

ಸದೇಶ್ ಕಾರ್ಮಾಡ್ ಮೈಸೂರು
ಕೇಂದ್ರ ಸರ್ಕಾರ 2022ರ ಸ್ವಚ್ಛ ಸರ್ವೇಕ್ಷಣೆಯ ಟೂಲ್‌ಕಿಟ್ ಬಿಡುಗಡೆ ಮಾಡಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಸರ್ವೇಕ್ಷಣೆಗೆ ಸಜ್ಜುಗೊಳ್ಳುತ್ತಿದೆ. ಪ್ರತಿ ಬಾರಿ ಸ್ವಚ್ಛತೆಯಲ್ಲಿ ದೇಶದ ಟಾಪ್-10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದ ಮೈಸೂರು ಪ್ರಥಮ ಬಾರಿಗೆ 2021ರ ಸ್ವಚ್ಛ ಸರ್ವೇಕ್ಷಣೆಯಲ್ಲಿ 11ನೇ ಸ್ಥಾನಕ್ಕೆ ತಳಲ್ಪಟ್ಟಿತು. ಹೀಗಾಗಿ ಮೈಸೂರು ನಗರ ಮತ್ತೆ ಟಾಪ್-10 ಸ್ಥಾನಕ್ಕೆ ಮರಳುವ ತಯಾರಿ ನಡೆಸುತ್ತಿದೆ.
2022ರ ಸ್ವಚ್ಛ ಸರ್ವೇಕ್ಷಣೆಯನ್ನು ಯಾವ ರೀತಿ ನಡೆಸಬೇಕು ಎಂಬ ಕುರಿತು ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡಲು ಕೇಂದ್ರ ಸರ್ಕಾರ ಇದೀಗ ಟೂಲ್‌ಕಿಟ್ ಬಿಡುಗಡೆ ಮಾಡಿದೆ. ಕಳೆದ ಬಾರಿ ಒಟ್ಟು 6 ಸಾವಿರ ಅಂಕಗಳಿಗೆ ಸ್ವಚ್ಛ ಸರ್ವೇಕ್ಷಣೆ ನಡೆಸಲಾಗಿತ್ತು. ಈ ಬಾರಿ ಈ ಅಂಕವನ್ನು 7,500 ಕ್ಕೆ ಏರಿಕೆ ಮಾಡಲಾಗಿದೆ. ಸರ್ವೀಸ್ ಲೆವಲ್ ಪ್ರೋಗ್ರೆಸ್‌ಗೆ 3,000 ಅಂಕಗಳನ್ನು ನೀಡಲಾಗುತ್ತಿದೆ. ಸಿಟಿಜನ್ ಫೀಡ್‌ಬ್ಯಾಕ್ 2,250 ಅಂಕಗಳು, ಸರ್ಟಿಫಿಕೇಷನ್‌ಗೆ 2,250 ಅಂಕಗಳನ್ನು ನಿಗದಿ ಪಡಿಸಲಾಗಿದೆ.
ಪ್ರೇರಕ್ ದೌರ್ ಸಮ್ಮಾನ್: ಸ್ವಚ್ಛ ನಗರಗಳಿಗೆ ಪ್ರೇರಕ್ ದೌರ್ ಸಮ್ಮಾನ್ ಪ್ರಶಸ್ತಿ ಘೋಷಿಸಲಾಗಿದ್ದು, ಪ್ರಶಸ್ತಿಯು ಐದು ವಿಭಾಗಗಳಲ್ಲಿ ನೀಡಲಾಗುವುದು. ಪ್ಲಾಟಿನಂ ನಗರ, ಚಿನ್ನದ ನಗರ, ಬೆಳ್ಳಿ ನಗರ, ಕಂಚಿನ ನಗರ, ತಾಮ್ರ ನಗರ ವಿಭಾಗದಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು. ತ್ಯಾಜ್ಯ ನಿರ್ವಹಣೆಯಲ್ಲಿ ಶೇ.95 ಗುರಿ ಸಾಧಿಸಿರಬೇಕು, ಹಸಿ ತ್ಯಾಜ್ಯ ಸಂಸ್ಕರಣೆ ಶೇ.100 ಗುರಿ ಸಾಧನೆಯಾಗಿರಬೇಕು, ಒಣತ್ಯಾಜ್ಯ ಶೇ.100 ರಷ್ಟು ಸಂಸ್ಕರಣೆ/ಮರು ಬಳಕೆ ಆಗಬೇಕು, ಕಟ್ಟಡ ತ್ಯಾಜ್ಯ ಶೇ.50 ರಷ್ಟು ಮರುಬಳಕೆ ಆಗುವಂತೆ ಮಾಡಬೇಕು, ಶೇ.10ಕ್ಕಿಂತ ಹೆಚ್ಚು ತ್ಯಾಜ್ಯವನ್ನು ಲ್ಯಾಂಡ್‌ಫಿಲ್ ಮಾಡಬಾರದು, ವಾಟರ್ ಪ್ಲಸ್ ನಗರ ಸಾಧನೆ ಮಾಡಿರಬೇಕು ಹಾಗೂ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಿಗದಿಪಡಿ ಸಿರುವ ಗುರಿಯಲ್ಲಿ ಶೇ.85 ರಷ್ಟು ಸಿಟಿಜನ್ ಫೀಡ್‌ಬ್ಯಾಕ್ ಪಡೆದಿರಬೇಕು. ಈ ಎಲ್ಲ ಮಾನದಂಡಗಳನ್ನು ಪೂರೈಸಿದ ನಗರವನ್ನು ಪ್ಲಾಟಿನಂ ನಗರವೆಂದು ಘೋಷಿಸಲಾಗುತ್ತದೆ. ಅದೇ ರೀತಿ ಚಿನ್ನ, ಬೆಳ್ಳಿ, ಕಂಚು, ತಾಮ್ರ ನಗರಗಳ ಗರಿಗಳನ್ನು ಪಡೆಯಲು ವಿವಿಧ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ.
