

ಬೆಂಗಳೂರು/ದಾಬಸ್‌ಪೇಟೆ: ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತೆ ಕಡೆಗೆ ಗಮನ ನೀಡಬೇಕು, ಆರೋಗ್ಯ ರಕ್ಷಣೆ ಜಾಗದಲ್ಲೇ ಸ್ವಚ್ಛತೆ ಇಲ್ಲದಿದ್ದರೆ ಹೇಗೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಖ್ಯಕಾರ್ಯನಿರ್ವಹಣಾಧಿಕಾರಿ (ಸಿಇಒ) ಎನ್.ಎಂ.ನಾಗರಾಜ್ ಹೇಳಿದರು.
ಮಂಗಳವಾರ ನೆಲಮಂಗಲ ತಾಲೂಕಿನ ಹಲವು ಕಡೆಗಳಿಗೆ ಅಧಿಕಾರಿಗಳೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಸೋಂಪುರದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಿಗೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ದಾಬಸ್‌ಪೇಟೆ ಸರ್ಕಲ್ನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನೆಲಮಂಗಲ ತಾಲೂಕಿನ ಕರಿಮಣ್ಣೆ, ತಟ್ಟಿಕೆರೆ, ಸೋಂಪುರದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಾಬಸ್‌ಪೇಟೆ ಕೈಗಾರಿಕಾ ಪ್ರದೇಶವಾದ್ದರಿಂದ ಇಲ್ಲಿ ಅಪಘಾತಗಳು ಸಾಮಾನ್ಯವಾಗಿದೆ. ಅಪಘಾತದ ವ್ಯಕ್ತಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ವೈದ್ಯರಿಲ್ಲ. ಖಾಯಂ ವೈದ್ಯರೂ ಇಲ್ಲ. ನಾಯಿ ಕಡಿತಕ್ಕೆ ಚುಚ್ಚುಮದ್ದೂ ಇಲ್ಲ. ಇಲ್ಲಿನ ಸಿಬ್ಬಂದಿಗೆ ಸಮರ್ಪಕವಾಗಿ ವೇತನ ದೊರಕುತ್ತಿಲ್ಲ ಎಂದು ಜಿಪಂ ಸದಸ್ಯ ನಂಜುಂಡಯ್ಯ ಗಮನ ಸೆಳೆದರು. ದಾಬಸ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಿಸಲಾಗಿದೆ, ನಾಯಿ ಕಡಿತಕ್ಕೆ ಔಷಧಿಯೂ ಲಭ್ಯವಿದೆ. ಸಿಬ್ಬಂದಿಗೆ ಜನವರಿ ತಿಂಗಳವರೆಗೆ ವೇತನ ಪಾವತಿಯಾಗಿದೆ ಎಂದುಜಿಲ್ಲಾ ಅರೋಗ್ಯಾಧಿಕಾರಿ ಮಂಜುಳಾದೇವಿ ಪ್ರತಿಕ್ರಿಯಿಸಿದರು.
ಬಸ್‌ನಿಲ್ದಾಣದಲ್ಲಿ ಸಾರ್ವಜನಿಕ ಶೌಚಗೃಹವಿಲ್ಲ. ಶಿವಗಂಗೆ ವೃತ್ತ ಹಾಗೂ ಅಗಳಕುಪ್ಪೆ ರಸ್ತೆಯ ಸೇತುವೆ ಕೆಳಭಾಗದಲ್ಲಿ ಸ್ವಚ್ಛತೆ ಇಲ್ಲ ಎಂದು ಹೊನ್ನೆನಹಳ್ಳಿ ಗ್ರಾಮದ ಎಚ್.ಕೆ.ರವೀಶ್ ಎಂಬುವರು ಆರೋಪಿಸಿದರು. ಶೌಚಗೃಹ ನಿರ್ಮಾಣದ ಬಗ್ಗೆ ತಹಸೀಲ್ದಾರ್ ಜತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು, ಮೇಲ್ಸೇತುವೆ ಕೆಳಭಾಗದಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಲಾಗುವುದು ಎಂದು ಸಿಇಒ ಎನ್.ಎಂ.ನಾಗರಾಜ್ ಭರವಸೆ ನೀಡಿದರು. ಬೆಸ್ಕಾಂ ಹಾಗೂ ಬಿಎಸ್ಸೆನ್ನೆಲ್ ವೈರ್‌ಗಳಿಂದಾಗಿ ಚರಂಡಿಯಲ್ಲಿ ನೀರು ಹರಿಯದೆ ತೊಂದರೆಯಾಗಿದೆ. ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಟೋಲ್ ಸಿಬ್ಬಂದಿಯ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು ಎಂದರು.
ತಾಪಂ ಇಒ ಲಕ್ಷ್ಮೀನಾರಾಯಣ್, ಬಿಇಒ ಕೆ.ರಮೇಶ್, ಸೋಂಪುರ ಗ್ರಾಪಂ ಅಧ್ಯಕ್ಷೆ ಜಿ.ಲಕ್ಷೀದೇವಿ ಪಿಡಿಒ ಎಸ್.ವಿ.ರವೀಂದ್ರ, ಟಿಎಚ್‌ಒಎನ್ ಹರೀಶ್, ಆಸ್ಪತ್ರೆ ಆಡಳಿತಾಧಿಕಾರಿ ಎಂ.ಆರ್.ಶಶಿಕುಮಾರ್, ಕಾರ್ಯದರ್ಶಿ ಎಚ್. ಹನುಮಂತರಾಜು, ಗ್ರಾಪಂ ಸದಸ್ಯ ಡಿ.ಎಸ್ ಶ್ರೀನಿವಾಸ ಮೂರ್ತಿ, ಸಿಆರ್‌ಪಿಸಿ ಪವಿತ್ರಾ ಮತ್ತಿತರರು ಇದ್ದರು.