರ್ಧೆ ಹಾಗೂ ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಬೇಕು ಎಂದರು.
ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅವರ ತಂದೆ, ತಾಯಿ ಹಾಗೂ ಪೋಷಕರಿಗೆ ಸ್ವಚ್ಛತೆಯ ಪ್ರಾಮುಖ್ಯತೆ ಬಗ್ಗೆ ಪತ್ರ ಬರೆಸಿ ಪತ್ರ ಅಭಿಯಾನ ಹಮ್ಮಿಕೊಳ್ಳಬೇಕು. ಎಲ್ಲ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ, ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸೆ.19 ರಂದು ಬೆಳಿಗ್ಗೆ 7 ಗಂಟೆಗೆ ಏಕಕಾಲದಲ್ಲಿ ಸ್ವಚ್ಛತೆಗಾಗಿ ಶ್ರಮದಾನ ಮಾಡಬೇಕು. ಹಸಿ ಕಸ, ಒಣ ಕಸ ವಿಂಗಡಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜನ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಿ. ಸಸಿ ನೆಡುವ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರು, ಎನ್‌ಜಿಒ ಹಾಗೂ ರೆಡ್‌ಕ್ರಾಸ್ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳನ್ನು ಪಾಲ್ಗೊಳ್ಳುವಂತೆ ನೋಡಿಕೊಳ್ಳಿ ಎಂದರು.
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 1,500 ಗಿಡ ನೆಡುವ ಗುರಿ ಹೊಂದಲಾಗಿದೆ. ಇದಕ್ಕೆ ಅರಣ್ಯ ಇಲಾಖೆಯಿಂದ ಗಿಡ ಒದಗಿಸಲಾಗುವುದು. ಮಾನವ ಸರಪಳಿ, ಜಾಥಾ ಹಾಗೂ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಆಶಾ ಕಾರ್ಯಕರ್ತೆಯರು, ಗ್ರಾಪಂ ಅಧ್ಯಕ್ಷರು, ಸದಸ್ಯರು, ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರು ಭಾಗವಹಿಸಬೇಕು. ಆಂದೋಲನ ಅರಿವು ಜಾಗೃತಿಯು ಜನರಿಗೆ ವೇಗವಾಗಿ, ದೃಢವಾಗಿ ತಲುಪಬೇಕು. ಸಾರ್ವಜನಿಕರಿಗೆ ಬೀದಿ ನಾಟಕಗಳ ಮೂಲಕ ಪರಿಣಾಮಕಾರಿಯಾಗಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಅ.2ರಂದು ಸ್ವಚ್ಛತಾ ಸೇವಾ ಕಾರ್ಯಕ್ರಮವನ್ನು ಉತ್ತಮವಾಗಿ ಸಂಘಟಿಸಿದ ಗ್ರಾಪಂ, ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಬಹುದು. ಸೆ.17ರಂದು ಸಫಾಯಿಮಿತ್ರ ಸುರಕ್ಷಾ ಶಿಬಿರ ಆಯೋಜಿಸಿ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗುವುದು. ಶಿಬಿರದಲ್ಲಿ ನೈರ್ಮಲ್ಯ ಕಾರ್ಯಕರ್ತರಿಗೆ ಆರೋಗ್ಯ ಉಚಿತ ತಪಾಸಣೆ, ಅಗತ್ಯವಿರುವ ವ್ಯಾಕ್ಸಿನೇಷನ್ ಮತ್ತು ಜಂತುಹುಳು ನಿವಾರಣೆ, ಗರ್ಭಿಣಿ ಮತ್ತು ಹಾಲುಣಿಸುವವರಿಗೆ, ನೈರ್ಮಲ್ಯ ಕಾರ್ಮಿಕರಿಗೆ ತ್ರೈಮಾಸಿಕ ತಪಾಸಣೆ ಹಾಗೂ ಅಗತ್ಯ ಚಿಕಿತ್ಸೆ ನೀಡುವುದು. ಸ್ವಚ್ಛತೆ ಮಾಡಲೇಬೇಕಿರುವ ಹೆಚ್ಚು ಅನೈರ್ಮಲ್ಯ ಹೊಂದಿರುವ ಸ್ಥಳಗಳು/ಬ್ಲಾಕ್‌ಸ್ಪಾಟ್ ಗುರುತಿಸಿ ಈ ಸ್ಥಳಗಳಲ್ಲಿ ಸ್ವಚ್ಛತಾ ಆಂದೋಲನ ನಡೆಸುವಂತೆ ತಿಳಿಸಿದರು.
