

9,500 ರಿಂದ 12,500ಕ್ಕೆ ಏರಿಕೆ
ಸ್ವಚ್ಛತಾ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ
ಸದೇಶ್ ಕಾರ್ಮಾಡ್ ಮೈಸೂರು
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣೆಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜುಗೊಳ್ಳುತ್ತಿರುವ ಹೊತ್ತಿನಲ್ಲಿ ಇದೀಗ ಹೊಸದಾಗಿ ಸರ್ವೇಕ್ಷಣೆಯ ಅಂಕಗಳನ್ನು ಪರಿಷ್ಕರಣೆ ಮಾಡಲಾಗಿದ್ದು, ಅಂಕಗಳನ್ನು 9,500 ನಿಂದ 12,500 ಕ್ಕೆ ಏರಿಸಲಾಗಿದೆ.
ಈ ಬಾರಿ ರೆಡ್ಯೂಸ್ (ಕಡಿಮೆ ಮಾಡು), ರೀಯೂಸ್ (ಮರುಬಳಕೆ) ಮತ್ತು ರೀಸೈಕಲ್ (ಪುನರ್ಬಳಕೆ) ಥೀಮ್‌ನಡಿ ಸ್ವಚ್ಛ ಸರ್ವೇಕ್ಷಣೆ ನಡೆಯುತ್ತಿದೆ. ಕಳೆದ ಬಾರಿ ಸ್ವಚ್ಛ ಸರ್ವೇಕ್ಷಣೆಯು ‘ವೇಸ್ಟ್ ಟು ವೆಲ್ತ್’ ಪರಿಕಲ್ಪನೆಯಲ್ಲಿ ನಡೆದಿತ್ತು. ಪ್ರತಿನಿತ್ಯ ಸಂಗ್ರಹವಾಗುವ ತ್ಯಾಜ್ಯವನ್ನು ರೆಡ್ಯೂಸ್, ರೀಯೂಸ್ ಹಾಗೂ ರೀಸೈಕಲ್ ಮಾಡಿದರೆ ಪರಿಸರ ಮಾಲಿನ್ಯದ ಪ್ರಮಾಣ ತಗ್ಗಿಸಬಹುದು ಎಂಬುದು ಈ ಬಾರಿಯ ಪರಿಕಲ್ಪನೆಯಾಗಿದೆ.
ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಗೆ ಪ್ರಥಮ ಬಾರಿಗೆ ಬಿಡುಗಡೆಯಾದ ಟೂಲ್ ಕಿಟ್‌ನಲ್ಲಿ ಒಟ್ಟು 9,500 ಅಂಕಗಳನ್ನು ನಿಗದಿ ಪಡಿಸಲಾಗಿತ್ತು (ಸರ್ವಿಸ್ ಲೆವಲ್ ಪ್ರೋಗ್ರೆಸ್‌ಗೆ 5,705 ಅಂಕಗಳು, ಸರ್ಟಿಫಿಕೇಷನ್‌ಗೆ 2,500 ಅಂಕಗಳು, ಸಿಟಿಜನ್ ವಾಯ್ಸಗೆ 1,295 ಅಂಕಗಳು). ಆದರೆ, ಇದೀಗ ಈ ಅಂಕಗಳನ್ನು ಪರಿಷ್ಕರಣೆ ಮಾಡಿ 12,500ಕ್ಕೆ ಏರಿಸಲಾಗಿದ್ದು, ಪರಿಷ್ಕೃತ ಅಂಕಗಳಿಗೆ ಪೂರಕವಾಗಿ ಸವೇಕ್ಷಣೆಗೆ ನಗರ ಸಜ್ಜಾಗಬೇಕಾಗಿದೆ.
2023 ಹಾಗೂ ಅದಕ್ಕಿಂತ ಹಿಂದೆ ನಡೆದ ಸರ್ವೇಕ್ಷಣೆಯಲ್ಲಿ ಸಿಟಿಜನ್ ಫೀಡ್‌ಬ್ಯಾಕ್‌ಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು. ಕಳೆದ ಬಾರಿ ಈ ವಿಭಾಗಕ್ಕೆ 2,250 ಅಂಕಗಳನ್ನು ನೀಡಲಾಗಿತ್ತು. ಸ್ವಚ್ಛ ಸರ್ವೇಕ್ಷಣೆಯಲ್ಲಿ ಜನರ ಸಹಭಾಗಿತ್ವ ಹೆಚ್ಚಾಗಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು. ಆದರೆ, ಈ ಬಾರಿ ಈ ವಿಭಾಗಕ್ಕೆ ನಿಗದಿ ಪಡಿಸಿರುವುದು 500 ಅಂಕಗಳು ಮಾತ್ರ. ಈ ಬಾರಿ ಜನರ ಅಭಿಪ್ರಾಯಕ್ಕಿಂತ ಪ್ರತಿಯೊಂದು ನಗರಗಳು ಸ್ವಚ್ಛತೆಯಲ್ಲಿ ತೋರಿರುವ ಸಾಧನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿಯಾಗಿದೆ.
