

ಸದೇಶ್ ಕಾರ್ಮಾಡ್ ಮೈಸೂರು
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣೆ-2024ಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜು ಗೊಳ್ಳುತ್ತಿದ್ದು, 2024ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ಸಾಧನೆ ತೋರಲು ಪಾಲಿಕೆ ಪಣತೊಟ್ಟಿದೆ.
ಸ್ವಚ್ಛ ಸರ್ವೇಕ್ಷಣೆ 2023ರ ಫಲಿತಾಂಶ ಡಿಸೆಂಬರ್‌ನಲ್ಲಿ ಪ್ರಕಟವಾಗಲಿದ್ದು, ಈ ನಡುವೆ 2024ರ ಸ್ವಚ್ಛ ಸರ್ವೇಕ್ಷಣೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಲು ಕೇಂದ್ರದಿಂದ ತಂಡ ಅನಿರೀಕ್ಷಿತ ಭೇಟಿ ನೀಡಿ ನಗರದ ವಿವಿಧೆಡೆ ಸಂಚರಿಸಿ ನಗರದ ಸ್ವಚ್ಛತೆಯ ಕುರಿತು ಮಾಹಿತಿ ಕಲೆ ಹಾಕಿದೆ.
2024ರಲ್ಲೂ 9,500 ಅಂಕಗಳಿಗೆ ಸ್ವಚ್ಛ ಸರ್ವೇಕ್ಷಣೆ ನಡೆಯಲಿದೆ. 2023ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸರ್ವಿಸ್ ಲೆವಲ್ ಪ್ರೋಗ್ರೆಸ್‌ಗೆ 4,525, ಸರ್ಟಿಫಿಕೇಷನ್‌ಗೆ 2500, ಸಿಟಿಜನ್ ವಾಯ್ಸಗೆ 2,475 ಅಂಕಗಳನ್ನು ನಿಗದಿ ಪಡಿಸಲಾಗಿದ್ದು, 2024ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸರ್ವಿಸ್ ಲೆವಲ್ ಪ್ರೋಗ್ರೆಸ್‌ಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 5,705 ಅಂಕಗಳನ್ನು ನಿಗದಿಪಡಿಸಲಾಗಿದೆ. ಸರ್ಟಿಫಿಕೇಷನ್‌ಗೆ 2,500 ಅಂಕಗಳನ್ನು ನಿಗದಿ ಪಡಿಸಲಾಗಿದೆ. ಸಿಟಿಜನ್ ವಾಯ್ಸ ವಿಭಾಗದ ಹೆಸರನ್ನು ಬದಲಾಯಿಸಲಾಗಿದ್ದು, ‘ಜನ ಆಂದೋಲನ’ ಎಂದು ಕರೆಯಲಾಗಿದೆ. ಜನ ಆಂದೋಲನಕ್ಕೆ 1,295 ಅಂಕಗಳನ್ನು ನಿಗದಿ ಪಡಿಸಲಾಗಿದೆ.
ಸರ್ವಿಸ್ ಲೆವಲ್ ಪ್ರೋಗ್ರೆಸ್ ವಿಭಾಗದಲ್ಲಿ ಅಂಕಗಳನ್ನು ನೀಡುವ ಸಂದರ್ಭ ಮನೆ ಮನೆಗಳಿಂದ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವಾಗಿ ವಿಂಗಡಿಸಿ ನೀಡಲಾಗುತ್ತಿದೆಯೇ?, ಸಂಗ್ರಹಿಸಿದ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಸಂಸ್ಕರಣೆ ಮಾಡಲಾಗುತ್ತಿದೆಯೇ? ನಗರದಲ್ಲಿ ನೈರ್ಮಲ್ಯವನ್ನು ಸದಾ ಉತ್ತಮವಾಗಿ ಕಾಪಾಡಲಾಗುತ್ತಿದೆಯೇ?, ಒಳಚರಂಡಿ ಶುಚಿಗೊಳಿಸಲು ಯಂತ್ರೋ ಪಕರಣ ಬಳಕೆ ಮಾಡಲಾಗುತ್ತಿದೆಯೇ ಎಂಬ ಅಂಶಗಳನ್ನು ಪ್ರಮುಖವಾಗಿ ಗಮನಿಸಲಾಗುತ್ತದೆ.