ಸ್ವಚ್ಛತೆಯಲ್ಲಿ ಮೈಸೂರು ನಗರದ ಸಾಧನೆ: 2015, 2016ರಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊ ಂಡಿತ್ತು. 2017ರಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 2018ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ದೇಶ ದ ನಂ.1 ಸ್ವಚ್ಛ ನಗರಿ ಪಟ್ಟ ಪಡೆದರೂ ಸಮಗ್ರ ವಿಭಾಗದಲ್ಲಿ 8ನೇ ಸ್ಥಾನಕ್ಕೆ ಕುಸಿತ ಕಂಡಿತು. 2019ರಲ್ಲಿ ಸಮಗ್ರ ವಿಭಾಗದಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. 2020ರಲ್ಲಿ ಸಮಗ್ರ ವಿಭಾಗದಲ್ಲಿ 5ನೇ ಸ್ಥಾನ ಪಡೆಯಿತು. 2020ರಲ್ಲಿ ಪ್ರಥಮ ಬಾರಿಗೆ ರ‌್ಯಾಂಕಿಂಗ್ ಹಾಗೂ ಸ್ವಚ್ಛ ನಗರಿಗೆ ಪ್ರತ್ಯೇಕ ಪ್ರಶಸ್ತಿ ನೀಡಲಾಯಿತು. ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ಮೈಸೂರು ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಪಡೆದರೆ ಅದೇ ವಿಭಾಗದ ರ‌್ಯಾಂಕಿಂಗ್‌ನಲ್ಲಿ 2ನೇ ಸ್ಥಾನ ಪಡೆಯಿತು. 2021ರಲ್ಲಿ ನಗರ ಸ್ವಚ್ಛತೆಯ ಸಮಗ್ರ ವಿಭಾಗದಲ್ಲಿ 11ನೇ ಸ್ಥಾನಕ್ಕೆ, ಮಧ್ಯಮ ನಗರ ವಿಭಾಗದಲ್ಲಿ 7ನೇ ಸ್ಥಾನಕ್ಕೆ ಕುಸಿಯಿತು. 1 ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರಗಳ ಸ್ವಚ್ಛತೆಯ ವಿಭಾಗದಲ್ಲಿ ಮೈಸೂರು ದೇಶದ ನಂ.1 ‘ಸ್ವಯಂ ಸುಸ್ಥಿರ ನಗರ’ (ಸೆಲ್ಫ್ ಸಸ್ಟೈನಬಲ್ ಸಿಟಿ) ಪ್ರಶಸ್ತಿ, ಸಫಾಯಿ ಮಿತ್ರ ಸುರಕ್ಷಾ ಪ್ರಶಸ್ತಿಯಲ್ಲಿ 5ನೇ ರ‌್ಯಾಂಕ್ ಪಡೆದುಕೊಂಡಿತು. ಪೌರಕಾರ್ಮಿಕರ ಸಮವಸ್ತ್ರ ವಿನ್ಯಾಸ ಪ್ರಶಸ್ತಿ ಪಡೆದುಕೊಂಡಿತು. 2016ರಲ್ಲಿ ಬಯಲು ಶೌಚಮುಕ್ತ ನಗರ ಪ್ರಶಸ್ತಿ ಪಡೆದುಕೊಂಡಿತು. 2019, 2020, 2021ರಲ್ಲಿರಲ್ಲಿ ಫೈವ್‌ಸ್ಟಾರ್ ರೇಟಿಂಗ್‌ನೊಂದಿಗೆ ಸತತ ಮೂರು ಬಾರಿ ತ್ಯಾಜ್ಯ ಮುಕ್ತ ನಗರಿ ಪ್ರಶಸ್ತಿ ನಗರ ಮುಡಿಗೇರಿಸಿಕೊಂಡಿತು.
ಈ ಬಾರಿ ಸ್ವಚ್ಛತೆಯಲ್ಲಿ ನಾಲ್ಕು ಪ್ರಶಸ್ತಿಗಳನ್ನು ಪಡೆದು ಮೈಸೂರು ನಗರ ಉತ್ತಮ ಸಾಧನೆ ತೋರಿದರೂ ಸಹ ಸಮಗ್ರ ವಿಭಾಗದಲ್ಲಿ ಟಾಪ್-10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಸ್ವಚ್ಛತೆಯಲ್ಲಿ ಆಗಿರುವ ಕೆಲವೊಂದು ನ್ಯೂನತೆಗಳನ್ನು ಸರಿಪಡಿಸಿಕೊಂಡು ಮುಂದಿನ ಬಾರಿ ಟಾಪ್-10ನಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸಲಾಗುವುದು. ಕೇಂದ್ರ ಸರ್ಕಾರ 2022ರ ಸ್ವಚ್ಛ ಸರ್ವೇಕ್ಷಣೆಯ ಟೂಲ್‌ಕಿಟ್ ಬಿಡುಗಡೆ ಮಾಡಿದ್ದು, ಅದಕ್ಕೆ ಪೂರಕವಾಗಿ ನಗರವನ್ನು ಸಜ್ಜುಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗುವುದು.
ಡಾ.ನಾಗರಾಜ್, ನಗರ ಪಾಲಿಕೆ ಆರೋಗ್ಯಾಧಿಕಾರಿ