ಸ್ವಚ್ಛತೆಯಿಂದ ಬದುಕಿಗೆ ಸಂಸ್ಕಾರ : ಸಂಸದ ಕ್ಯಾ.ಬೃಜೇಶ್ ಚೌಟ ಅಭಿಪ್ರಾಯ

mng-17sep-clean
Published on


ಮಂಗಳೂರು : ಸ್ವಚ್ಛತೆಯು ಕೇವಲ ತೋರಿಕೆಗೆ ಸೀಮಿತವಾಗದೆ ನಮ್ಮ ಬದುಕಿನಲ್ಲಿ ಸ್ವಭಾವ ಮತ್ತು ಸಂಸ್ಕಾರ ಆದರೆ ಮಾತ್ರ ಸಮಾಜವನ್ನು ಶುಚಿಯಾಗಿಟ್ಟುಕೊಳ್ಳಬಹುದು ಎಂದು ಸಂಸದ ಕ್ಯಾ. ಬೃಜೇಶ್ ಚೌಟ ಹೇಳಿದರು.
ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ. ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಗರದ ತೋಟ ಬೆಂಗ್ರೆಯಲ್ಲಿ ಮಂಗಳವಾರ ನಡೆದ ಬೃಹತ್ ಸ್ವಚ್ಛತಾ ಅಭಿಯಾನ ಸ್ವಚ್ಛತೆಯೇ ಸೇವೆ -2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಚ್ಛತೆಯನ್ನು ಪಾಲಿಸಲು ಅಭಿಯಾನ ನಡೆಸಬೇಕಾಗಿರುವುದು ವಿಷಾದಕರವಾಗಿದೆ. ಸ್ವಚ್ಛತೆ ನಮ್ಮ ದೈನಂದಿನ ಭಾಗವಾಗಿರಬೇಕೆ ಹೊರತು ಅಭಿಯಾನ ರೂಪದಲ್ಲಿ ನಡೆಸುವಂತದ್ದಲ್ಲ. ವೈಯಕ್ತಿಕವಾಗಿ ಸ್ವಚ್ಛತೆ ಕಾಪಾಡುವ ನಾಗರಿಕರು ಸಮಾಜಮುಖಿಯಾಗಿ ಚಿಂತಿಸದಿರುವುದು ದುರಂತವಾಗಿದೆ ಎಂದು ಅವರು ಹೇಳಿದರು.
ಸೆ.17ರಿಂದ ಅ.2ರವರೆಗೆ ನಡೆಯುವ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಸಾರ್ವಜನಿಕರು, ಸಂಘಸಂಸ್ಥೆಗಳು ಪರಿಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದು ಸಂಸದ ಕ್ಯಾ.ಚೌಟ ವಿನಂತಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ. ಎಲ್. ಆನಂದ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರೋಶನ್ ನಾಣಯ್ಯ, ಹಿರಿಯ ಪರಿಸರ ಅಧಿಕಾರಿ ಲಕ್ಷ್ಮೀಕಾಂತ್, ಸುರತ್ಕಲ್ ವಲಯ ಆಯುಕ್ತೆ ವಾಣಿ, ಬೆಂಗರೆ ಮಹಾಜನ ಸಭಾ ಅಧ್ಯಕ್ಷ ಚೇತನ್ ಬೆಂಗ್ರೆ ಉಪಸ್ಥಿತರಿದ್ದರು.
ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಗಿರೀಶ್ ನಂದನ್ ಸ್ವಚ್ಛತೆಯ ಪ್ರತಿಜ್ಞೆ ಬೋಧಿಸಿದರು. ಇದೇ ಸಂದರ್ಭ ಮೂವರು ಸ್ವಚ್ಛತಾ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಜಿಪಂ ಉಪ ಕಾರ್ಯದರ್ಶಿ ಜ್ಞಾನೇಶ್ ಸ್ವಾಗತಿಸಿದರು, ನಾಗರಾಜ್ ಬಜಾಲ್ ವಂದಿಸಿದರು.
ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net