

ಮೈಸೂರು: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ‘ಸ್ವಚ್ಛ ಸರ್ವೇಕ್ಷಣೆ’ಯಲ್ಲಿ ಪ್ರತಿ ಬಾರಿ ದೇಶದ ಗಮನ ಸೆಳೆಯುತ್ತಿದ್ದ ಸಾಂಸ್ಕೃತಿಕ ನಗರಿ ಮೈಸೂರು ಪ್ರಥಮ ಬಾರಿಗೆ ಸಮಗ್ರ ವಿಭಾಗದಲ್ಲಿ 27ನೇ ಸ್ಥಾನಕ್ಕೆ ಕುಸಿದಿದ್ದು, ಮೈಸೂರು ಸ್ವಚ್ಛತೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ.
ಮೈಸೂರು 2021ರಲ್ಲಿ 11 ಸ್ಥಾನಕ್ಕೆ ಕುಸಿತ ಕಂಡಿತ್ತು. ಅದನ್ನು ಹೊರತು ಪಡಿಸಿದರೆ ಉಳಿದ ಎಲ್ಲ ವರ್ಷಗಳಲ್ಲೂ ದೇಶದ ಟಾಪ್-10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತಿತ್ತು. ಇದೇ ಪ್ರಥಮ ಬಾರಿಗೆ ಟಾಪ್-30 ಪಟ್ಟಿಗೆ ಮೈಸೂರು ಸೇರ್ಪಡೆಗೊಂಡಿದೆ. ಪ್ರತಿ ಬಾರಿ ಮಧ್ಯಮ ನಗರದಲ್ಲಿ ಪ್ರಥಮ, ದ್ವಿತೀಯ, ತೃತೀಯ ಅಥವಾ ಟಾಪ್-10 ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದ ಮೈಸೂರಿಗೆ ಈ ಬಾರಿ ಅಲ್ಲೂ ಸ್ಥಾನ ದೊರೆತ್ತಿಲ್ಲ.
ಕಳಪೆ ಸಾಧನೆ ತೋರಿದ ನಗರ: ಸಮಗ್ರ ವಿಭಾಗದಲ್ಲಿ ಸತತ 6ನೇ ಬಾರಿ ದೇಶದ ನಂ.1 ಸ್ವಚ್ಛ ನಗರಿಯಾಗಿ ಹೊರಹೊಮ್ಮಿದ್ದ ಮಧ್ಯಪ್ರದೇಶದ ಇಂದೋರ್ ನಗರ ಈ ಬಾರಿ ಸೂರತ್ ನಗರದೊಂದಿಗೆ (ತಲಾ 9348.39 ಅಂಕಗಳು) ಪ್ರಥಮ ಸ್ಥಾನವನ್ನು ಹಂಚಿಕೊಂಡಿದೆ. ನವಿಮುಂಬೈ 9240.27 ಅಂಕಗಳನ್ನು ಪಡೆದು 3ನೇ ಸ್ಥಾನ ಪಡೆದಿದೆ. ಮೈಸೂರು 7753.46 ಅಂಕಗಳನ್ನು ಕಲೆಹಾಕಿ 27ನೇ ಸ್ಥಾನ ಪಡೆದುಕೊಂಡಿದೆ. ಈ ವಿಭಾಗದಲ್ಲಿ ಮೈಸೂರು ಕಳೆದ ಬಾರಿ 8ನೇ ಸ್ಥಾನ ಪಡೆದುಕೊಂಡಿತ್ತು. 1 ಲಕ್ಷ ಮೇಲ್ಪಟ್ಟ ನಗರಗಳ ಪೈಕಿ ಮೈಸೂರು 23ನೇ ಸ್ಥಾನ ಪಡೆದುಕೊಂ ಡಿದೆ. ಈ ವಿಭಾಗದಲ್ಲಿ ಇಂದೋರ್ ಹಾಗೂ ಸೂರತ್ ನಗರ ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದು, ನವಿಮುಂಬೈ 3ನೇ ಸ್ಥಾನ ಪಡೆದಿದೆ. ಸ್ಟೇಟ್ ರ‌್ಯಾಂಕಿಂಗ್‌ನಲ್ಲಿ ಮೈಸೂರು ನಂ.1 ಸ್ಥಾನ ಪಡೆದುಕೊಂಡಿದೆ. ಮಲಿನ ನೀರು ಸಂಸ್ಕರಣೆಗೆ ಸಂಬಂಧಿಸಿದ ನೀಡಲಾಗುವ ‘ವಾಟರ್ ಪ್ಲಸ್’ ರ‌್ಯಾಂಕಿಂಗ್‌ನಲ್ಲಿ ಮೈಸೂರು ದೇಶದಲ್ಲಿ 23ನೇ ಸ್ಥಾನ, ರಾಜ್ಯದಲ್ಲಿ ಹೊಸದುರ್ಗ ನಗರದೊಂದಿಗೆ ನಂ. 1ಸ್ಥಾನವನ್ನು ಹಂಚಿಕೊಂ ಡಿದೆ.
