ಈ ಬಾರಿ ಸ್ವಚ್ಛ ದೀಪಾವಳಿ-ಶುಭ ದೀಪಾವಳಿ

Deepavali
Published on

ಸದೇಶ್ ಕಾರ್ಮಾಡ್ ಮೈಸೂರು
ಸಡಗರ ಸಂಭ್ರಮವನ್ನು ಹೊತ್ತು ತರುವ ದೀಪಾವಳಿ ಹಬ್ಬವನ್ನು ಈ ಬಾರಿ ‘ಸ್ವಚ್ಛ ದೀವಾಳಿ- ಶುಭ ದೀಪಾವಳಿ’ಯಾಗಿ ಆಚರಿಸ ಬೇಕು ಎಂಬ ಕೇಂದ್ರ ಸರ್ಕಾರದ ಕರೆಗೆ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಓಗುಡಲು ಪ್ರಾರಂಭಿಸಿದ್ದಾರೆ.

ಪಟಾಕಿ ಹಾಗೂ ಹಣತೆಗಳು ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಡಗರವನ್ನು ಹೆಚ್ಚಿಸುತ್ತದೆ. ಆದರೆ, ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ ಉಂಟಾಗುವುದು ಮಾತ್ರವಲ್ಲದೆ ಕಸ ಎಲ್ಲೆಂದರಲ್ಲಿ ಹರಡಿಕೊಂಡು ನಗರದ ಸೌಂದರ್ಯಕ್ಕೂ ಧಕ್ಕೆ ಉಂಟು ಮಾಡುತ್ತದೆ. ಹಾಗಾಗಿ ಈ ಬಾರಿ ಸ್ವಚ್ಛ ಭಾರತ್ ಮಿಷನ್‌ನ ಭಾಗವಾಗಿ ‘ಸ್ವಚ್ಛ ದೀಪಾವಳಿ-ಶುಭ ದೀಪಾವಳಿ’ ಆಚರಣೆಗೆ ಕೇಂದ್ರ ಸರ್ಕಾರ ಕರೆ ನೀಡಿ ದೆ.

ಈ ಬಾರಿಯ ದೀಪಾವಳಿ ಹಬ್ಬದಲ್ಲಿ ದೇಸಿ ಉತ್ಪನ್ನಗಳಿಗೆ ಉತ್ತೇಜನ ನೀಡುವುದು, ಏಕಬಳಕೆ ಪ್ಲಾಸ್ಟಿಕ್ ಬಳಸದೆ ಇರುವುದು ಹಾಗೂ ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು ಎಂಬ ಪ್ರಮುಖ ಮೂರು ಕರೆಯನ್ನು ಕೇಂದ್ರ ಸರ್ಕಾರ ದೇಶದ ಜನತೆಗೆ ನೀಡಿದೆ. ಈ ಕರೆಗೆ ಬೆಂಬಲ ವ್ಯಕ್ತಪಡಿಸಿ ಡಿಜಿಟಲ್ ಸಹಿ ಮಾಡಲು https://sbmurban.org/ ವೆಬ್‌ಸೈಟ್‌ನಲ್ಲಿ ಅವಕಾಶ ನೀಡಲಾಗಿದ್ದು, ಡಿಜಿಟಲ್ ಸಹಿ ಮಾಡಿದವರು ಅಭಿಯಾನದಲ್ಲಿ ಪಾಲ್ಗೊಂಡ ಡಿಜಿಟಲ್ ಸರ್ಟಿಫಿಕೇಟ್‌ಅನ್ನು ಪಡೆದುಕೊಳ್ಳಬಹುದು.