ಸರ್ಟಿಫಿಕೇಷನ್‌ಗೆ 2,500 ಅಂಕಗಳನ್ನು ನಿಗದಿ ಪಡಿಸಲಾಗಿದ್ದು, ಪೂರ್ಣ ಅಂಕಗಳನ್ನು ಪಡೆಯಲು ಬಯಲು ಶೌಚ ಮುಕ್ತ ನಗರ ವಿಭಾಗದಲ್ಲಿ ವಾಟರ್ ಪ್ಲಸ್ ಸಿಟಿ ರ‌್ಯಾಂಕಿಂಗ್ ಪಡೆಯಬೇಕು. ಅದೇ ರೀತಿ ತ್ಯಾಜ್ಯಮುಕ್ತ ನಗರ ವಿಭಾಗದಲ್ಲಿ 7ಸ್ಟಾರ್ ರ‌್ಯಾಂಕಿಂಗ್ ಪಡೆಯಬೇಕು. ಮೈಸೂರು ನಗರ ಪ್ರಸ್ತುತ ಬಯಲು ಶೌಚ ಮುಕ್ತ ನಗರ ಹಾಗೂ ತ್ಯಾಜ್ಯ ಮುಕ್ತ ನಗರದಲ್ಲಿ 5 ಸ್ಟಾರ್ ರ‌್ಯಾಂಕಿಂಗ್ ಪಡೆದು ಕೊಂಡಿದೆ.
2023ರ ಸ್ವಚ್ಛ ಸರ್ವೇಕ್ಷಣೆ ‘ವೇಸ್ಟ್ ಟು ವೆಲ್ತ್’ ಪರಿಕಲ್ಪನೆಯಲ್ಲಿ ನಡೆಯುತ್ತಿದೆ. 2024ರ ಸ್ವಚ್ಛ ಸರ್ವೇಕ್ಷಣೆಯು ರೆಡ್ಯೂಸ್ (ಕಡಿಮೆ ಮಾಡು), ರೀಯೂಸ್ (ಮರುಬಳಕೆ) ಮತ್ತು ರೀಸೈಕಲ್ (ಪುನರ್ಬಳಕೆ) ಥೀಮ್‌ನಡಿ ನಡೆಯಲಿದೆ. ಪ್ರತಿನಿತ್ಯ ಸಂಗ್ರಹವಾಗುವ ತ್ಯಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಂಡುಬರುತ್ತಿದ್ದು, ಪ್ಲಾಸ್ಟಿಕ್‌ಅನ್ನು ರೆಡ್ಯೂಸ್, ರೀಯೂಸ್ ಹಾಗೂ ರೀಸೈಕಲ್ ಮಾಡಿದರೆ ಪರಿಸರ ಮಾಲಿನ್ಯದ ಪ್ರಮಾಣವನ್ನು ತಗ್ಗಿಸಬಹುದು. ಇದೇ ರೀತಿ ಹಲವು ವಸ್ತುಗಳನ್ನು ಹೆಚ್ಚಾಗಿ ಮರು ಬಳಕೆಗೆ ಒತ್ತು ನೀಡಿದರೆ ನಮ್ಮ ಪರಿಸರವನ್ನು ಸ್ವಚ್ಛ, ಸುಂದರವಾಗಿ ಇರಿಸಬಹುದು.