ರೇಟಿಂಗ್‌ನಲ್ಲೂ ಕುಸಿತ: 2019ರಿಂದ ನಿರಂತರವಾಗಿ ಫೈವ್‌ಸ್ಟಾರ್ ರೇಟಿಂಗ್‌ನೊಂದಿಗೆ ತ್ಯಾಜ್ಯ ಮುಕ್ತ ನಗರಿ ಪ್ರಶಸ್ತಿ ಪಡೆಯುತ್ತಿದ್ದ ಮೈಸೂರು ಈ ಬಾರಿ 3ನೇ ಸ್ಟಾರ್‌ಗೆ ಕುಸಿತ ಕಂಡಿದೆ. ನಗರ 7ನೇ ಸ್ಟಾರ್ ರೇಟಿಂಗ್ ಪಡೆಯಲು ಪ್ರಯತ್ನ ನಡೆಸಿತ್ತು. ಕಳೆದ ಬಾರಿ 7ನೇ ಸ್ಟಾರ್ ರೇಟಿಂಗ್ ಪಡೆದಿದ್ದ ದೇಶದ ನಂ.1 ಸ್ವಚ್ಛ ನಗರಿ ಇಂದೋರ್ ಈ ಬಾರಿ 3ನೇ ಸ್ಟಾರ್ ರೇಟಿಂಗ್‌ಗೆ ಕುಸಿತ ಕಂಡಿದೆ. ಈ ಬಾರಿ ಸೂರತ್ ಮತ್ತು ತಾಣೆ ನಗರ ಮಾತ್ರ 7ನೇ ಸ್ಟಾರ್ ರೇಟಿಂಗ್ ಪಡೆದಿದ್ದು, 10 ನಗರಗಳು ಫೈವ್‌ಸ್ಟಾರ್ ರೇಟಿಂಗ್ ಪಡೆದುಕೊಂಡಿವೆ.
ಸ್ವಚ್ಛತೆಯಲ್ಲಿ ಮೈಸೂರಿನ ಸಾಧನೆ
2015, 2016ರಲ್ಲಿ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. 2017ರಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 2018ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ದೇಶದ ನಂ.1 ಸ್ವಚ್ಛ ನಗರಿ ಪಟ್ಟ ಪಡೆದರೂ ಸಮಗ್ರ ವಿಭಾಗದಲ್ಲಿ 8ನೇ ಸ್ಥಾನಕ್ಕೆ ಕುಸಿತ ಕಂಡಿತ್ತು. 2019ರಲ್ಲಿ ಸಮಗ್ರ ವಿಭಾಗದಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. 2020ರಲ್ಲಿ ಪ್ರಥಮ ಬಾರಿಗೆ ರ‌್ಯಾಂಕಿಂಗ್ ಹಾಗೂ ಸ್ವಚ್ಛ ನಗರ ಪ್ರಶಸ್ತಿಯನ್ನು ಪ್ರತ್ಯೇಕವಾಗಿ ನೀಡಲಾಯಿತು. ಆ ವರ್ಷದಲ್ಲಿ ಸಮಗ್ರ ವಿಭಾಗದಲ್ಲಿ 5ನೇ ಸ್ಥಾನಕ್ಕೆ ಕುಸಿದ ಮೈಸೂರು ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಪಡೆದರೆ ಅದೇ ವಿಭಾಗದ ರ‌್ಯಾಂಕಿಂಗ್‌ನಲ್ಲಿ 2ನೇ ಸ್ಥಾನ ಪಡೆದುಕೊಂಡಿತ್ತು.
