

ವಿಜಯವಾಣಿ ಸುದ್ದಿಜಾಲ ಕಾರ್ಕಳ
ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಕರೆಗೆ ಸ್ಪಂದಿಸಿ, ಯುವ ಬ್ರಿಗೇಡ್ ಮತ್ತು ರಾಮಕೃಷ್ಣ ಮಿಷನ್ ಮಂಗಳೂರು ಸ್ವಚ್ಛ ಕಾರ್ಯದಿಂದ ಸ್ಫೂರ್ತಿ ಪಡೆದು ಕಾರ್ಕಳವನ್ನು ಸ್ವಚ್ಛ ಹಾಗೂ ಕಸಮುಕ್ತ ಮಾಡುವ ಉದ್ದೇಶದಿಂದ ವರ್ಷದಲ್ಲಿ 100 ಗಂಟೆ ಸಮಯ ಮೀಸಲಿಡುವ ಪ್ರತಿಜ್ಞೆಯಿಂದ ಅಸ್ತಿತ್ವಕ್ಕೆ ಬಂದು ಶ್ರಮಿಸುತ್ತಿರುವ ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡಕ್ಕೆ 5ನೇ ವರ್ಷದ ಸಂಭ್ರಮ.
ತಾಲೂಕಿನ ಆಯ್ದ ಸ್ಥಳಗಳಲ್ಲಿ 200ಕ್ಕಿಂತಲೂ ಹೆಚ್ಚಿನ ಸ್ವಚ್ಛತಾ ಕಾರ್ಯಕ್ರಮ ಹಲವಾರು ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆಸಿದೆ. ಸುಮಾರು 1000 ಟನ್‌ಗಿಂತಲೂ ಅಧಿಕ ಕಸ ಸಂಗ್ರಹಿಸಿ ಅದನ್ನು ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಹಸ್ತಾಂತರಿಸುವ ಕೆಲಸ ಸಂಘಟನೆ ಮಾಡಿದೆ. ಸ್ವತಃ ನಿರ್ಮಿಸಿದ 500ಕ್ಕೂ ಅಧಿಕ ಕಸ ತುಂಬುವ ಡಬ್ಬಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ, ರಿಕ್ಷಾ, ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳಲ್ಲಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಅಳವಡಿಸುವ ಮೂಲಕ ಸ್ವಚ್ಛತೆಗೆ ಶ್ರಮಿಸುತ್ತಿದೆ.
ಸಾರ್ವಜನಿಕ ಸ್ಥಳಗಳನ್ನು ಸುಂದರೀಕರಣಗೊಳಿಸುವ ಉದ್ದೇಶದಿಂದ ಹಳೇ ಗೋಡೆಗಳಲ್ಲಿ ಸ್ವಚ್ಛ ಭಾರತ, ಪರಿಸರ ಸಂರಕ್ಷಣೆ, ಭಾರತದ ವೈಭವ ಹಾಗೂ ತುಳುನಾಡ ಪರಂಪರೆ ದೃಶ್ಯಗಳೊಂದಿಗೆ ನವೀಕರಣ ಮಾಡುವ ಅಭಿಯಾನ ಆಯೋಜನೆ, ಗೋಡೆಗಳ ನವೀಕರಣದಲ್ಲಿ ಸಾರ್ವಜನಿಕ ಭಾಗವಹಿಸುವಿಕೆ ದೃಷ್ಟಿಯಿಂದ ಜನ ಜಾಗೃತಿ ಮೂಡಿಸಲು ವರ್ಣ ಕಾರ್ಕಳ ಎಂಬ ಚಿತ್ರಕಲಾ ಸ್ಪರ್ಧೆ ಆಯೋಜನೆ, ಸ್ವಚ್ಛ ಭಾರತ ಅಭಿಯಾನ, ತ್ಯಾಜ್ಯ ವಿಭಜನೆ, ತ್ಯಾಜ್ಯ ವಿಲೇವಾರಿ ಮುಂತಾದ ವಿಷಯಗಳ ಬಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಸ್ವಚ್ಛತಾ ಸಂವಾದ ಎಂಬ ಕಾರ್ಯಕ್ರಮ ಆಯೋಜನೆ.
ಗ್ರಾಮ-ಗ್ರಾಮಗಳಲ್ಲಿ ಸ್ವಚ್ಛತಾ ಕ್ರಾಂತಿ ಹುಟ್ಟಿದರೆ ಮಾತ್ರ ಕಸ ಮುಕ್ತ ಕಾರ್ಕಳ ತಾಲೂಕಿನ ಕನಸು ನನಸಾಗುವುದು, ಈ ದೃಷ್ಟಿಯಿಂದ ಪ್ರತಿ ಗ್ರಾಮದಲ್ಲಿ ಸ್ಥಳೀಯ ತಂಡ, ಸಂಘ ಸಂಸ್ಥೆಗಳು ಮತ್ತು ಆಡಳಿತ ವರ್ಗ ಜತೆಗೂಡಿ ವಾರಕ್ಕೊಮ್ಮೆ ಸ್ವಚ್ಛತಾ ಅಭಿಯಾನ ಮಾಡುವಂತೆ ಪ್ರೋತ್ಸಾಹಿಸಲು ಸ್ವಚ್ಛ ಗ್ರಾಮ ನಮ್ಮ ಕನಸು ಅಭಿಯಾನ.
ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸಿಉ ಅವರ ಜನ್ಮ ದಿನಾಚರಣೆ ಪ್ರಯುಕ್ತ ಸ್ವಚ್ಛ ಭಾರತ್ ಮಿಷನ್ ಕುರಿತು ಜಾಗೃತಿ ಮೂಡಿಸಲು ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ ಸೈಕಲ್ ಜಾಥಾ ಆಯೋಜಿಸಿ ಗಾಂಧೀಜಿ ಸ್ವಚ್ಛತೆ ಸಂದೇಶ, ಸ್ವಚ್ಛ ಭಾರತದ ಪರಿಕಲ್ಪನೆಯೊಂದಿಗೆ ನಮ್ಮ 100ನೇ ಸ್ವಚ್ಛತಾ ಕಾರ್ಯಕ್ರಮದ ಪ್ರಯುಕ್ತ ಸ್ವಚ್ಛಮೇವ ಜಯತೇ ಎಂಬ ಶೀರ್ಷಿಕೆಯಡಿ ಕಿರುಚಿತ್ರ ಸ್ಪರ್ಧೆ, ಹೀಗೆ ಹತ್ತು ಹಲವು ಸ್ವಚ್ಛತೆಗಾಗಿ ತಾಲೂಕಾದ್ಯಂತ ಕಾರ್ಯಕ್ರಮ ಹಮ್ಮಿಕೊಂಡು ಕಳೆದ ಐದು ವರ್ಷಗಳಲ್ಲಿ ಸ್ವಚ್ಛತೆಗಾಗಿ ಈ ತಂಡ ಸದಾ ಶ್ರಮಿಸುತ್ತಿದೆ.