

ಕೊಪ್ಪಳ: ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ.ಇದರಿಂದ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ ಎಂದು ಉಪ ಪ್ರಾಚಾರ್ಯ ಡಾ.ಕರಿಬಸವೇಶ್ವರ ಹೇಳಿದರು.
ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದಡಿಯಲ್ಲಿ ಸ್ವಭಾವ ಸ್ವಚ್ಛತೆ- ಸಂಸ್ಕಾರ ಸಚ್ಛತೆ ಘೋಷ ವಾಕ್ಯದಡಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ದೆಶಿಸಿ ಮಾತನಾಡಿದರು.
ಪ್ರತಿಯೊಬ್ಬರು ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಜಾಗೃತಿ ಎಲ್ಲರಲ್ಲೂ ಬೆಳೆದಾಗ ನಗರ ಸ್ವಚ್ಛವಾಗುತ್ತದೆ. ಈ ಮೂಲಕ ಇಡೀ ನಮ್ಮ ಉರು, ನಗರ ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ತಾವು ಬಳಸುವ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ತಮ್ಮ ಮನೆ, ಶಾಲೆಯ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು.
ಇದು ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗಿರದೇ ಇದನ್ನು ದಿನನಿತ್ಯ ಹಾಗೂ ನಿರಂತರವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ನಂತರ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಮಹತ್ವ ಸಾರುವ ಪತಿಜ್ಞಾವಿಧಿಯನ್ನು ಬೋಧಿಸಿದರು.ಬಳಿಕ ವಿದ್ಯಾರ್ಥಿಗಳು ಮಹಾವಿದ್ಯಾಲಯದ ಆವರಣ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ರಾ.ಸೇ.ಯೋಜನಾಧಿಕಾರಿ ಡಾ.ನಾಗರಾಜ ದಂಡೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಉಪನ್ಯಾಸಕ ಸೋಮಶೇಕರ್ ಜಿ. ಸ್ವಾಗತಿಸಿದರು, ಸ್ವಯಂಸೇವಕ ಮುತ್ತಣ್ಣ ವಂದಿಸಿದರು.