ಸ್ವಚ್ಛ ಗ್ರಾಮ ಸಂಕಲ್ಪಕ್ಕೆ ಆನೆಬಲ, ಜಾಗೃತಿಗೆ ಸಾಲು ಫಲಕ

harekala
Published on

ಅನ್ಸಾರ್ ಇನೋಳಿ ಉಳ್ಳಾಲ
ಗ್ರಾಮಸ್ಥರ ಅಭೂತಪೂರ್ವ ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಹರೇಕಳ ಪಂಚಾಯಿತಿಯ ಹಿಂದಿನ ಆಡಳಿತ ಮುನ್ನುಡಿ ಬರೆದಿದ್ದು ಅದನ್ನು ಮುನ್ನೆಲೆಗೆ ತರುವ ಜವಾಬ್ದಾರಿ ಹೊಸ ಆಡಳಿತದ ಮುಂದಿದೆ. ಈ ಸವಾಲನ್ನು ಎದುರಿಸುವ ಜವಾಬ್ದಾರಿ ಹೊಸ ಆಡಳಿತ ಪಡೆದುಕೊಂಡಿದೆ.
ಹಿಂದೆ ಹರೇಕಳ ಗ್ರಾಮ ಪಂಚಾಯಿತಿ ಎಂದರೆ ಗ್ರಾಮದ ಮೂಲೆಯಲ್ಲಿ ಕೋಳಿಗೂಡಿನಂಥ ಪಂಚಾಯಿತಿ ಕಟ್ಟಡ, ಭ್ರಷ್ಟಾಚಾರ, ಪ್ರತಿ ಗ್ರಾಮಸಭೆಯಲ್ಲೂ ಅಬ್ಬರಿರ, ಗ್ರಾಮಸಭೆಗಳೇ ರದ್ದು ಇಂಥದ್ದೆಲ್ಲ ಸಾಮಾನ್ಯವಾಗಿರುತ್ತಿತ್ತು. ಇದರಿಂದಾಗಿ ಕೆಲವು ಗ್ರಾಮಸಭೆಗಳೇ ನಡೆಯದ ಪ್ರಮೇಯವೂ ಇತ್ತು. ಇಂಥ ಪ್ರಕರಣದಿಂದ ಹರೇಕಳ ಗ್ರಾಮ ಅಭಿವೃದ್ಧಿಯಿಂದ ದೂರವೇ ಉಳಿದಿತ್ತು.

ಆದರೆ ಪ್ರಸ್ತುತ ದಿನಗಳಲ್ಲಿ ಎಲ್ಲ ಆರೋಪಗಳಿಂದ ಪಂಚಾಯಿತಿ ಹೊರಬಂದು ಎರಡೂವರೆ ವರ್ಷಗಳಲ್ಲಿ ಉತ್ತಮ ಆಡಳಿತ ನೀಡಿದೆ. ವಾರ್ಷಿಕ ಆದಾಯ ಕೇವಲ 15 ಲಕ್ಷ ರೂ. ಇದ್ದರೂ ಎರಡೂವರೆ ವರ್ಷಗಳಲ್ಲಿ ಗ್ರಾಮ ಅಭಿವೃದ್ಧಿಯಿಂದ ರಾಜ್ಯಮಟ್ಟದ ಗಮನ ಸೆಳೆದಿದೆ. ಜನರಿಗೆ ಕಾಣುವ ಸ್ಥಳದಲ್ಲಿ 1.50 ಕೋಟಿ ರೂ. ವೆಚ್ಚದ ವಿದಾನಸೌಧ ಮಾದರಿಯ ಸುಸಜ್ಜಿತ ಪಂಚಾಯಿತಿ ಕಟ್ಟಡ ನಿರ್ಮಾಣಗೊಂಡಿದೆ. ಯಾವುದೇ ಗ್ರಾಮದಲ್ಲೂ ಇಲ್ಲದ ಆರೋಗ್ಯ ಆಸ್ಪತ್ರೆ ನಿರ್ಮಾಣಗೊಂಡು ಕಾರ್ಯಾಚರಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ ನೇರ ಸಂಪರ್ಕ ಕಲ್ಪಿಸುವ ಅಣೆಕಟ್ಟು ಮತ್ತು ಸೇತುವೆ ನಿರ್ಮಾಣಗೊಂಡಿದೆ. ಸ್ವಚ್ಛ ಸಂಕೀರ್ಣ ನಿರ್ಮಾಣವಾಗಿದೆ. ಪಂಚಾಯಿತಿ ಕಟ್ಟಡ, ಆಸ್ಪತ್ರೆ ನಿರ್ಮಾಣದಲ್ಲಿ ಮೇಲುಗೈ ಸಾಧಿಸಿದೆ. ಗ್ರಾಮ ಪಂಚಾಯಿತಿ ಆಡಳಿತದ ಮೇಲಿದ್ದ ‘ಭ್ರಷ್ಟ’ ಪದವನ್ನು ತೊಡೆದು ಹಾಕಲಾಗಿದೆ.