ಯುವಜನರ ಉತ್ಸಾಹ:

ದೀಪಾವಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ಈ ವಿಶೇಷ ಅಭಿಯಾನದಲ್ಲಿ ದೇಶದ ಯುವಜನರು ಹಾಗೂ ಮಧ್ಯಮ ವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. 20 ರಿಂದ 45 ವರ್ಷದೊಳಗಿನ ವಿಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ (ಶೇ.83.6) ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ‘ಸ್ವಚ್ಛ ದೀವಾಳಿ- ಶುಭ ದೀಪಾವಳಿ’ ಆಚರಿಸುವ ಸಂಕಲ್ಪ ತೊಟ್ಟಿದ್ದಾರೆ. ಪರಿಸರ ಸ್ನೇಹಿಯಾಗಿ ಆಚರಿಸಿದ ದೀಪಾವಳಿಯ ಸಂಭ್ರಮದ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ "#SwachDiwali' ಟ್ಯಾಗ್‌ಲೈನ್‌ನಲ್ಲಿ ಹಂಚಿಕೊಳ್ಳುವಂತೆ ಕರೆ ನೀಡಲಾಗಿದೆ.

ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ:

ದೀಪಾವಳಿ ಹಬ್ಬದಲ್ಲಿ ಮನೆ ಮನೆಗಳಲ್ಲೂ ಹಣತೆಯನ್ನು ಬೆಳಗಲಾಗುತ್ತದೆ. ಪ್ರತಿ ಬಾರಿ ಮಾರುಕಟ್ಟೆಗೆ ಚೀನಾದಲ್ಲಿ ಉತ್ಪಾದಿಸಿದ ಹಣತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತವೆ. ಹಾಗಾಗಿ ಈ ಬಾರಿ ಸ್ಥಳೀಯರಿಗೆ ಉತ್ತೇಜನ ನೀಡಲು ಸ್ಥಳೀಯರು ಉತ್ಪಾದಿಸಿದ ಮಣ್ಣಿನ ಹಣತೆಯನ್ನು ಖರೀದಿಸಿ ಎಂಬ ಕರೆಯನ್ನು ಕೇಂದ್ರ ಸರ್ಕಾರ ನೀಡಿದೆ.


ಸ್ವಚ್ಛತೆಗೆ ಇರಲಿ ಆದ್ಯತೆ:

ಹಬ್ಬದ ಸಂದರ್ಭ ಪಟಾಕಿ ಸಿಡಿಸುವ ಸಂದರ್ಭ ತ್ಯಾಜ್ಯ ಉತ್ಪಾದನೆಯಾಗುವುದು ಸಹಜ. ಈ ರೀತಿ ಉತ್ಪತಿಯಾಗುವ ತ್ಯಾಜ್ಯವನ್ನು ಆಗಿಂದಾಗೆ ತೆರವುಗೊಳಿಸುವ ಮೂಲಕ ನಗರವನ್ನು ಶುಚಿಯಾಗಿಡಲು ಪ್ರತಿಯೊಬ್ಬರು ಪ್ರಯತ್ನಿಸಬೇಕಾಗಿದೆ. ದೇಶದ ಸ್ವಚ್ಛ ನಗರಗಳ ಪೈಕಿ ಒಂದಾಗಿರುವ ಮೈಸೂರು ಸದಾ ಸ್ವಚ್ಛವಾಗಿರಲು ನಗರದ ಜನರ ಸಹಕಾರ ಅತ್ಯಂತ ಮುಖ್ಯವಾಗಿದೆ. ಹಾಗಾಗಿ ಈ ಬಾರಿ ಸ್ವಚ್ಛ ದೀಪಾವಳಿ ಆಚರಣೆಗೆ ಎಲ್ಲರು ಸಂಕಲ್ಪ ತೊಡುವ ಅವಶ್ಯಕತೆ ಇದೆ.

