

ಬಸವಕಲ್ಯಾಣ: ಗ್ರಾಮೀಣ ಮತ್ತು ನಗರದ ಪ್ರದೇಶದಲ್ಲಿ ಶುಚಿತ್ವದ ಅರಿವು ಮೂಡಿಸುವ ಉದ್ದೇಶದಿಂದ ಸೆ.೧೪ರಿಂದ ಅ.೧ರವರೆಗೆ ಹಮ್ಮಿಕೊಂಡಿರುವ ಸ್ವಚ್ಛತಾ ಹೀ ಸೇವಾ ಅಭಿಯಾನ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯಶಸ್ವಿಗೊಳಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ ಸುಲ್ಫಿ ಹೇಳಿದರು.
ಪರ್ತಾಪುರ ಗ್ರಾಮದಲ್ಲಿ ಗುರುವಾರ ಸ್ವಚ್ಛತಾ ಹೀ ಸೇವಾ ಅಭಿಯಾನ ನಿಮಿತ್ತ ಏರ್ಪಡಿಸಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಿತ್ಯ ಚಟುವಟಿಕೆ ಮೂಲಕ ಸ್ವಚ್ಛತಾ ಅಭಿಯಾನ ನಡೆಸಬೇಕು ಎಂದರು.
ಮನುಷ್ಯನಿಗೆ ಮೂಲಸೌರ್ಯ ಎಷ್ಟು ಮುಖ್ಯವೋ ಆರೋಗ್ಯವಂತ ಜೀವನಕ್ಕೆ ಉತ್ತಮ ವಾತಾವರಣವೂ ಅಷ್ಟೇ ಮುಖ್ಯ. ಹೀಗಾಗಿ ನಮ್ಮ ಸುತ್ತಲಿನ ಪರಿಸರ ಶುಚಿಯಾಗಿಡುವ ಅಗತ್ಯವಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಶೋಭಾ ಮೇತ್ರೆ, ಉಪಾಧ್ಯಕ್ಷ ಸಂತೋಷ ಬಿರಾದಾರ, ಸದಸ್ಯರಾದ ಖುರ್ಷಿದ್, ಕಾವೇರಿ ನಾಮದೇವ, ಪ್ರಮುಖರಾದ ನವನಾಥ ರಾಠೋಡ್, ಪಿಡಿಒ ಚಂದ್ರಾಮ ಧೂಳಖೇಡ, ವಿದ್ಯಾಸಾಗರ ಉಡಚಣ ಇತರರಿದ್ದರು. ನಂತರ ಶಾಲಾ ಆವರಣ, ಅಂಗನವಾಡಿ, ಆರೋಗ್ಯ ಉಪಕೇಂದ್ರ, ಬಸ್ ನಿಲ್ದಾಣ ಇತರೆಡೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.