ಆಂದೋಲನದ ಅವಧಿಯಲ್ಲಿ ಇಲಾಖಾವಾರು ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪ್ರಾಥಮಿಕ ಮತ್ತು ಪ್ರೌಢಶಾಲಾ ಇಲಾಖೆಯು ಸ್ವಚ್ಛತೆ ಹಾಗೂ ಶುದ್ಧ ಕುಡಿಯುವ ನೀರು ಕುರಿತು ಅರಿವು ಮೂಡಿಸಬೇಕು. ಕೈ ತೊಳೆಯುವ ಸರಿಯಾದ ವಿಧಾನದ ಬಗ್ಗೆ ಮಕ್ಕಳಿಗೆ ತಿಳಿಸಿ. ಪ್ರವಾಸೋದ್ಯಮ ಇಲಾಖೆಯು ಪ್ರವಾಸಿತಾಣ, ಪಾರಂಪರಿಕ ತಾಣ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸ್ವಚ್ಛತೆಯೇ ಸೇವೆ -2024 ಕುರಿತು ಪೋಸ್ಟರ್ ಅಳವಡಿಸಬೇಕು. ಸ್ವಚ್ಛ ಪ್ರವಾಸೋದ್ಯಮ ಪರಿಕಲ್ಪನೆ, ಪ್ರವಾಸಿ ತಾಣಗಳಲ್ಲಿನ ಶೌಚಗೃಹದಲ್ಲಿ ಶುಚಿತ್ವ ಮತ್ತು ನೈರ್ಮಲ್ಯದ ನಿರ್ವಹಣೆ ಮಾಡುವುದು ಕಡ್ಡಾಯ. ಸಾರಿಗೆ ಇಲಾಖೆಯವರು ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಲು ಶ್ರಮದಾನ ಚಟುವಟಿಕೆ ಹಮ್ಮಿಕೊಳ್ಳಬೇಕು. ಶುಚಿತ್ವದ ಮಹತ್ವ ಸಾರುವಂತೆ ನಿಲ್ದಾಣಗಳಲ್ಲಿ ಕಸದ ತೊಟ್ಟಿ/ ಬುಟ್ಟಿಗಳನ್ನು ಇಡುವುದು. ಕಸ ವಿಲೇವಾರಿ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಬೇಕು. ಇನ್ನು ಕೃಷಿ ಮಾರುಕಟ್ಟೆ ಇಲಾಖೆ ಅಧಿಕಾರಿಗಳು ಎಪಿಎಂಸಿ ಯಾರ್ಡ, ಮಂಡಿ, ಮಾರುಕಟ್ಟೆ, ಬಯೋಮಾಸ್ ಸಂಸ್ಥೆಗಳ ನಿರ್ವಹಣೆಯಲ್ಲಿ ತ್ಯಾಜ್ಯದಿಂದ ಸಂಪತ್ತು ಮಾಡುವ ಕುರಿತು ಸ್ವಚ್ಛತಾ ಅಭಿಯಾನಗಳನ್ನು ಹಮ್ಮಿಕೊಳ್ಳಬೇಕೆಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಂಜೀವಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಡಿಡಿಪಿಐ ಶಿವರಾಮೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಅಧಿಕಾರಿ ಎಸ್.ರಾಜಮೂರ್ತಿ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.