2021ರಲ್ಲಿ ಸ್ವಚ್ಛತೆಯ ಸಮಗ್ರ ವಿಭಾಗದಲ್ಲಿ 11ನೇ ಸ್ಥಾನಕ್ಕೆ ಹಾಗೂ ಮಧ್ಯಮ ನಗರ ವಿಭಾಗದಲ್ಲಿ 7ನೇ ಸ್ಥಾನಕ್ಕೆ ಕುಸಿಯಿತು. 1 ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರಗಳ ಸ್ವಚ್ಛತೆಯ ವಿಭಾಗದಲ್ಲಿ ದೇಶದ ನಂ.1 ‘ಸ್ವಯಂ ಸುಸ್ಥಿರ ನಗರ’ (ಸೆಲ್ಫ್ ಸಸ್ಟೈನಬಲ್ ಸಿಟಿ) ಪ್ರಶಸ್ತಿ ಪಡೆಯಿತು. 2022ರಲ್ಲಿ ಸಮಗ್ರ ವಿಭಾಗದಲ್ಲಿ ಮೈಸೂರು 8ನೇ ಸ್ಥಾನ ಪಡೆದುಕೊಂಡಿತ್ತು. 3 ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರಗಳಲ್ಲಿ (ಮಧ್ಯಮ ನಗರ) ದೇಶದ ನಂ.1 ಸ್ವಚ್ಛ ನಗರ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. 1 ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರದಲ್ಲಿ 2ನೇ ರ‌್ಯಾಂಕ್ ಪಡೆದುಕೊಂಡಿತ್ತು.
ಗ್ರಾಮಾಂತರ ಭಾಗದ ಸಾಧನೆ
ಬನ್ನೂರು ಪುರಸಭೆ ರಾಷ್ಟ್ರ ಮಟ್ಟದಲ್ಲಿ 2,284ನೇ ಸ್ಥಾನ, ರಾಜ್ಯ ಮಟ್ಟದಲ್ಲಿ 48ನೇ ಸ್ಥಾನ, ಜೋನಲ್ ರ‌್ಯಾಂಕಿಂಗ್‌ನಲ್ಲಿ 110ನೇ ಸ್ಥಾನ ಪಡೆದುಕೊಂಡಿದೆ. ಅದೇ ರೀತಿ ಬೋಗಾದಿ ಪಟ್ಟಣ ಪಂಚಾಯಿತಿ ಕ್ರಮವಾಗಿ 3,024, 138 ಹಾಗೂ 222ನೇ ಸ್ಥಾನ, ಎಚ್.ಡಿ. ಕೋಟೆ ಪುರಸಭೆ 3123, 153 ಹಾಗೂ 307ನೇ ಸ್ಥಾನ, ಹೂಟಗಳ್ಳಿ ನಗರಸಭೆ 3804, 267 ಹಾಗೂ 201, ಹುಣಸೂರು ನಗರಸಭೆ 2829, 101 ಮತ್ತು 160, ಕಡಕೊಳ ಪಟ್ಟಣ ಪಂಚಾಯಿತಿ 3716, 254 ಮತ್ತು 311, ಕೆ.ಆರ್.ನಗರ ಪುರಸಭೆ 1671, 17 ಮತ್ತು 91, ನಂಜನಗೂಡು ನಗರಸಭೆ 1825, 21 ಮತ್ತು 99, ಪಿರಿಯಾಪಟ್ಟಣ ಪುರಸಭೆ 1425, 11 ಹಾಗೂ 36, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ 3478, 222 ಮತ್ತು 303, ಸರಗೂರು ಪಟ್ಟಣ ಪಂಚಾಯಿತಿ 3682, 251 ಮತ್ತು 350, ಶ್ರೀರಾಂಪುರ ಪಟ್ಟಣ ಪಂಚಾಯಿತಿ 3362, 197 ಮತ್ತು 338, ತಿ.ನರಸೀಪುರ ಪುರಸಭೆ 2255, 46 ಮತ್ತು 134ನೇ ಸ್ಥಾನ ಪಡೆದುಕೊಂಡಿದೆ.
ಮೈಸೂರಿನ ಹಿನ್ನಡೆಗೆ ಮೂರು ಕಾರಣಗಳು
1. ಮನೆ ಮನೆಯಿಂದ ಸಮರ್ಪಕವಾಗಿ ಸಂಗ್ರಹವಾದ ತ್ಯಾಜ್ಯ
2. ತ್ಯಾಜ್ಯವನ್ನು ಮೂಲದಲ್ಲಿಯೇ ಸರಿಯಾಗಿ ಹಸಿ ಕಸ, ಒಣಕಸವಾಗಿ ವಿಂಗಡಿಸದೆ ಇರುವುದು
3. ಉತ್ಪಾದನೆಯಾಗುತ್ತಿರುವ ತ್ಯಾಜ್ಯ ಪೂರ್ಣ ಪ್ರಮಾಣದಲ್ಲಿ ಸಂಸ್ಕರಣೆಯಾಗದೆ ಇರುವುದು