2015, 2016ರಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆಯ ಸಮಗ್ರ ವಿಭಾಗದಲ್ಲಿ ನಗರ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. 2017ರಲ್ಲಿ 5ನೇ ಸ್ಥಾನ, 2019ರಲ್ಲಿ 3ನೇ ಸ್ಥಾನ, 2020ರಲ್ಲಿ 5ನೇ ಸ್ಥಾನ, 2021ರಲ್ಲಿ 11ನೇ ಸ್ಥಾನ, 2022ರಲ್ಲಿ 8ನೇ ಸ್ಥಾನ ಪಡೆದುಕೊಂಡಿತ್ತು. 2018 ಮತ್ತು 2020ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ, 2021ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ 7ನೇ ಸ್ಥಾನ ಪಡೆಯಿತು. 2021ರಲ್ಲಿ 1 ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರಗಳ ಪೈಕಿ ಸ್ವಚ್ಛತೆಯ ವಿಭಾಗದಲ್ಲಿ ಮೈಸೂರು ದೇಶದ ನಂ.1 ‘ಸ್ವಯಂ ಸುಸ್ಥಿರ ನಗರ’ ಪ್ರಶಸ್ತಿ ಪಡೆಯಿತು. 2022ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ ದೇಶದ ನಂ.1 ಸ್ವಚ್ಛ ನಗರ ಪ್ರಶಸ್ತಿ ಮುಡಿಗೇರಿಸಿಕೊಂಡಿತು. 2019 ರಿಂದ ನಿರಂತರವಾಗಿ ಫೈವ್‌ಸ್ಟಾರ್ ರ‌್ಯಾಂಕಿಂಗ್ ನೊಂದಿಗೆ ತ್ಯಾಜ್ಯ ಮುಕ್ತ ನಗರಿ, ಬಯಲು ಶೌಚಮುಕ್ತ ನಗರ ಪ್ರಶಸ್ತಿ ನಗರ ಪ್ರಶಸ್ತಿ ಪಡೆಯುತ್ತಿದೆ. ಏಕ ಬಳಕೆಯ ಪ್ಲಾಸ್ಟಿಕ್ ಮರುಬಳಕೆ ಯಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಇಪಿಆರ್ ಸರ್ಟಿಫಿಕೇಟ್ ಪಡೆದುಕೊಂಡ ದೇಶದ ಪ್ರಥಮ ಮತ್ತು ಏಕೈಕ ನಗರ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ‘ನನ್ನ ಜೀವನ ನನ್ನ ಸ್ವಚ್ಛ ನಗರ’ ಅಭಿಯಾನದಲ್ಲಿ ಮೈಸೂರು ನಗರ ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಂಡಿದೆ. ಇಷ್ಟು ಮಾತ್ರವಲ್ಲದೆ ನಗರವು ಸ್ವಚ್ಛತೆಯಲ್ಲಿ ಹಲವು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣೆಗೆ ನಗರದಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ಇತ್ತೀಚೆಗೆ ನಗರಕ್ಕೆ ಕೇಂದ್ರದ ತಂಡ ಅನಿರೀಕ್ಷಿತ ಭೇಟಿ ನೀಡಿ ನಗರದ ಸ್ವಚ್ಛತೆಯನ್ನು ಪರಿಶೀಲಿಸಿದೆ. ಸ್ವಚ್ಛ ಸರ್ವೇಕ್ಷಣೆಗೆ ಬಿಡುಗಡೆಯಾಗಿರುವ ಟೂಲ್‌ಕಿಟ್‌ಗೆ ಅನುಸಾರವಾಗಿ ನಗರದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಪರಿಶ್ರಮಿಸಲಾಗುತ್ತಿದ್ದು, ಆ ಮೂಲಕ 2024ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ಸಾಧನೆ ತೋರುವ ನಿರೀಕ್ಷೆಯನ್ನು ಹೊಂದಿದ್ದೇವೆ.
ಡಾ.ವೆಂಕಟೇಶ್, ಆರೋಗ್ಯಾಧಿಕಾರಿ, ನಗರ ಪಾಲಿಕೆ