

ಕೋಲಾರ: ಪ್ರಸಕ್ತ ಸಾಲಿನಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕೋಲಾರ ಜಿಲ್ಲೆಯು ಶೇ.96ರಷ್ಟು ಗುರಿ ಸಾಧಿಸಿರುವುದು ಶ್ಲಾಘನೀಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರಿನ ಕಚೇರಿಯಿಂದ ವಿಡಿಯೋ ಸಂವಾದ ಮೂಲಕ ಸೋಮವಾರ ನಡೆಸಿದ ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಯೋಜನೆಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಕೋಲಾರ ಜಿಪಂ ಮುಖ್ಯ ಕಾರ್ಯದರ್ಶಿಗಳ ಪರವಾಗಿ ಉಪ ಕಾರ್ಯದರ್ಶಿ ಶಿವಕುಮಾರ್ ಮಾಹಿತಿ ನೀಡಿ, ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ 1,863 ಶೌಚಗೃಹಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿತ್ತು, ಇದರಲ್ಲಿ 1789 ಶೌಚಗೃಹಗಳನ್ನು ನಿರ್ಮಿಸಿ ಶೇ.96 ಗುರಿ ಸಾಧನೆ ಮಾಡಲಾಗಿದೆ. ಒಟ್ಟಾರೆ 2,909 ಅರ್ಜಿಗಳು ಸ್ವೀಕೃತಗೊಂಡಿದ್ದು, ಉಳಿದ ಅರ್ಜಿಗಳು ಪರಿಶೀಲನೆಯಲ್ಲಿವೆ. ಜಲಜೀವನ್ ಮಿಷನ್ ಅಡಿಯಲ್ಲಿ 1814 ಗುರಿ ಹೊಂದಿದ್ದು, 1,048 ಅರ್ಜಿಗಳು ಪ್ರಗತಿಯಲ್ಲಿವೆ. ಉಳಿದವುಗಳು ನೀತಿಸಂಹಿತೆ ಮುಕ್ತಾಯದ ನಂತರ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. ಕಾರ್ಯಪಾಲಕ ಅಭಿಯಂತ ಅಮರಪ್ಪ ಹೊಸಪೇಟೆ, ಜಿಪಂ ಸಹಾಯಕ ಯೋಜನಾಧಿಕಾರಿ ಗೋವಿಂದರಾಜು, ಸೇರಿದಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಅರಣ್ಯೀಕರಣಕ್ಕೆ ಹೆಚ್ಚು ಒತ್ತು
ಪ್ರಸ್ತುತ ಜಿಲ್ಲೆಯಲ್ಲಿ ಅರಣ್ಯೀಕರಣ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 1,50,000 ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಪ್ರಸಕ್ತ ಸಾಲಿನಲ್ಲಿ ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯ ರೈತರಿಗೆ ಮೇವಿನ ಕೊರತೆ ಉದ್ಭವಿಸುತ್ತಿರುವದರಿಂದ ಆಯ್ದ 6000 ರೈತರಿಗೆ ನರೇಗಾ ಯೋಜನೆಯಡಿ ಹುಲ್ಲು ಮತ್ತು ಮೇವಿನ ಮರಗಳನ್ನು ಬೆಳೆಸಲು ಕ್ರಿಯಾ ಯೋಜನೆ ರೂಪಿಸಿ, ಅನುಮೋದಿಸಿ ಎಲ್ಲ ಗ್ರಾಪಂಗಳಿಗೆ ನೀಡಲಾಗಿದೆ. ಇದರಿಂದಾಗಿ ಹಸಿ ಮೇವಿನ ಉತ್ಪಾದನೆ ಗಣನೀಯವಾಗಿ ಹೆಚ್ಚಾಗಲಿದೆ ಎಂದು ಶಿವಕುಮಾರ್‌ತಿಳಿಸಿದರು. ಬೇಸಿಗೆಯಿಂದಾಗಿ ಕೆರೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಸದರಿ ಕೆರೆಗಳಿಗೆ ಬರುವ ಜಲಮೂಲಗಳನ್ನು ಸಂರಕ್ಷಿಸಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಶುದ್ಧ ಕುಡಿಯುವ ನೀರು ಸರಬರಾಜು