ನೂತನ ಆಡಳಿತಕ್ಕೆ ಸವಾಲು
ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಹಿಂದಿನ ಅವಧಿಯಲ್ಲಿ ಸ್ವಚ್ಛ ಸಂಕೀರ್ಣ ನಿರ್ಮಿಸಲಾಗಿದೆ. ಸಂಗ್ರಹಿಸಲಾದ ಕಸ ಸಾಗಾಟಕ್ಕೆ ವಾಹನವೂ ಬಂದಿದೆ. ಪ್ರತಿ ಮನೆಗೂ ಒಣಕಸಕ್ಕೆ ಬೋರೋ ಬ್ಯಾಗ್, ಹಸಿಕಸ ಸಂಗ್ರಹಕ್ಕೆ ಬಕೆಟ್ ವಿತರಿಸಲಾಗಿದೆ. ಗ್ರಾಮದಾದ್ಯಂತ ಸೂಚನಾ ಫಲಕ ಅಳವಡಿಸಲಾಗಿದೆ. ಪ್ರತಿಯೊಂದು ಸೂಚನಾ ಫಲಕ 1500 ರೂ. ತೂಗಿದ್ದು, 1.60 ಲಕ್ಷ ರೂ. ಮೌಲ್ಯದ 100ಕ್ಕೂ ಅಧಿಕ ಫಲಕಗಳನ್ನು ಅಳವಡಿಸಲಾಗಿದೆ. ಇದಕ್ಕೆ ಸ್ಥಳೀಯ ಮಸೀದಿಗಳು, ದೈವ ದೇವಸ್ಥಾನ, ಖಾಸಗಿ ಸಂಸ್ಥೆಗಳ ಸಹಕಾರ ಪಡೆಯಲಾಗಿದೆ. ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಕಸ ಸಂಗ್ರಹ ವಾಹನಕ್ಕೆ ಚಾಲನೆ ನೀಡಲಾಗಿದೆ. ಹಸಿಕಸ ಗ್ರಾಮದಲ್ಲೇ ಇರುವ ಖಾಸಗಿ ಘಟಕಕ್ಕೆ ನೀಡಲು ಉದ್ದೇಶಿಸಲಾಗಿದ್ದು ಒಣಕಸ ಪಂಚಾಯಿತಿ ಘಟಕದಲ್ಲಿ ನಿರ್ವಹಿಸಲು ಯೋಜನೆ ರೂಪಿಸಲಾಗಿದೆ. ಆದರೆ ಮರುದಿನ ನೂತನ ಆಡಳಿತ ಅಸ್ತಿತ್ವಕ್ಕೆ ಬಂದಿದ್ದು, ಕಸ ಸಂಗ್ರಹ, ಗ್ರಾಮ ಸ್ವಚ್ಛತಾ ಸವಾಲು ನೂತನ ಆಡಳಿತದ ಹೆಗಲ ಮೇಲಿದೆ.

ಎರಡೂವರೆ ವರ್ಷದ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಗ್ರಾಮದ ಅಭಿವೃದ್ಧಿ ಮಾಡಲಾಗಿದೆ. ಗ್ರಾಮ ಪಂಚಾಯಿತಿಗೆ ರಾಜ್ಯದ ಎಲ್ಲೂ ಇಲ್ಲದಂಥ ಕಟ್ಟಡ, ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದ್ದು ಸ್ವಚ್ಛ ಸಂಕೀರ್ಣ ನಿರ್ಮಿಸಿ ಜಾಗೃತಿಗಾಗಿ ಫಲಕಗಳನ್ನು ಅಳವಡಿಸಲಾಗಿದೆ. ಪಂಚಾಯಿತಿಗೆ ಬರುವ ತೆರಿಗೆ ಹಣ ಬಳಸದೆ ದಾನಿಗಳ ನೆರವು ಯಾಚಿಸಲಾಗಿದೆ. ಇದನ್ನು ಮುಂದುವರಿಸುವ ಜವಾಬ್ದಾರಿ ನೂತನ ಆಡಳಿತಕ್ಕಿದ್ದು ಸಹಕಾರ ನೀಡುತ್ತೇನೆ.
ಬದ್ರುದ್ದೀನ್ ಫರೀದ್ ನಗರ, ನಿಕಟಪೂರ್ವ ಅಧ್ಯಕ್ಷ, ಹರೇಕಳ ಗ್ರಾಪಂ

ಈಗಾಗಲೇ ಗ್ರಾಮಕ್ಕೆ ಅಭಿವೃದ್ಧಿಯಲ್ಲಿ ಹೆಸರು ಬಂದಿದೆ, ಸ್ವಚ್ಛತೆಗಾಗಿ ಸಂಕೀರ್ಣ ಇದ್ದು ಮನೆಗಳಿಗೆ ಬಕೆಟ್, ಬೋರೋ ಬ್ಯಾಗ್ ವಿತರಿಸಲಾಗಿದೆ. ಸೋಮವಾರದಿಂದ ಕಸ ಸಂಗ್ರಹ ಆರಂಭಗೊಳ್ಳಲಿದ್ದು ಸುಸೂತ್ರವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಪ್ರತಿ ಮನೆಯವರೂ ಹಸಿ ಮತ್ತು ಒಣಕಸ ಬೇರ್ಪಡಿಸಿ ಕೊಡಲು ಸೂಚನೆ ನೀಡಲಾಗಿದೆ.
ಮುತ್ತಪ್ಪ ಡಿ, ಅಭಿವೃದ್ಧಿ ಅಧಿಕಾರಿ, ಹರೇಕಳ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net