

ಮಂಡ್ಯ: ವಿಶ್ವ ಶೌಚಗೃಹ ಮತ್ತು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಪ್ರಸ್ತುತ ವರ್ಷ ’ನಮ್ಮ ಶೌಚಗೃಹ ನಮ್ಮ ಗೌರವ’ ಎಂಬ ಶೀರ್ಷಿಕೆ ಹಾಗೂ ’ಅಂದದ ಶೌಚಗೃಹ ಆನಂದದ ಜೀವನ’ ಎಂಬ ಘೋಷವಾಕ್ಯದೊಂದಿಗೆ ಡಿ.10ರವರೆಗೆ ಜಿಲ್ಲೆಯಲ್ಲಿ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.
ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಚ್ಛ ಭಾರತ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ ನೈರ್ಮಲ್ಯ, ವೈಯುಕ್ತಿಕ ಹಾಗೂ ಸಮುದಾಯ ಶುಚಿತ್ವ ಕುರಿತು ಜಾಗೃತಿ ಮೂಡಿಸಿ, ಶೌಚಗೃಹವನ್ನು ನಿರಂತರವಾಗಿ ಬಳಸುವಂತೆ ಹಾಗೂ ಸುಸ್ಥಿರತೆಯನ್ನು ಕಾಪಾಡಿಕೊಳ್ಳುವಂತೆ ಪ್ರೇರೆಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯ ಸ್ಥಾನಮಾನವನ್ನು ಕಾಪಾಡಿಕೊಳ್ಳುವಲ್ಲಿ ಈ ಅಭಿಯಾನ ಪ್ರಮುಖ ಪಾತ್ರ ವಹಿಸುತ್ತಿದೆ. ಈ ವಿಶೇಷ ಆಂದೋಲನದ ಅವಧಿಯಲ್ಲಿ ಜಿಲ್ಲಾದ್ಯಂತ ನಿರುಪಯುಕ್ತ ಸಮುದಾಯ ಶೌಚಗೃಹ ಗುರುತಿಸಲು ಸಮೀಕ್ಷೆ ನಡೆಸಲಾಗುವುದು. ನೀರು ಮತ್ತು ನೈರ್ಮಲ್ಯ ವಿಷಯಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿನ ಪ್ರಸ್ತುತ ಸ್ಥಿತಿಗತಿ ಮತ್ತು ತೆಗೆದುಕೊಳ್ಳಬೇಕಾದ ಪರಿಹಾರ/ಯೋಜನಾ ಕ್ರಮಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ನಿರುಪಯುಕ್ತ ಸಮುದಾಯ ಶೌಚಗೃಹ ದುರಸ್ಥಿ, ಮರುಸ್ಥಾಪನೆ ಮತ್ತು ಪರಿಷ್ಕರಣೆಯ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಇದರೊಂದಿಗೆ ವೈಯುಕ್ತಿಕ/ಸಮುದಾಯ ಶೌಚಗೃಹದ ಅಂದವನ್ನು ಹೆಚ್ಚಿಸಲು ಜಾಗೃತಿ ಮೂಡಿಸಿ, ಸಮುದಾಯವನ್ನು ಈ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಲಾಗುವುದು. ಈ ವಿಶೇಷ ಆಂದೋಲನದ ಪ್ರಯುಕ್ತ ಗ್ರಾಮೀಣ ಸಮುದಾಯದಲ್ಲಿ ಶೌಚಗೃಹ ಬಳಕೆಗೆ ಉತ್ತೇಜನ, ವೈಯುಕ್ತಿಕ ಗೃಹ ಶೌಚಗೃಹಕ್ಕೆ ಕಾರ್ಯಾದೇಶ ಹಾಗೂ ಪ್ರೋತ್ಸಾಹಧನ ಮಂಜೂರಾತಿ ಆದೇಶ ಪತ್ರ ವಿತರಿಸಲಾಗುವುದು. ಗ್ರಾಮ ಪಂಚಾಯಿತಿ ಹಂತದಲ್ಲಿ ಸ್ವಚ್ಛ, ಸುಂದರ ವೈಯುಕ್ತಿಕ ಗೃಹ ಮತ್ತು ಸಮುದಾಯ ಶೌಚಗೃಹದ ಅಂತಿಮ ಸಮೀಕ್ಷೆ ನಡೆಸಿ, ಅವುಗಳ ಕಾರ್ಯನಿರ್ವಹಣೆ, ಸುಂದರಗೊಳಿಸಲು ಬಿಡಿಸಿರುವ ಚಿತ್ರಕಲೆ, ಗೋಡೆ ಬರಹಗಳ ಕುರಿತು ಮೌಲ್ಯಮಾಪನ ನಡೆಸಿ, ಪುರಸ್ಕಾರ/ಪ್ರಶಂಸನಾ ಪತ್ರ ನೀಡಲಾಗುವುದು ಎಂದು ಹೇಳಿದರು.
ಈ ಅಭಿಯಾನದಲ್ಲಿ ಜಿಲ್ಲೆಯಲ್ಲಿರುವ ಕೈಗಾರಿಕೆ, ಶಿಕ್ಷಣ ಸಂಸ್ಥೆ, ಅಂಗನವಾಡಿ, ಪ್ರಾಥಮಿಕ/ಸಮುದಾಯ ಆರೋಗ್ಯ ಕೇಂದ್ರ, ಸ್ವಯಂ ಸೇವಾ ಸಂಸ್ಥೆಗಳಲ್ಲಿರುವ ಶೌಚಗೃಹ ಬಳಸಲು ಪ್ರೇರೇಪಿಸುವುದು. ನಿರುಪಯುಕ್ತ/ ದುರಸ್ಥಿ ಶೌಚಗೃಹ ಗುರುತಿಸಿ ನವೀಕರಣಗೊಳಿಸಿ ಕಡ್ಡಾಯವಾಗಿ ಬಳಸಿ, ಶುಚಿತ್ವ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.