ಯಕ್ಷಗಾನಕ್ಕಿದೆ ಮಾನವೀಯ ಸಂಬಂಧ ಬೆಸೆಯುವ ಶಕ್ತಿ

Yakshagana 1
Published on

ಐಜಿಪಿ ಡಾ.ರವಿಕಾಂತೇಗೌಡ ಅಭಿಪ್ರಾಯ

ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವ

ವಿಜಯವಾಣಿ ಸುದ್ದಿಜಾಲ ಉಡುಪಿ

ನಾಡಿನ ಹೆಮ್ಮೆಯ ಕಲೆಯಾಗಿರುವ ಯಕ್ಷಗಾನಕ್ಕೆ 800 ವರ್ಷದ ಪರಂಪರೆಯಿದೆ. ಸಾಹಿತ್ಯ, ಸಂಗೀತ, ನೃತ್ಯ, ಮಾತುಗಾರಿಕೆ, ಅಭಿನಯ ಇವೆಲ್ಲವನ್ನೂ ಒಳಗೊಂಡ ಈ ಕಲೆಗೆ ಮಾನವೀಯ ಸಂಬಂಧ ಗಟ್ಟಿಯಾಗಿ ಬೆಸೆಯುವ ಶಕ್ತಿಯಿದೆ ಎಂದು ಪೂರ್ವ ವಲಯ ಪೊಲೀಸ್​ ಮಹಾನಿರೀಕ್ಷಕ ಡಾ. ಬಿ.ಆರ್​. ರವಿಕಾಂತೇಗೌಡ ಅಭಿಪ್ರಾಯಪಟ್ಟರು.

ಸಾಲಿಗ್ರಾಮ ಮಕ್ಕಳ ಮೇಳ 50 ವರ್ಷ ಪೂರೈಸಿದ ಸವಿನೆನಪಿಗಾಗಿ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಸೆಪ್ಟೆಂಬರ್​ 21ರಂದು ಆಯೋಜಿಸಿದ್ದ ಸುವರ್ಣ ಪರ್ವ-13 ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಗೌರವ ಪ್ರಶಸ್ತಿ ಪ್ರದಾನ

222
ಮೂರು ದಶಕಗಳಿಂದ ಯಕ್ಷಗಾನದಲ್ಲಿ ತೊಡಗಿಕೊಂಡು ದಾವಣಗೆರೆಯಲ್ಲಿ ನೂರಾರು ವಿದ್ಯಾರ್ಥಿಗಳು, ಯುವಕ-ಯುವತಿಯರಿಗೆ ಯಕ್ಷಗಾನ ಕಲಿಸಿ ಅವರಿಂದ ಪ್ರದರ್ಶನ ಮಾಡಿಸುತ್ತಿರುವ ಯಕ್ಷಗುರು ಹಟ್ಟಿಯಂಗಡಿ ಆನಂದ ಶೆಟ್ಟಿ ಅವರಿಗೆ ಸುವರ್ಣ ಪರ್ವ ಗೌರವ ಪ್ರಶಸ್ತಿ ನೀಡಲಾಯಿತು. ಬೇಳೂರು ಸಂತೋಷ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು.

ಯಕ್ಷಕಲಾ ಸಾಹಿತಿ, ಮೇಳದ ಉಪಾಧ್ಯಕ್ಷ ಎಚ್​.ಜನಾರ್ದನ ಹಂದೆ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ತೊಗಲೇರಿ, ಯಕ್ಷರಂಗ-ಯಕ್ಷಗಾನ ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಪ್ರಭಾಕರ ಶೆಟ್ಟಿ, ಕೆ.ಸೋಮಶೇಖರ ನಾಯರಿ, ಮೋತಿ ಪರಮೇಶ್ವರ ರಾವ್​, ಶೈಲೇಶ ಎನ್​. ಶೆಟ್ಟಿ, ಎಚ್​.ಜಿ. ಉಮೇಶ, ಕೆ.ವಿಶ್ವನಾಥ ಬಿಲ್ಲವ ಉಪಸ್ಥಿತರಿದ್ದರು.

Yakshagana 2
ಕಲಾವಿದೆ ಕೆ.ಭಾರ್ಗವಿ ಮಂಜುನಾಥ ಪ್ರಾರ್ಥಿಸಿದರು. ಮೇಳದ ಕಾರ್ಯದರ್ಶಿ ಹಾಗೂ ಕಲಾವಿದ ಎಚ್​.ಸುಜಯೀಂದ್ರ ಹಂದೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಲಿಗ್ರಾಮ ಮಕ್ಕಳ ಮೇಳದ 50 ವರ್ಷಗಳ ಪಯಣದ ಹಾದಿ ವಿವರಿಸಿದರು.

ಯಕ್ಷಗಾನ ಕಲಾವಿದ ಕೆ.ರಾಘವೇಂದ್ರ ನಾಯರಿ ಕಾರ್ಯಕ್ರಮ ಸಂಯೋಜಿಸಿದರು. ಮಾಧುರಿ ಶ್ರೀರಾಮ್​ ಕಾರ್ಯಕ್ರಮ ನಿರೂಪಿಸಿದರು.

ರಂಗಭೂಮಿ ಕಲಾವಿದ ಪಿ.ಕೆ. ಖಾದರ್​ ಜಾನಪದ ಗೀತೆ ಹಾಗೂ ವಿದುಷಿ ರಕ್ಷಾ ರಾಜಶೇಖರ ಸಕ್ಕಟ್ಟು ಅವರ ವಿದ್ಯಾನಿಲಯದ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಪ್ರದರ್ಶಿಸಿದರು. ಉತ್ತರ ಕನ್ನಡ ಜಿಲ್ಲೆಯ ಜಲವಳ್ಳಿ ವಿದ್ಯಾಧರ ರಾವ್​ ಸಾರಥ್ಯದ ಕಲಾಧರ ಯಕ್ಷರಂಗ ಬಳಗದ ನೇತೃತ್ವದಲ್ಲಿ ಖ್ಯಾತ ಕಲಾವಿದರ ಒಗ್ಗೂಡುವಿಕೆಯಲ್ಲಿ ಶ್ರೀ ರಾಮಾಂಜನೇಯ ಯುದ್ಧ ಯಕ್ಷಗಾನ ಪ್ರದರ್ಶನಗೊಂಡಿತು.

ಒಬ್ಬ ವ್ಯಕ್ತಿಯೇ 50 ವರ್ಷ ಪೂರ್ಣಗೊಳಿಸುವು ಕಷ್ಟಸಾಧ್ಯ. ಅಂತದ್ದರಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕದ್ವಯರಾದ ಕಾರ್ಕಡ ಶ್ರೀನಿವಾಸ ಉಡುಪ ಹಾಗೂ ಎಚ್.ಶ್ರೀಧರ ಹಂದೆ ಅವರು 1975ರಲ್ಲಿ ಸ್ಥಾಪಿಸಿದ ಸಾಲಿಗ್ರಾಮ ಮಕ್ಕಳ ಮೇಳವು ಯಕ್ಷಗಾನದ ಮೂಲ ಪರಂಪರೆ ಉಳಿಸಿಕೊಂಡು 50 ವರ್ಷ ಪೂರೈಸಿರುವುದು ನಿಜಕ್ಕೂ ಶ್ಲಾಘನೀಯ. | ಡಾ. ಬಿ.ಆರ್. ರವಿಕಾಂತೇಗೌಡ. ಪೂರ್ವ ವಲಯ ಪೊಲೀಸ್​ ಮಹಾನಿರೀಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net