ಸ್ವಾಭಿಮಾನದ ಮಾದರಿ ಸಂಘವನ್ನಾಗಿಸಿ, ವಸತಿ ಸಚಿವ ವಿ.ಸೋಮಣ್ಣ ಅಭಿಮತ, ವೀರಶೈವ ಲಿಂಗಾಯತ ಪತ್ತಿನ ಸಂಘ ಉದ್ಘಾಟನೆ

29 DBP 3 Vira
Published on

ದೊಡ್ಡಬಳ್ಳಾಪುರ: ಮುಲಾಜಿಗೆ ಒಳಗಾಗದೆ ಬಡವರ, ರೈತರ ಅಭಿವೃದ್ಧಿಗಾಗಿ ಶ್ರಮಿಸುವ ಸ್ವಾಭಿಮಾನದ ಮಾದರಿ ಸಹಕಾರ ಸಂಘವನ್ನಾಗಿ ವೀರಶೈವ ಲಿಂಗಾಯತ ಪತ್ತಿನ ಸಂಘವನ್ನಾಗಿಸುವ ಹೊಣೆಗಾರಿಕೆ ಆಡಳಿತ ಮಂಡಳಿ ಮೇಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ನಗರದ ಪಿಎಲ್‌ಡಿ ಬ್ಯಾಂಕ್ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭವಾಗುತ್ತಿರುವ ವೀರಶೈವ ಲಿಂಗಾಯತ ಪತ್ತಿನ ಸಹಕಾರ ಸಂಘದ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ವೀರಶೈವ ಲಿಂಗಾಯತ ಸಂಘದ ಅಭಿವೃದ್ಧಿಯ ದೃಷ್ಟಿಕೋನ ಸದಸ್ಯರಲ್ಲಿ ಇರಬೇಕಿದೆ. ಮುಲಾಜಿಗೆ ಒಳಗಾದಲ್ಲಿ ಸಂಘದ ಏಳಿಗೆ ಸಾಧ್ಯವಿಲ್ಲ ಎಂಬ ಕುರಿತು ಮುಂಜಾಗ್ರತೆ ವಹಿಸುವುದು, ಸಹಬಾಳ್ವೆ, ಕಾರ್ಯತತ್ಪರತೆ, ನಿಷ್ಟೂರತೆ ಮೈಗೂಡಿಸಿಕೊಂಡಲ್ಲಿ ಕೆಲವೇ ವರ್ಷಗಳಲ್ಲಿ ರಾಜ್ಯದ ಮಾದರಿ ಸಂಘವನ್ನಾಗಿಸಬಹುದಾಗಿದೆ ಎಂದರು.

ಯಡಿಯೂರಪ್ಪ ನೇತೃತ್ವದ ಸರ್ಕಾರ ದೊಡ್ಡಬಳ್ಳಾಪುರ ತಾಲೂಕಿಗೆ 500 ಮನೆಗಳ ನಿರ್ಮಾಣಕ್ಕೆ 27 ಕೊಟಿ ರೂ. ಅನುದಾನ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ, ಮುಂದಿನ ಹಂತವಾಗಿ ಮತ್ತೆ 500 ಮನೆಗಳನ್ನು ನೀಡಲು ಮುಂದಾಗಿದೆ, ನೆರೆ ಹಾವಳಿ ನಿರ್ವಹಣೆ, ರೈತರಿಗೆ ಪ್ರೋತ್ಸಾಹಧನ, ಮತ್ತಿತರ ಜನಪರ ಕಾರ್ಯಗಳ ಮೂಲಕ ರಾಜ್ಯ ಸರ್ಕಾರ ಜನಮನಗಳಿಸುತ್ತಿದೆ ಎಂದರು.

ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಮಾತನಾಡಿ, ತಾಲೂಕಿನ ಅಭಿವೃದ್ಧಿಗೆ ಯಡಿಯೂರಪ್ಪ ಅವರ ಕೂಡುಗೆ ಅಪಾರ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಅನುದಾನ ನೀಡಿದ್ದಾರೆ, ಅವರ ಅನುದಾನಗಳಿಂದಲೇ ತಾಲೂಕು ಇಷ್ಟು ಅಭಿವೃದ್ಧಿಗೊಳ್ಳಲು ಸಾಧ್ಯವಾಗಿದೆ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯದಲ್ಲಿ ಸಹಕಾರಿ ಸಂಘಗಳ ಇತಿಹಾಸವೇ ಕಣ್ಣಮುಂದಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ನಡುವೆಯೂ ಬಡವರ, ರೈತರ ಅನುಕೂಲಕ್ಕಾಗಿ ಶ್ರಮಿಸುತ್ತಿರುವ ಸಹಾಕಾರಿ ಸಂಘಗಳ ಸಾಲಿಗೆ ದೊಡ್ಡಬಳ್ಳಾಪುರದ ವೀರಶೈವ ಲಿಂಗಾಯತ ಪತ್ತಿನ ಸಹಕಾರ ಸಂಘ ಸಹ ಆಸರೆಯಾಗಿದೆ ಎಂದರು.

ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಸಂಘದ ಅಧ್ಯಕ್ಷ ಪುಟ್ಟಬಸವರಾಜು, ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್, ನೆಲಮಂಗಲ ಮಾಜಿ ಶಾಸಕ ನಾಗರಾಜ್ ಮತ್ತಿತರರಿದ್ದರು.

ಬಿಜೆಪಿ ಆಡಳಿತಕ್ಕೆ ಎಚ್‌ಡಿಕೆ ಕಾರಣ!: ಮಿಣಿಮಿಣಿ ಪೌಡರ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಬಿಜೆಪಿಯವರೇ ಕಾರಣ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಉತ್ತರಿಸಿದ ವಿಜಯೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮಾಜಿ ಸಿಎಂ ಕುಮಾರಸ್ವಾಮಿ ಕಾರಣ, ಅವರ ವಿರೋಧಿ ಆಡಳಿತ ನೀತಿಯಿಂದ ಬೇಸತ್ತು ಶಾಸಕರು ರಾಜೀನಾಮೆ ನೀಡಿದರು. ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯಲ್ಲ ಮಿಣಿಮಿಣಿ ಕುಮಾರಸ್ವಾಮಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಕಿಚಾಯಿಸಿದರು.

ಯಡಿಯೂರಪ್ಪ ಹೇಳಿದನ್ನು ಮಾಡೇ ತೀರುವ ವ್ಯಕ್ತಿ, ಸಂಪುಟ ವಿಸ್ತರಣೆಯಲ್ಲಿ ಈಗಾಗಲೇ ಕೇಂದ್ರದ ಸಲಹೆ ಮೇರೆಗೆ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ. ವಿ.ಸೋಮಣ್ಣ ವಸತಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net