12,500 ಅಂಕಗಳ ಹಂಚಿಕೆ: 1 ರಿಂದ 4 ಹಂತಗಳಿಗೆ ಒಟ್ಟು 10,000 ಅಂಕಗಳನ್ನು ಹಂಚಿಕೆ ಮಾಡಲಾಗಿದೆ. ಉಳಿದ 2,500 ಅಂಕಗಳ ಪೈಕಿ ಒಡಿಎಫ್, ಒಡಿಎಫ್ +, ಒಡಿಎಫ್++, ವಾಟರ್+ಗೆ 1,200 ಅಂಕಗಳು, ತ್ಯಾಜ್ಯ ಮುಕ್ತ ನಗರಕ್ಕೆ 1,300 ಅಂಕಗಳನ್ನು ಹಂಚಿಕೆ ಮಾಡಲಾಗಿದೆ.
1 ರಿಂದ 4ರವರೆಗಿನ ಹಂತಗಳಲ್ಲಿ ಬರುವ 10,000 ಅಂಕಗಳನ್ನು 10 ವಿಭಾಗಗಳಿಗೆ ಹಂಚಿಕೆ ಮಾಡಲಾಗಿದೆ. ವಿಜಿಬಲ್ ಕ್ಲೀನ್ಲಿನೆಸ್ (ಬಡಾವಣೆ, ವಾಣಿಜ್ಯ ಪ್ರದೇಶಗಳನ್ನು ದಿನನಿತ್ಯ ಶುಚಿಗೊಳಿಸುವುದು ಹಾಗೂ ಇತ್ಯಾದಿ)ಗೆ 1,500 ಅಂಕಗಳು, ತ್ಯಾಜ್ಯದ ವಿಂಗಡಣೆ, ಸಂಗ್ರಹಣೆ ಹಾಗೂ ಸಾಗಾಟಕ್ಕೆ 1,000, ಘನತ್ಯಾಜ್ಯ ನಿರ್ವಹಣೆಗೆ 1,500, ಆ್ಯಕ್ಸಸಸ್ ಟು ಸ್ಯಾನಿಟೇಷನ್ (ಶೌಚಗೃಹಗಳ ಉತ್ತಮ ನಿರ್ವಹಣೆ)ಗೆ 1,000, ಮಲಿನ ನೀರಿನ ನಿರ್ವಹಣೆಗೆ 1,000, ತ್ಯಾಜ್ಯ ವಿಲೇವಾರಿ ಸೇವೆಗಳ ಯಾಂತ್ರೀಕರಣಕ್ಕೆ 500, ಅಡ್ವೋಕೆಸಿ ಆಫ್ ಸ್ವಚ್ಛತಾ (ಸ್ವಚ್ಛತಾ ಆ್ಯಪ್ ಬಳಕೆ, ಸ್ವಚ್ಛತೆ ಕುರಿತು ಜನಜಾಗೃತಿ ಹಾಗೂ ಇತ್ಯಾದಿ)ಗೆ 1,500, ಇಕೋ ಸಿಸ್ಟಮ್ ಸ್ಟ್ರೆಂಥನಿಂಗ್ ಆ್ಯಂಡ್ ಇನ್‌ಸ್ಟಿಟ್ಯೂಷನಲ್ ಪ್ಯಾರಾಮೀಟರ್ಸ್ (ಅನೈರ್ಮಲ್ಯ ಸೃಷ್ಟಿಸುವವರಿಗೆ ದಂಡ ವಿಧಿಸುವುದು, ಸ್ವಚ್ಛ ವಾರ್ಡ್ ರ‌್ಯಾಂಕಿಂಗ್)ಗೆ 1,000, ನೈರ್ಮಲ್ಯ ಕಾರ್ಮಿಕರ ಕಲ್ಯಾಣಕ್ಕೆ 5,00, ಸಿಟಿಜನ್ ಫೀಡ್‌ಬ್ಯಾಕ್‌ಗೆ 500 ಅಂಕಗಳನ್ನು ಹಂಚಿಕೆ ಮಾಡಲಾಗಿದೆ.