ಹಸಿರು ಪಟಾಕಿ ಬಳಸಿ

ಈ ಬಾರಿಯ ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಿ ಎಂದು ಕೇಂದ್ರ ಸರ್ಕಾರ ಕರೆ ನೀಡಿದ್ದು, ಜನರು ಪರಿಸರ ಸ್ನೇಹಿ ಪಟಾಕಿಗಳನ್ನು ಮಾತ್ರ ಖರೀದಿಸಿ ಪರಿಸರ ಉಳಿವಿಗೆ ಕೊಡುಗೆ ನೀಡಬೇಕು. ಪರಿಸರಕ್ಕೆ ಹೆಚ್ಚು ಹಾನಿ ಉಂಟು ಮಾಡುವ ಪಟಾಕಿಗಳನ್ನು ನಿಷೇಧಿಸಬೇಕು ಎಂದು 2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನ ಪ್ರಕಾರ 2020ರಲ್ಲಿ ಕೇಂದ್ರ ಸರ್ಕಾರ ಪರಿಸರಕ್ಕೆ ಹೆಚ್ಚು ಹಾನಿ ಉಂಟು ಮಾಡುವ ಪಟಾಕಿಗಳನ್ನು ನಿಷೇಧಿಸಿ ಹಸಿರು ಪಟಾಕಿಯನ್ನು ಮಾತ್ರ ಸಿಡಿಸುವಂತೆ ಸೂಚಿಸಿತ್ತು.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಹಾಗೂ ಎನ್‌ಇಇಆರ್‌ಐನ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಹಸಿರು ಪಟಾಕಿಯಲ್ಲಿ ಲೀಥಿಯಂ, ಆರ್ಸೆನಿಕ್, ಬೇರಿಯಂ ಮತ್ತು ಸತುವಿನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸುವುದಿಲ್ಲ. ಹಸಿರು ಪಟಾಕಿ ಮತ್ತು ಸಾಮಾನ್ಯ ಪಟಾಕಿ ಎರಡೂ ಮಾಲಿನ್ಯ ಉಂಟು ಮಾಡುತ್ತವೆಯಾದರೂ ಹಸಿರು ಪಟಾಕಿಯು ಸಾಮಾನ್ಯ ಪಟಾಕಿಗಿಂತ ಶೇ.30ರಷ್ಟು ಕಡಿಮೆ ವಾಯುಮಾಲಿನ್ಯ ಮಾಡುತ್ತದೆ. ಹಸಿರು ಪಟಾಕಿ ಕಡಿಮೆ ಹೊಗೆ ಹೊರಸೂಸುತ್ತದೆ. ಹಸಿರು ಪಟಾಕಿ ಅಧಿಕ ಶಬ್ದ ಹಾಗೂ ಹೊಗೆ ಸೂಸುವ ಬದಲು ನೀರಿನ ಆವಿಯನ್ನು ಬಿಡುಗಡೆ ಮಾಡುತ್ತದೆ.
ಹಸಿರು ಪಟಾಕಿಗಳ ಮೇಲೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ, ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಹಾಗೂ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ ವಿಶಿಷ್ಟ ಹಸಿರು ಲೋಗೋ ಇರುತ್ತದೆ. ಅಲ್ಲದೆ ಪಟಾಕಿಯಲ್ಲಿರುವ ಕ್ಯೂಆರ್ ಕೋಡ್ ಸ್ಕಾೃನ್ ಮಾಡುವ ಮೂಲಕ ಹಸಿರು ಪಟಾಕಿ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬಹುದು.


ಸುಪ್ರೀಂಕೋರ್ಟ್ ನಿರ್ದೇಶನ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಯಮದ ಪ್ರಕಾರ ಪರಿಸರಕ್ಕೆ ಹಾನಿಯಾಗುವ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ. ಜೆಕೆ ಮೈದಾನ ಹಾಗೂ ನಗರದ ಆಯ್ದ ಭಾಗಗಳಲ್ಲಿ ಈ ಬಾರಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಪರಿಸರಕ್ಕೆ ಮಾರಕವಾಗುವ ಪಟಾಕಿಗಳನ್ನು ಮಾರಾಟ ಮಾಡಿದರೆ ಕ್ರಮ ಜರುಗಿಸಲಾಗುವುದು.

ಅಸಾದ್ ಉರ್ ರೆಹಮಾನ್ ಶರೀಫ್, ನಗರ ಪಾಲಿಕೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net