ಒಟ್ಟಾರೆ ಜಿಲ್ಲೆಯಲ್ಲಿ 1,13,000 ಎ್.ಎಸ್.ಟಿ.ಸಿ ನಲ್ಲಿಗಳನ್ನು ಅಳವಡಿಸಲಾಗಿದೆ. ನೀರಿನ ಗುಣಮಟ್ಟ ಪರೀಕ್ಷಿಸಲು ಮೂರು ಪ್ರಯೋಗಾಲಯಗಳಿದ್ದು, ಜಿಲ್ಲಾದ್ಯಂತ 10,000 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇಡೀ ಜಿಲ್ಲೆಯಲ್ಲಿ ಯಾವುದೇ ಜೈವಿಕ ಮಾಲಿನ್ಯ ಕಂಡುಬಂದಿಲ್ಲ. ಪ್ರತಿ ಗ್ರಾಪಂನ ವಾಟರ್‌ಮ್ಯಾನ್‌ಗಳಿಗೆ ಎ್ಟಿಕೆಗಳನ್ನು (ಫೀಲ್ಡ್ ಟೆಸ್ಟ್ ಕಿಟ್) ವಿತರಿಸಲಾಗಿದೆ. ಎಲ್ಲ ಗ್ರಾಪಂನ ವಾಟರ್‌ಮ್ಯಾನ್ ಮತ್ತು ಪಿಡಿಒಗಳಿಗೆ ಈಗಾಗಲೇ ನೀರಿನ ಗುಣಮಟ್ಟ ಪರೀಕ್ಷೆ ಮಾಡುವ ತರಬೇತಿ ನೀಡಲಾಗಿದೆ. ಪ್ರಾಥಮಿಕ ಹಂತದ ಪರೀಕ್ಷೆಯಲ್ಲಿ ನೀರಿನ ಗುಣಮಟ್ಟವನ್ನು ಬಣ್ಣಗಳ ಮುಖಾಂತರ ಗುರುತಿಸಬಹುದಾಗಿದೆ. ಈವರೆಗೆ ಕಳಪೆ ಗುಣಮಟ್ಟದ ಕುಡಿಯುವ ನೀರು ಜಿಲ್ಲಾದ್ಯಂತ ಪತ್ತೆಯಾಗಿಲ್ಲ. ಜಿಲ್ಲಾದ್ಯಂತ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ ಶಿವಕುಮಾರ್ ಮಾಹಿತಿ ನೀಡಿದರು.
ನರೇಗಾ ಸದ್ಬಳಕೆ
ಜಿಲ್ಲೆಯ 10 ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ನೀರಿನ ಕೊರತೆ ಉಂಟಾಗಿದ್ದು, ಖಾಸಗಿ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗಿದೆ. ಪ್ರಸ್ತುತ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ಶಿವಕುಮಾರ್ ಸಭೆಗೆ ತಿಳಿಸಿದರು. ನರೇಗಾ ಯೋಜನೆಯಡಿ 6 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಇದರಲ್ಲಿ ಶೇ.75 ಬರ ಪರಿಸ್ಥಿತಿ ಹಾಗೂ ಜಲಸಂರಕ್ಷಣೆ ಎದುರಿಸಲು ಬೇಕಾಗುವ ಕಾಮಗಾರಿಗಳಿಗೆ ಬಳಸಲಾಗಿದೆ. ಜಲಸಂರಕ್ಷಣೆ ಕಾಮಗಾರಿ ಗಳಲ್ಲಿ ಫೀಡರ್ ಚಾನಲ್, ಕೆರೆ ಅಭಿವೃದ್ಧಿ, ಹೂಳು ತೆಗೆಯುವುದು, ಕೊಳವೆ ಬಾವಿಗಳ ಮರುಪೂರಣ , ಕಂದಕ, ಬದು, ಕೃಷಿ ಹೊಂಡ, ನೀರಿನ ಹೊಂಡ ಮೊದಲಾದವುಗಳ ನಿರ್ಮಾಣಕ್ಕಾಗಿ ಈ ಮಾನವ ದಿನಗಳನ್ನು ಬಳಸಲಾಗಿದೆ ಎಂದು ವಿವರಿಸಿದರು.