ಸ್ವಚ್ಛತೆಯಲ್ಲಿ ಮೈಸೂರು ನಗರದ ಸಾಧನೆ: 2015, 2016ರಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊ ಂಡಿತ್ತು. 2017ರಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 2018ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ದೇಶ ದ ನಂ.1 ಸ್ವಚ್ಛ ನಗರಿ ಪಟ್ಟ ಪಡೆದರೂ ಸಮಗ್ರ ವಿಭಾಗದಲ್ಲಿ 8ನೇ ಸ್ಥಾನಕ್ಕೆ ಕುಸಿತ ಕಂಡಿತು. 2019ರಲ್ಲಿ ಸಮಗ್ರ ವಿಭಾಗದಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. 2020ರಲ್ಲಿ ಸಮಗ್ರ ವಿಭಾಗದಲ್ಲಿ 5ನೇ ಸ್ಥಾನ ಪಡೆಯಿತು. 2020ರಲ್ಲಿ ಪ್ರಥಮ ಬಾರಿಗೆ ರ‌್ಯಾಂಕಿಂಗ್ ಹಾಗೂ ಸ್ವಚ್ಛ ನಗರಿಗೆ ಪ್ರತ್ಯೇಕ ಪ್ರಶಸ್ತಿ ನೀಡಲಾಯಿತು. ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ಮೈಸೂರು ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಪಡೆದರೆ ಅದೇ ವಿಭಾಗದ ರ‌್ಯಾಂಕಿಂಗ್‌ನಲ್ಲಿ 2ನೇ ಸ್ಥಾನ ಪಡೆಯಿತು. 2021ರಲ್ಲಿ ಮೈಸೂರು ಸ್ವಚ್ಛತೆಯ ಸಮಗ್ರ ವಿಭಾಗದಲ್ಲಿ 11ನೇ ಸ್ಥಾನಕ್ಕೆ, ಮಧ್ಯಮ ನಗರ ವಿಭಾಗದಲ್ಲಿ 7ನೇ ಸ್ಥಾನಕ್ಕೆ ಕುಸಿಯಿತು. 1 ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರಗಳ ಸ್ವಚ್ಛತೆಯ ವಿಭಾಗದಲ್ಲಿ ಮೈಸೂರು ದೇಶದ ನಂ.1 ‘ಸ್ವಯಂ ಸುಸ್ಥಿರ ನಗರ’ (ಸೆಲ್ಫ್ ಸಸ್ಟೈನಬಲ್ ಸಿಟಿ) ಪ್ರಶಸ್ತಿ, ಸಫಾಯಿ ಮಿತ್ರ ಸುರಕ್ಷಾ ಪ್ರಶಸ್ತಿಯಲ್ಲಿ 5ನೇ ರ‌್ಯಾಂಕ್ ಪಡೆದುಕೊಂಡಿತು. ಪೌರಕಾರ್ಮಿಕರ ಸಮವಸ್ತ್ರ ವಿನ್ಯಾಸ ಪ್ರಶಸ್ತಿ ಪಡೆದುಕೊಂಡಿತ್ತು.
2022ರಲ್ಲಿ ಸಮಗ್ರ ವಿಭಾಗದಲ್ಲಿ ಮೈಸೂರು 8ನೇ ಸ್ಥಾನ ಪಡೆದುಕೊಂಡಿದೆ. 3 ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರಗಳಲ್ಲಿ (ಮಧ್ಯಮ ನಗರ) ದೇಶದ ನಂ.1 ಸ್ವಚ್ಛ ನಗರ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿತ್ತು. 1 ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರದಲ್ಲಿ 2ನೇ ರ‌್ಯಾಂಕ್ ಪಡೆದುಕೊಂಡಿತ್ತು. 2023ರಲ್ಲಿ ಸಮಗ್ರ ವಿಭಾಗದಲ್ಲಿ 27ನೇ ಸ್ಥಾನಕ್ಕೆ ಕುಸಿಯಿತು. ನಗರವು 2019 ರಿಂದ ನಿರಂತರವಾಗಿ ಫೈವ್‌ಸ್ಟಾರ್ ರ‌್ಯಾಂಕಿಂಗ್‌ನೊಂದಿಗೆ ತ್ಯಾಜ್ಯ ಮುಕ್ತ ನಗರಿ, ಬಯಲು ಶೌಚಮುಕ್ತ ನಗರ ಪ್ರಶಸ್ತಿ ನಗರ ಪ್ರಶಸ್ತಿಯನ್ನು ಪಡೆಯುತ್ತಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೀಡಿರುವ ಟೂಲ್‌ಕಿಟ್‌ಗೆ ಅನುಸಾರವಾಗಿ ನಗರದಲ್ಲಿ ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಗೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದೀಗ ಹೊಸದಾಗಿ ಪರಿಷ್ಕರಣೆ ಮಾಡಲಾಗಿದ್ದು, ಈ ಕುರಿತು ಪಾಲಿಕೆ ಅಧಿಕಾರಿಗಳು ಹಾಗೂ ಸ್ವಚ್ಛತಾ ಸಿಬ್ಬಂದಿಗೆ ಮಾಹಿತಿ ನೀಡಿ ಸ್ವಚ್ಛ ಸರ್ವೇಕ್ಷಣೆಗೆ ಸಜ್ಜುಗೊಳಿಸಲಾಗುತ್ತಿದೆ
ಡಾ.ವೆಂಕಟೇಶ್, ಆರೋಗ್ಯಾಧಿಕಾರಿ, ನಗರ ಪಾಲಿಕೆ