

ಮಂಗಳೂರು : ದ.ಕ.ಜಿಲ್ಲೆಯ 352 ಗ್ರಾಮ, 1779 ಪ್ರೌಢ ಹಾಗೂ ಪ್ರಾಥಮಿಕ ಶಾಲೆ, 102 ಪಿ.ಯು ಕಾಲೇಜು ಹಾಗೂ 73 ಪದವಿ ಕಾಲೇಜುಗಳಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನ ಯಶಸ್ವಿಯಾಗಿ ನಡೆದಿದೆ.
ಜಿಲ್ಲೆಯಾದ್ಯಂತ ಸೆ.15ರಿಂದ ಅ.2ರವರೆಗೆ ಅಭಿಯಾನ ನಡೆದಿದ್ದು 43 ಲಕ್ಷ ಮಂದಿ ಭಾಗವಹಿಸಿದ್ದಾರೆ. 9 ತಾಲೂಕಿನ ಒಂದು ಕೇಂದ್ರ ಗ್ರಾಮ ಪಂಚಾಯಿತಿ ಆಯ್ದುಕೊಂಡು ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ಅವಧಿಯಲ್ಲಿ ರೈಲ್ವೆ ನಿಲ್ದಾಣ, ರಸ್ತೆಯ ಇಕ್ಕೆಲಗಳು, ಶಾಲಾ ಸುತ್ತ ಮುತ್ತ, ಇತಿಹಾಸಿಕ ದೇವಾಲಯ, ಪ್ರವಾಸೋದ್ಯಮ ತಾಣ, ಬೀಚ್ ಸ್ವಚ್ಛತೆ, ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮ ನಡೆದಿದೆ.
ರೈಲು ಹಳಿಗಳ ಸ್ವಚ್ಛತೆ, ಪ್ರಮುಖ ನಿಲ್ದಾಣಗಳಿಗೆ ತೆರಳುವ ಮಾರ್ಗಗಳು, ಮನೆ ಮನೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆಗೆ ವಿಶೇಷ ಅದ್ಯತೆ ನೀಡಲಾಗಿದೆ. ಸ್ವಚ್ಛ ಸಂವಾದ, ಸ್ವಚ್ಛ ಪರಿಸರ, ಸ್ವಚ್ಛ ಗ್ರಾಮ, ಸ್ವಚ್ಛ ಪರಿಸರ, ಸ್ವಚ್ಛ ಆಹಾರ್ ಮತ್ತು ಸ್ವಚ್ಛ ಪ್ರವಾಸಿ ತಾಣ
ಕಾರ್ಯಕ್ರಮದಲ್ಲಿ ಜನರು ಉತ್ಸಾಹದಿಂದ ಭಾಗವಹಿಸಿದ್ದಾರೆ.
* ಘನತ್ಯಾಜ್ಯ ನಿರ್ವಹಣೆ
ಈ ಅವಧಿಯಲ್ಲಿ ಸುಳ್ಯ, ಬಂಟ್ವಾಳ, ಕಡಬ, ಪುತ್ತೂರು ಮತ್ತು ಉಳ್ಳಾಲ ತಾಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಅಧ್ಯಯನ ಪ್ರವಾಸವನ್ನು ಮಂಗಳೂರು ತಾಲೂಕು ತೆಂಕ ಎಡಪದವು ಗ್ರಾಮ
ಪಂಚಾಯತ್ ನಲ್ಲಿ ಕಾರ್ಯಾಚರಣೆಯಲ್ಲಿರುವ ಸಮಗ್ರ ಘನತ್ಯಾಜ್ಯ ನಿರ್ವಹಣಾ ಘಟಕ)ಕ್ಕೆ ಏರ್ಪಡಿಸಲಾಗಿತ್ತು. ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಕುರಿತು ಜಾಗೃತಿ ಮೂಡಿಸಲಾಯಿತು. ವಿವಿಧ ಗ್ರಾಮ ಪಂಚಾಯತ್ ಗಳು ಕರಪತ್ರ ಸೇರಿದಂತೆ ಮಾಹಿತಿ ಫಲಕಗಳನ್ನು ಅಳವಡಿಸಿದವು. ಸ್ವಚ್ಛ ವಾಹಿನಿಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಅಡಿಯೋಗಳನ್ನು ಪ್ರಚಾರ ಮಾಡಲಾಯಿತು.
*ಏಕ ಬಳಕೆ ಪ್ಲಾಸ್ಟಿಕ್ ನಿಷೇಧ
ರಾಜ್ಯ ಮಾಲಿನ್ಯ ಆಯೋಗದ ಸುತ್ತೋಲೆಯಂತೆ ಧರ್ಮಸ್ಥಳ ಗ್ರಾಮ/ನಗರ ವನ್ನು ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಘೋಷಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆ ಹಾಗೂ ಸಾರ್ವಜನಿಕರೊಂದಿಗೆ ಸಭೆಗಳನ್ನು ನಡೆಸಲಾಗಿತ್ತು. ಅ.2 ರಂದು ರಾಜ್ಯ ಸಭಾ ಸದಸ್ಯ
ಡಾ. ಡಿ.ವೀರೇಂದ್ರ ಹೆಗಡೆ ಅವರು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮ/ನಗರವೆಂದು ಘೋಷಿಸಿದರು.
*ಗಾಂಧಿ ಜಯಂತಿ ಕಾರ್ಯಕ್ರಮ
ಕೇಂದ್ರ ಸರ್ಕಾರದ ಸುತ್ತೋಲೆಯಂತೆ ಸ್ವಚ್ಛತಾ ಹಿ ಸೇವೆ ಯ ಪ್ರಯುಕ್ತ ಗಾಂಧಿ ಜಯಂತಿಯಂದು ಗ್ರಾಮ ಪಂಚಾಯಿತಿ
ವ್ಯಾಪ್ತಿಯಲ್ಲಿ 492 ಸ್ವಚ್ಛತಾ ಶ್ರಮದಾನ, ಜಾಗೃತಿ ಕಾರ್ಯಕ್ರಮಗಳು ನಡೆದವು. ಏಕಕಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ಶಾಲೆ, ಕಾಲೇಜು ಸೇರಿದಂತೆ ಸಂಸದರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಭಾಗಿಯಾದರು ಎಂದು ಪ್ರಕಟಣೆ ತಿಳಿಸಿದೆ.