

ಹುಬ್ಬಳ್ಳಿ: ಸ್ವಾಭಿಮಾನಿ ಕನ್ನಡಿಗರ ಸಂಕಲ್ಪ ನಡಿಗೆ ಎಂಬ ಕಾರ್ಯಕ್ರಮವನ್ನು ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅ. 10ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಉತ್ತರ ಕರ್ನಾಟಕ ಉಸ್ತುವಾರಿ ಅಧ್ಯಕ್ಷ ಅಶೋಕಕುಮಾರ್ ಬೆಸ್ತ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬುದನ್ನು ಸಾರುವುದು ಹಾಗೂ ನಾಡು-ನುಡಿ, ನೆಲ- ಜಲ ಸಂರಕ್ಷಣೆಯ ಸಂಕಲ್ಪಕ್ಕಾಗಿ ಅ. 10ರಂದು ಬೆಳಗ್ಗೆ 10ಕ್ಕೆ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಆವರಣದಿಂದ ನಡಿಗೆ ಹೊರಟು ಚನ್ನಮ್ಮ ವೃತ್ತದ ಮೂಲಕ ಸಾಗಿ ತಹಸೀಲ್ದಾರ್ ಕಚೇರಿವರೆಗೆ ಸಾಗಲಿದೆ ಎಂದರು.
ಉದ್ಯೋಗ ನಮ್ಮ ಹಕ್ಕು ಎಂಬ ಧ್ಯೇಯ ವಾಕ್ಯದಡಿ ನಡಿಗೆ ನಡೆಯಲಿದೆ. ಸಂಟನೆಯ ವಿವಿಧ ಜಿಲ್ಲೆಗಳ ಅಧ್ಯಕ್ಷರು ಹಾಗೂ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಳ್ಳುವರು. ಕನ್ನಡಿಗರ ಬೇಡಿಕೆಗಳನ್ನು ಈಡೇರಿಸುವಂತೆ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ರಾಜ್ಯದಲ್ಲಿ ಕನ್ನಡಿಗರು ಸ್ವಾಭಿಮಾನಿಗಳಾಗಿ ಜೀವನ ಸಾಗಿಸಲು ಮತ್ತು ರಾಜ್ಯದ ಉದ್ಯೋಗಗಳು ಕನ್ನಡಿಗರಿಗೆ ಮೀಸಲಿಡಬೇಕೆಂದು ಒತ್ತಾಯಿಸಿ ಕನ್ನಡಿಗರ ಸಂಕಲ್ಪ ನಡಿಗೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.